ವಿಶ್ವವಿದ್ಯಾನಿಲಯದ ಸ್ವರೂಪಗಳಿಲ್ಲದ ಕಾಲೇಜುಗಳನ್ನು ವಿವಿಗಳಾಗಿ ಪರಿವರ್ತಿಸಬಾರದು

Update: 2020-01-27 18:15 GMT

ಮಂಡ್ಯ ಏಕೀಕೃತ ವಿಶ್ವವಿದ್ಯಾಲಯವಾಗಿ ಪರಿವರ್ತಿತವಾಗಿದ್ದ ಮಂಡ್ಯ ಮಹಾವಿದ್ಯಾನಿಲಯ ಸ್ವಾಯತ್ತ ಕಾಲೇಜು ಅನೇಕ ಗೊಂದಲಗಳ ಗೂಡಾಗಿದೆ. ವಿವಿ ವಿಶೇಷಾಧಿಕಾರಿಗಳಾಗಿ ನೇಮಕವಾಗಿದ್ದವರು ಅಕ್ರಮ ನೇಮಕಾತಿ ನಡೆಸಿದ್ದರೆಂದು ಕಾಲೇಜು ಶಿಕ್ಷಣ ಇಲಾಖೆ ಅವರನ್ನು ವಿವಿ ವಿಶೇಷಾಧಿಕಾರಿ ಹುದ್ದೆಯಿಂದ ಬಿಡುಗಡೆಗೊಳಿಸಿ ಮಾತೃಸಂಸ್ಥೆಗೆ ತೆರಳುವಂತೆ ಆದೇಶ ಮಾಡಿದೆ. ಈ ಮೂಲಕ ವಿಶ್ವವಿದ್ಯಾನಿಲಯಗಳ ಯಾವ ಲಕ್ಷಣ ಅಥವಾ ಸ್ವರೂಪಗಳಿಲ್ಲದ ಕಾಲೇಜುಗಳನ್ನು ವಿಶ್ವವಿದ್ಯಾನಿಲಯಗಳಾಗಿ ಪರಿವರ್ತಿಸುವ ಬಗೆಯೇ ಅನೇಕ ಪ್ರಶ್ನೆಗಳನ್ನು ಮೂಡಿಸಿದೆ. ಮಂಡ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜನ್ನು ಕಾಲೇಜು ಶಿಕ್ಷಣ ಇಲಾಖೆ ರೂಸಾ ನಿಯಮದಂತೆ ಮಂಡ್ಯ ಏಕೀಕೃತ ವಿವಿಯಾಗಿ ಘೋಷಣೆ ಮಾಡಿತು. ರೂಸಾ ನಿಮಯಗಳ ಪ್ರಕಾರ ಸ್ವ್ವಾಯತ್ತ ಕಾಲೇಜುಗಳನ್ನು ವಿಶ್ವವಿದ್ಯಾನಿಲಯಗಳಾಗಿ ಮಾರ್ಪಡಿಸಿದರೆ ಅಥವಾ ಮೇಲ್ದರ್ಜೆಗೇರಿಸಿದರೆ 55 ಕೋಟಿ ರೂ. ಅನುದಾನ ನೀಡಲಾಗುವುದು. ಈ ಹಿನ್ನೆಲೆಯಲ್ಲಿ 2019ರಲ್ಲಿ ರಾಜ್ಯ ಸರಕಾರ ಬೆಂಗಳೂರಿನ ಮಹಾರಾಣಿ ಕಾಲೇಜು ಮತ್ತು ಮಂಡ್ಯ ಬಾಲಕರ ಮಹಾವಿದ್ಯಾಲಯವನ್ನು ವಿವಿಗಳಾಗಿ ಪರಿವರ್ತಿಸಲಾಯಿತು.

ಈ ಕಾಲೇಜುಗಳನ್ನು ವಿವಿಗಳಾಗಿ ಪರಿವರ್ತಿಸಲಾಯಿತೇ ಹೊರತು ಇವು ಯಾವುದೇ ರೀತಿಯಲ್ಲೂ ವಿವಿ ಸ್ವರೂಪಗಳನ್ನು ಪಡೆಯಲಿಲ್ಲ. ಮೊದಲಿಗೆ ಸರಕಾರ ಈ ಕಾಲೇಜುಗಳನ್ನು ವಿವಿಗಳಾಗಿ ಮಾಡಿದಾಗ ಅವುಗಳಿಗೆ ಬಹುಮುಖ್ಯವಾಗಿ ಬೇಕಾದ ಸಿಂಡಿಕೇಟ್ ಮತ್ತು ಶೈಕ್ಷಣಿಕ ಸಲಹಾ ಮಂಡಳಿ (ಅಕಾಡಮಿಕ್ ಕೌನ್ಸಿಲ್)ಗಳನ್ನು ರಚಿಸಲಿಲ್ಲ. ಒಂದು ವಿಶ್ವವಿದ್ಯಾನಿಲಯಕ್ಕೆ ಬೇಕಾಗಿರುವ ಸ್ವಾಯತ್ತತೆಯನ್ನು ಮತ್ತು ಆಡಳಿತ ನಡೆಸುವ ಸ್ವರೂಪಗಳನ್ನು ನಿರ್ಧರಿಸುವ ಸಿಂಡಿಕೇಟ್ ಸದಸ್ಯ ಸಮಿತಿಯನ್ನು ಸರಕಾರ ನೇಮಿಸಲಿಲ್ಲ. ಇನ್ನು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಗಳ ನೇಮಕವನ್ನು ಕೂಡ ಕಾಲೇಜು ಶಿಕ್ಷಣದ ಮಟ್ಟದಲ್ಲೇ ನಡೆಸಲಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸಿರುವ ಯಾವ ಅನುಭವಗಳಿಲ್ಲದ ಪದವಿ ಕಾಲೇಜುಗಳ ಪ್ರಾಂಶುಪಾಲರನ್ನು ಅಥವಾ ಹಿರಿಯ ಪ್ರಾಧ್ಯಾಪಕರನ್ನು ವಿವಿಯನ್ನು ಮುನ್ನಡೆಸಲು ವಿಶೇಷಾಧಿಕಾರಿಗಳನ್ನಾಗಿ ನೇಮಿಸಲಾಯಿತು. ಇದು ಈ ಹೊಸ ವಿಶ್ವವಿದ್ಯಾನಿಲಯಗಳಿಗೆ ಒಂದು ಸ್ಪಷ್ಟ ರೂಪುರೇಷೆಗಳನ್ನು ರೂಪಿಸಲು ಬೇಕಾದ ಮನೋಭೂಮಿಕೆಯನ್ನು ಇಲ್ಲವಾಗಿಸಿತು.

ಇನ್ನು ಈ ವಿವಿಗಳಿಗೆ ಹೊಸ ಅಧ್ಯಾಪಕ ವರ್ಗವನ್ನು ನೇಮಕ ಮಾಡಲು ಯಾವ ಸಮಿತಿಯನ್ನು ರಚಿಸದೆ ಈ ಕಾಲೇಜುಗಳಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಧ್ಯಾಪಕ ವರ್ಗ ಮತ್ತು ಅಧ್ಯಾಪಕೇತರ ವರ್ಗವನ್ನು ಮುಂದುವರಿಸಲಾಯಿತು. ಇದು ಈ ವಿವಿಗಳಿಗೆ ಅಧ್ಯಾಪಕರಾಗಲೂ ರಾಜ್ಯದ ಅನೇಕ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅನೇಕರು ವರ್ಗಾವಣೆ ಅಥವಾ ನಿಯೋಜನೆಗೊಳ್ಳಲು ಪ್ರಯತ್ನಿಸಿ ಒಂದಷ್ಟು ಜನ ಯಶಸ್ವಿಯಾದರು ಕೂಡ. ಹಾಗೇ ಈ ಹೊಸ ವಿವಿಗಳಿಗೆ ಸೇರಿದರೆ ಮುಂದೆ ಖಾಯಂ ಆಗುವ ಊಹೆಯ ಮೇಲೆ ಅನೇಕರು ಅತಿಥಿ ಉಪನ್ಯಾಸಕರಾಗಿ ಸೇರಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದರು. ಈಗ ಈ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿಗಳಾಗಿವೆ. ವಿವಿಗಳಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರ ನೇಮಕಾತಿಗೆ ಕೆಲ ಮಾನದಂಡಗಳಿವೆ. ಸಂಶೋಧನೆ ಮತ್ತು ಹೊಸ ಜ್ಞಾನ ಸೃಷ್ಟಿ. ಈ ಯಾವ ಮಾನದಂಡಗಳನ್ನು ಪರಿಗಣಿಸದೆ ಅಲ್ಲಿನ ಅಧ್ಯಾಪಕರನ್ನು ಹೊಸ ವಿವಿಯಲ್ಲಿ ಮುಂದುವರಿಸಲಾಗಿದೆ. ಇವರು ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಅದರ ನೀತಿ ನಿಯಮಗಳಿಗೆ ಒಳಪಟ್ಟವರು. ಇದು ಕರ್ನಾಟಕ ವಿಶ್ವವಿದ್ಯಾನಿಲಯ ಗಳ ಕಾಯ್ದೆಗಿಂತ ಭಿನ್ನ ಮತ್ತು ಅಧ್ಯಾಪಕರಿಗೆ ವಿವಿಗಳಲ್ಲಿ ಸಿಗುವ ಸ್ವಾತಂತ್ರ ಇಲ್ಲಿ ಇಲ್ಲ. ಈ ಕಾಲೇಜುಗಳನ್ನು ವಿವಿಗಳಾಗಿ ಪರಿವರ್ತಿಸಲು 55 ಕೋಟಿ ರೂ. ಅನುದಾನ ನೀಡುವ ರೂಸಾ ನಂತರ ಇವುಗಳ ಬೆಳವಣಿಗೆಗೆ ಹೇಗೆ ಸಹಕರಿಸುವುದು ಎನ್ನುವುದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. 55 ಕೋಟಿ ರೂ. ಅನುದಾನ ನೀಡಿಬಿಟ್ಟರೆ ವಿಶ್ವವಿದ್ಯಾನಿಲಯಕ್ಕೆ ಸಾಕೇ? ಅದನ್ನು ಬೌದ್ಧಿಕವಾಗಿ ಮತ್ತು ಭೌತಿಕವಾಗಿ ಹೇಗೆ ಬೆಳೆಸಬೇಕು ಎನ್ನುವ ಸ್ಪಷ್ಟ ಮುಂದಾಲೋಚನೆ ಇಲ್ಲ.

ಕರ್ನಾಟಕದ ಮತ್ತು ಕೇಂದ್ರ ಸರಕಾರದ ವಿಶ್ವವಿದ್ಯಾನಿಲಯ ಕಾಯ್ದೆಗಳ ಮೂಲಕ ರೂಪಿಸಲ್ಪಟ್ಟ ವಿವಿಗಳಿಗೆ ಒಂದಷ್ಟು ಸ್ಪಷ್ಟ ಮುಂದಾಲೋಚನೆಗಳಿರುತ್ತವೆ ಆದರೆ ಕಾಲೇಜುಗಳನ್ನು ವಿವಿಗಳಾಗಿ ಪರಿವರ್ತಿಸುವಾಗ ಅಗತ್ಯವಿರುವ ವಿವಿಯ ಸ್ವರೂಪಗಳನ್ನು ರೂಪಿಸದೆ ಕೇವಲ ಅನುದಾನದ ಹಿನ್ನ್ನೆಲೆಯಲ್ಲಿ ವಿವಿಗಳಾಗಿ ಪರಿವರ್ತಿಸಿದರೆ ಅದರಿಂದ ಅನುಕೂಲಗಳಿಗಿಂತ ಅನನೂಕೂಲಗಳೇ ಹೆಚ್ಚು. ಮಂಡ್ಯದಲ್ಲಿ ಮೈಸೂರು ವಿವಿ ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತರ ಕೇಂದ್ರವಿತ್ತು. ಈ ಕೇಂದ್ರವನ್ನು ಒಂದು ಸಂಪೂರ್ಣ ಉತ್ತಮ ವಿವಿಯಾಗಿ ಸರಕಾರ ರೂಪಿಸಬಹುದಿತ್ತು. ಒಂದು ವಿವಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳು ಈ ಕೇಂದ್ರದಲ್ಲಿತ್ತು ಮತ್ತು ವಿವಿಯಲ್ಲಿ ಅನುಭವಿ ಅಧ್ಯಾಪಕ ವರ್ಗವಿತ್ತು. ಆದರೆ ಸರಕಾರ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವನ್ನು ವಿವಿಯಾಗಿ ಪರಿವರ್ತಿಸದೆ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ವಿವಿಯ ಯಾವ ಸ್ವರೂಪಗಳೂ ಇಲ್ಲದ ಮಂಡ್ಯ ಮಹಾವಿದ್ಯಾಲಯವನ್ನು ವಿವಿಯಾಗಿ ಏಕೆ ಪರಿವರ್ತಿಸಿತು ತಿಳಿಯದಾಗಿದೆ.

ಉನ್ನತ ಶಿಕ್ಷಣ ಸಂಬಂಧ ನೀತಿ ನಿಯಮಗಳನ್ನು ರೂಪಿಸುವ ಮತ್ತು ರೂಸಾ ಅನುದಾನ ಸಂಬಂಧ ಸಲಹೆ ಸೂಚನೆ ನೀಡುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸ್ವಾಯತ್ತ ಕಾಲೇಜುಗಳನ್ನು ವಿವಿಗಳಾಗಿ ಪರಿವರ್ತಿಸುವ ಬದಲು ರಾಜ್ಯದ ಅನೇಕ ಕಡೆಗಳಲ್ಲಿ ಈಗಾಗಲೇ ಇರುವ ರಾಜ್ಯ ವಿಶ್ವವಿದ್ಯಾನಿಲಯಗಳ ಸ್ನಾತಕೋತ್ತರ ಕೇಂದ್ರಗಳನ್ನು ಉದಾಹರಣೆಗೆ ಮೈಸೂರು ವಿವಿ ಹಾಸನದ ಹೇಮಗಂಗೋತ್ರಿ ಅಥವಾ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರಗಳನ್ನು ಆಯಾಯ ಜಿಲ್ಲೆಗಳ ವಿಶ್ವವಿದ್ಯಾನಿಲಯಗಳನ್ನಾಗಿ ರೂಪಿಸಲು ಕ್ರಮವಹಿಸಬೇಕು. ನ್ಯಾಕ್‌ನಿಂದ ಸ್ವಾಯತ್ತ ಸಂಸ್ಥೆ ಅಂಗೀಕಾರ ಪಡೆದ ಬಹುತೇಕ ಕಾಲೇಜುಗಳು ಸೂಕ್ತವಾಗಿ ನಡೆಯದೆ ಇಂದು ಮತ್ತೆ ವಿಶ್ವವಿದ್ಯಾನಿಲಯಗಳ ಸಂಯೋಜಿತ ಕಾಲೇಜುಗಳಾಗಿ ಮಾರ್ಪಟ್ಟಿವೆ.

ಸ್ವಾಯತ್ತತೆ ಪಡೆದ ಕಾಲೇಜುಗಳು ಯಾವ ರೀತಿಯ ಹೊಸ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ ಇವುಗಳಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಅನುಕೂಲವಾಗಿದೆ. ಸ್ವಾಯತ್ತ ಪಡೆದ ಕಾಲೇಜುಗಳ ಶೈಕ್ಷಣಿಕ ವೆಚ್ಚಗಳನ್ನು ಹೇಗೆ ಭರಿಸಲಾಗುತ್ತಿದೆ ಮತ್ತು ಸ್ವಾಯತ್ತತೆ ಪಡೆದ ಕಾಲೇಜುಗಳು ಸಂಪೂರ್ಣ ಮುಕ್ತವಾಗಿ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಲು ಶಕ್ತವಾಗಿವೆ ಎನ್ನುವ ಬಗ್ಗೆ ನಮ್ಮಲ್ಲಿ ಸೂಕ್ತ ಚರ್ಚೆ ನಡೆದಿಲ್ಲ. ಸ್ವಾಯತ್ತೆಯನ್ನು ನೀಡುವುದು ಒಂದು ರೀತಿ ಖಾಸಗೀಕರಣವನ್ನು ಪ್ರೋತ್ಸಾಹಿಸುವ ದಾರಿ ಎನ್ನುವ ವಾದವಿದೆ. ಇವತ್ತಿಗೂ ಮಂಡ್ಯ ವಿವಿ ಅಂತರ್ಜಾಲ ತಾಣ (ವೆಬ್‌ಸೈಟ್) ರೂಪಿಸಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬೃಹತ್ ಗ್ರಂಥಾಲಯವಾಗಲಿ, ಕಂಪ್ಯೂಟರ್ ಕೇಂದ್ರವಾಗಲಿ, ಸೂಕ್ತ ಮೈದಾನವಾಗಲಿ, ಕ್ಯಾಂಪಸ್ ಗಳಾಗಲಿ ಕಾಲೇಜುಗಳಲ್ಲಿ ಇಲ್ಲ. ಇವುಗಳು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿನ ಕಲಿಕೆಯ ಅನುಭವವನ್ನು ಕೊಡಲಾರವು. ಹೆಸರಿಗೆ ಮಾತ್ರ ವಿಶ್ವವಿದ್ಯಾನಿಲಯ ಆದರೆ ಇದು ಎಲ್ಲಾ ರೀತಿಯಲ್ಲೂ ಮತ್ತೊಂದು ಪದವಿ ಕಾಲೇಜು ಅಷ್ಟೇ.

Writer - ವಸಂತ ರಾಜು ಎನ್.

contributor

Editor - ವಸಂತ ರಾಜು ಎನ್.

contributor

Similar News