ಗಣರಾಜ್ಯೋತ್ಸವದ ಆಚೆಗೂ ಈಚೆಗೂ

Update: 2020-01-27 18:20 GMT

ಈ ದೇಶದ ದಲಿತರು, ದಮನಿತರು, ಆದಿವಾಸಿಗಳು, ಮಹಿಳೆಯರು, ಮುಸ್ಲಿಮ್ ಅಲ್ಪಸಂಖ್ಯಾತರು ಇನ್ನಿತರ ಬಡವರ ಬದುಕಿನಲ್ಲಿ ಸಂವಿಧಾನದ ಆಶಯಗಳಾಗಲೀ, ಕಲಮುಗಳಾಗಲೀ ಈಗಲೂ ಮೂಲಭೂತವಾಗಿ ಅನ್ವಯವಾಗುತ್ತಲೇ ಇಲ್ಲ. ಈ ರೀತಿಯಿರುವವರ ಸಂಖ್ಯೆ ಸುಮಾರು ನಲವತ್ತು ಕೋಟಿಯಷ್ಟಿರಬಹುದು. ಇನ್ನು ಅಲ್ಪಸ್ವಲ್ಪಅನುಕೂಲ ಪಡೆದ ಸಮುದಾಯದವರು ಹತ್ತಾರು ಕೋಟಿಗಳಿರಬಹುದು. ಆದರೆ ಅದು ಮೂಲಭೂತವಾಗಿ ಅವರ ಬದುಕುಗಳಲ್ಲಿ ಬದಲಾವಣೆಗಳನ್ನು ತಂದಿಲ್ಲ ಎನ್ನುವುದನ್ನು ಗಮನಿಸಬೇಕು. ವಸತಿಯಿಲ್ಲದ, ಭೂಮಿಯಿಲ್ಲದ, ಶಿಕ್ಷಣವಿಲ್ಲದ, ಕೊನೆಗೆ ತಮ್ಮ ಅಸ್ತಿತ್ವದ ಬಗ್ಗೆ ಯಾವುದೇ ದಾಖಲೆಗಳು ಕೂಡ ಇಲ್ಲದ ಜನರೇ ದೇಶದ ಶೇ. 35ರಿಂದ ಶೇ.40ರಷ್ಟು ಇದ್ದಾರೆ ಎಂದರೆ ಸಂವಿಧಾನ ಇವರ ಜೀವನದಲ್ಲಿ ಈಗಲೂ ಬದಲಾವಣೆ ತಂದಿಲ್ಲ ಎಂದು ತಾನೆ ಅರ್ಥ.?


ಇಂಡಿಯಾ ದೇಶ ತನ್ನ 71ನೆಯ ಗಣರಾಜ್ಯೋತ್ಸವವನ್ನು ಹಾದು ಹೋಗುತ್ತಿದೆ. 1950 ಜನವರಿ 26ರಂದು ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಇದೊಂದು ಗಣರಾಜ್ಯವೆಂದು ಕರೆಯಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಜೆಗಳ ಸಾರ್ವಭೌಮತ್ವವೇ ನೀತಿಯೆಂದು ಹೇಳಲಾಯಿತು. ಬ್ರಿಟಿಷರ ನೇರ ಆಳ್ವಿಕೆ ಕೊನೆಯಾದ ಆಗಸ್ಟ್ 15, 1947ರಿಂದ 1950ರ ಜನವರಿ 26ರವರೆಗೆ ಯೂನಿಯನ್ ಆಫ್ ಇಂಡಿಯಾ ಎಂದೇ ಕರೆಯಲಾಗಿತ್ತು. ಅವಿರತವಾಗಿ ನಡೆಸಿದ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಬ್ರಿಟಿಷರ ನೇರ ಆಡಳಿತದಿಂದ ಹೊರಬಂದ ನಂತರದ ಈ ಎಪ್ಪತ್ತಮೂರು ವರ್ಷಗಳಲ್ಲೂ ಇಂಡಿಯಾದ ಜನಸಾಮಾನ್ಯರು ನಿರಂತರವಾಗಿ ಹೋರಾಟಗಳಲ್ಲಿರಬೇಕಾದ ಅನಿವಾರ್ಯ ಸ್ಥಿತಿಯನ್ನು ಆಳುವ ಶಕ್ತಿಗಳು ಒಡ್ಡುತ್ತಲೇ ಬಂದಿವೆ.

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಬೇಕಾದರೆ ಜನತೆಯ ಸಕ್ರಿಯ ರಾಜಕೀಯ ಪಾಲ್ಗೊಳ್ಳುವಿಕೆ ಅತ್ಯಗತ್ಯವೆನ್ನುವುದು ನಿಜ. ಆದರೆ ನಮ್ಮ ದೇಶದಲ್ಲಿ ಯಾವ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಬ್ರಿಟಿಷರ ವಿರುದ್ಧ ಹೋರಾಡುತ್ತಾ ಬರಲಾಗಿತ್ತೋ ಮೂಲಭೂತವಾಗಿ ಅವೇ ಕಾರಣಕ್ಕಾಗಿಯೇ ಈಗಲೂ ಹೋರಾಡಬೇಕಾದ ಸ್ಥಿತಿಯೇ ಮುಂದುವರಿದಿದೆ. ಅದು ಭಾರೀ ಕಾರ್ಪೊರೇಟುಗಳ ಹಿಡಿತ, ಭಾರೀ ಆಸ್ತಿವಂತ ವರ್ಗಗಳು ಹಿಡಿತ, ಭಾಷಾ ಹಕ್ಕುಗಳು, ರಾಜ್ಯಗಳ ಹಕ್ಕುಗಳು, ದೇಶದ ಸಾರ್ವಭೌಮತ್ವ, ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು, ಪ್ರಜಾತಾಂತ್ರಿಕ ಹಕ್ಕುಗಳು ಹೀಗೆ ಸಾಗಿ ಇದೀಗ ಜನಸಾಮಾನ್ಯರ ಪೌರತ್ವದ ವಿಚಾರದವರೆಗೂ ಬಂದು ನಿಂತಿದೆ. ಅಂದರೆ ಈ ದೇಶದಲ್ಲಿ ತಲೆತಲಾಂತರದಿಂದ ಬದುಕುತ್ತಾ ದೇಶದ ಸಂಪತ್ತಿನ ಉತ್ಪಾದನೆಯಲ್ಲಿ ಪ್ರಧಾನ ಕೊಡುಗೆ ನೀಡುತ್ತಾ ಬಂದಿರುವ ಬಹುಸಂಖ್ಯಾತ ಜನಸಾಮಾನ್ಯರನ್ನೇ ಆಳುವ ವ್ಯವಸ್ಥೆ ನಿಮ್ಮ ಪೌರತ್ವ ಸಾಬೀತುಪಡಿಸಿದ ನಂತರ ಸೌಲಭ್ಯ ಸವಲತ್ತುಗಳ ಕೊರತೆಗಳ ಬಗ್ಗೆ ಮಾತನಾಡಿ ಎಂದು ನೇರವಾಗಿಯೇ ಹೇಳಲಾರಂಭಿಸಿದೆ. ಹಾಗೇ ನೋಡಿದರೆ ಬ್ರಿಟಿಷ್ ಆಡಳಿತಕ್ಕಿಂತಲೂ ಭಾರೀ ಭೀಕರ ಸ್ಥಿತಿಯನ್ನು ಇಂಡಿಯಾದ ಜನರಿಗೆ ತಂದೊಡ್ಡಲಾಗಿದೆ.

 ಬ್ರಿಟಿಷ್ ವಿರೋಧಿ ಸಂಗ್ರಾಮದ ಮೂಲಭೂತ ವಿಚಾರ ಸ್ವಾತಂತ್ರ್ಯ. ಸ್ವಾತಂತ್ರ್ಯವೆಂದಾಗ ಅದು ಸಮಾನತೆಯ ನೆಲೆಗಟ್ಟಿನಲ್ಲೇ ಎತ್ತಿರುವ ವಿಚಾರವಾಗಿತ್ತು. ಅಂದರೆ ಆರ್ಥಿಕವಾಗಿ ಸಾಮಾಜಿಕವಾಗಿ ಶೋಷಣೆಯಿಲ್ಲದ ವ್ಯವಸ್ಥೆಗಾಗಿನ ಸಂಗ್ರಾಮವಾಗಿತ್ತು ಅದು. ಅದೇ ಕಾರಣಕ್ಕಾಗಿಯೇ ಆಳುವವರು ಎಷ್ಟೇ ಅವಗಣನೆ ಮಾಡಿದರೂ, ತಿರುಚಿ ಅಪಪ್ರಚಾರ ಮಾಡಿದರೂ ಭಗತ್ ಸಿಂಗ್ ಮತ್ತವರ ಸಂಗಾತಿಗಳಂತಹವರು ಜನಸಾಮಾನ್ಯರ ಹೃದಯಗಳಲ್ಲಿ ಈಗಲೂ ನೆಲೆ ನಿಂತಿರುವುದು. ಯಾಕೆಂದರೆ ಅವರು ಇಂಡಿಯಾ ದೇಶದ ಬಹುಸಂಖ್ಯಾತ ಜನಸಾಮಾನ್ಯರಾದ ದಲಿತ ದಮನಿತ, ಬಡ ಇನ್ನಿತರ ಜನಸಮುದಾಯಗಳನ್ನು ಪ್ರತಿನಿಧಿಸಿದ್ದರು. ಆ ಜನರ ಭಾವನೆಗಳನ್ನು ಹಾಗೂ ರಾಜಕೀಯ ಆಶೋತ್ತರಗಳಾದ ಎಲ್ಲಾ ರೀತಿಯ ಶೋಷಣಾಮುಕ್ತ ಸಾಮಾಜಿಕ ವ್ಯವಸ್ಥೆಯೊಂದರ ಸಾಕಾರಕ್ಕಾಗಿ ಅವರು ಕಾರ್ಯ ನಿರ್ವಹಿಸಿ ತಮ್ಮ ಬೆವರು, ರಕ್ತ, ಪ್ರಾಣಗಳನ್ನೇ ಧಾರೆಯೆರೆದಿದ್ದರು.

ಅವರದು ನಿಜವಾದ ಸ್ವಾತಂತ್ರ್ಯದ ವಿಚಾರಧಾರೆಯಾಗಿತ್ತು. ಭಾರೀ ಆಸ್ತಿವಂತರು ಮತ್ತೂ ಆಸ್ತಿವಂತರಾಗುತ್ತಾ ಹೋಗಿ ದೇಶದ ಬಹುಪಾಲು ಆಸ್ತಿ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ಮುಕ್ತವಾಗಿರುವ ವ್ಯವಸ್ಥೆಯೊಂದನ್ನು ಅವರು ಬಯಸಿರಲಿಲ್ಲ. ಆರ್ಥಿಕ ಸಮಾನತೆಯ ನೆಲೆಗಟ್ಟಿನ ಮೇಲೆಯೇ ಸಾಮಾಜಿಕ ಸಮಾನತೆ ನೆಲೆಗೊಳ್ಳಲು ಸಾಧ್ಯವೆಂದು, ಅಂತಹ ಸಮಾನತೆಯ ನೆಲೆಗಟ್ಟಿನ ಮೇಲೆ ಮಾತ್ರ ನಿಜವಾದ ಪ್ರಜಾಪ್ರಭುತ್ವ ನೆಲೆಗೊಂಡು ಅರಳುತ್ತಾ ಬೆಳೆಯಲು ಸಾಧ್ಯವೆಂಬ ಗ್ರಹಿಕೆ ಅವರಿಗೆ ಸ್ಪಷ್ಟವಾಗಿತ್ತು. ಆದರೆ 1947ರಲ್ಲಿ ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ತಮ್ಮ ಕೈಗೆ ಮಾಡಿಕೊಂಡ ಶಕ್ತಿಗಳು ರಾಜಪ್ರಭುತ್ವ ಮತ್ತಿತರ ಊಳಿಗಮಾನ್ಯ ವರ್ಗ ಹಾಗೂ ಭಾರೀ ಆಸ್ತಿವಂತ ವರ್ಗ ಮತ್ತವರ ಪ್ರತಿನಿಧಿಗಳಾಗಿದ್ದರು. ಅವರು ಮೇಲ್ಜಾತಿ ಮೇಲ್ವರ್ಗಗಳು ಇಲ್ಲವೇ ಅವರ ಪ್ರತಿನಿಧಿಗಳಾಗಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಇವರದೇ ರಾಜಕೀಯ ಪಕ್ಷವಾಗಿತ್ತು. ಇಂಡಿಯಾದ ಮೊದಲ ಸಂಸತ್ ಆಗಿ ಕಾರ್ಯ ನಿರ್ವಹಿಸಿದ್ದ ಸಂವಿಧಾನ ರಚನಾ ಸಭೆಯ ಪ್ರಕ್ರಿಯೆಯಲ್ಲಿಯೂ ಅವರದೇ ಪ್ರಾಬಲ್ಯವಾಗಿತ್ತು. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಭೀಮರಾವ್ ಅಂಬೇಡ್ಕರ್‌ರನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಸಂವಿಧಾನ ಕರಡು ರಚನೆಯಲ್ಲಿ ಅಂಬೇಡ್ಕರ್ ರು ಪ್ರಧಾನ ಪಾತ್ರ ನಿರ್ವಹಿಸಿದ್ದರೂ ಸಂವಿಧಾನವನ್ನು ಅಂಗೀಕರಿಸುವ ವಿಚಾರದಲ್ಲಿ ಅಂತಿಮ ತೀರ್ಮಾನದ ಮೇಲುಗೈ ಇದೇ ಮೇಲ್ಜಾತಿ ಮೇಲ್ವರ್ಗಗಳದ್ದಾಗಿತ್ತು. 1947ರ ಜೂನ್ ಸಮಯದಲ್ಲಿ ಪೂರ್ಣವಾಗಿ ಅಸ್ತಿತ್ವಕ್ಕೆ ಬಂದ ಸಂವಿಧಾನ ರಚನಾ ಸಭೆಯ ಒಟ್ಟು 296 ಸದಸ್ಯರಲ್ಲಿ ಇವರದೇ ಪ್ರಾಬಲ್ಯವಾಗಿತ್ತು. ಅದರಲ್ಲಿ 93 ಊಳಿಗಮಾನ್ಯ ರಾಜಸಂಸ್ಥಾನಗಳ ಪ್ರತಿನಿಧಿಗಳಿದ್ದರು. ಉಳಿದವರಲ್ಲಿ ವಿವಿಧ ಪ್ರಾಂತಗಳ ಪ್ರತಿನಿಧಿಗಳಿದ್ದರು. ಅದರಲ್ಲೂ ಶೇ. 63ರಷ್ಟು ಪ್ರತಿನಿಧಿತ್ವ ಇದ್ದ ಕಾಂಗ್ರೆಸ್‌ನ ಮೇಲುಗೈ ಇತ್ತು. ಇದರಲ್ಲಿ ಪಾಕಿಸ್ತಾನದೊಂದಿಗೆ ಸೇರಿಕೊಳ್ಳದ ಮುಸ್ಲಿಮ್ ಲೀಗ್‌ನ ಪ್ರತಿನಿಧಿಗಳಿದ್ದರೂ ಅವರೂ ಕೂಡ ಆಸ್ತಿವಂತ ವರ್ಗದ ಹಿನ್ನೆಲೆಯವರೇ ಆಗಿದ್ದರು. ಇನ್ನು ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿತ್ವ ಇದ್ದರೂ ಅದು ನಿರ್ಣಾಯಕ ಪಾತ್ರ ವಹಿಸುವಂತಹ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೆ ಅದು ಕಾಂಗ್ರೆಸ್‌ನ ಒಂದು ಅಂಗದಂತೆಯೇ ಆಗ ಕಾರ್ಯ ನಿರ್ವಹಿಸುತ್ತಿತ್ತು.

ನಮ್ಮ ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಯೋಜನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ನಮ್ಮ ದೇಶ ಇಂದು ತಲುಪಿರುವ ಮೂಲಭೂತ ಕಾರಣಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮನ್ನಾಳುವವರು ಬಿಂಬಿಸುತ್ತಾ ಬಂದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಾರ್ವಭೌಮತ್ವಗಳ ನಿಜ ತಿರುಳುಗಳನ್ನು ಗ್ರಹಿಸಲಾಗುವುದಿಲ್ಲ.

 ಭೀಮರಾವ್ ಅಂಬೇಡ್ಕರ್‌ರಿಗೆ ದಲಿತ ದಮನಿತ ಜನಸಮೂಹದ ಹಿತಾಸಕ್ತಿಗಳನ್ನು ಕಾಪಾಡುವ, ಜಾತಿ ಶೋಷಣೆಯನ್ನು ನಿವಾರಿಸುವ ಅದಮ್ಯ ಬದ್ಧತೆಯಿದ್ದರೂ ಅಂಗೀಕೃತಗೊಂಡ ಸಂವಿಧಾನದ ಮೂಲಕ ಅದನ್ನು ಪೂರ್ಣವಾಗಿ ಸಾಧಿಸಬಹುದು ಎಂದು ಅವರೂ ಕೂಡ ಭಾವಿಸಿರಲಿಲ್ಲ. ಆದರೆ ಇಂಡಿಯಾದ ಆಳುವ ಶಕ್ತಿಗಳು ಅಂಬೇಡ್ಕರ್‌ರನ್ನು ಇಂಡಿಯಾದ ಸಂವಿಧಾನಕ್ಕೆ ಪರ್ಯಾಯವಾಗಿ ಮುಂದಿಡುತ್ತಾ, ಸಮೀಕರಿಸುತ್ತಾ, ಭಾವನಾತ್ಮಕವಾಗಿ ದಲಿತ ದಮನಿತರನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾ ಬಂದರು. ಅದು ಯಾವ ಮಟ್ಟಕ್ಕೆ ಎಂದರೆ ಸಂವಿಧಾನ ಎಂದರೆ ಅಂಬೇಡ್ಕರ್ ಎನ್ನುವ ಮಟ್ಟಕ್ಕೆ ಬೆಳೆಸಿದರು. ಅದೇ ರೀತಿ ದಲಿತ ಹಿನ್ನೆಲೆಯ ಹಲವು ರಾಜಕೀಯ ಪುಢಾರಿಗಳು ಹಾಗೂ ಹಲವು ನಾಯಕರು ಹಾಗೂ ಇನ್ನಿತರ ಪಟ್ಟಭದ್ರ ಹಿತಾಸಕ್ತಿಗಳು ಆಳುವ ಶಕ್ತಿಗಳ ಇಂತಹ ಸಂಚುಗಳ ಭಾಗವಾಗಿ ಅಂಬೇಡ್ಕರ್‌ರನ್ನು ಸಂವಿಧಾನಕ್ಕೆ ಪರ್ಯಾಯವಾಗಿ ಬಿಂಬಿಸುವುದರಲ್ಲಿ ತಮ್ಮ ಕೈಗಳನ್ನೂ ಜೋಡಿಸುತ್ತಾ ಬಂದರು. ಅವೆಲ್ಲದರ ಒಟ್ಟು ಪರಿಣಾಮವೇ ನಾವಿಂದು ಅನುಭವಿಸುತ್ತಿರುವುದು. ಈಗ ಆಳುವ ಶಕ್ತಿಗಳಿಗೆ ಸಂವಿಧಾನ ಬೇಡವಾಗಿದೆ. ಅದರಿಂದ ಎದುರಾಗುವ ಕೆಲವು ತಾಂತ್ರಿಕ ತೊಡಕುಗಳು ಅವರಿಗೆ ತಡೆಗಳನ್ನು ಒಡ್ಡುವುದರಿಂದಾಗಿ ಸಂವಿಧಾನವನ್ನು ಒಂದು ಮಟ್ಟಕ್ಕೂ ಇಟ್ಟುಕೊಳ್ಳುವುದು ಬೇಡವೆಂಬ ದಾವಂತದಲ್ಲಿದ್ದಾರೆ. ದಲಿತ ದಮನಿತ ವರ್ಗಗಳ ಸಂಘಟಿತ ಶಕ್ತಿ ಆಳುವವರನ್ನು ನಾಮಮಾತ್ರಕ್ಕೂ ಪ್ರಶ್ನಿಸಲಾರದಂತಹ ಸ್ಥಿತಿಗೆ ಈ ಮೊದಲೇ ತರಲಾಗಿತ್ತು.

ಈಗಲೂ ಕೂಡ ದಲಿತ ದಮನಿತರು ಸಂಘಟಿತರಾಗಿ ಪರಿಸ್ಥಿತಿಗೆ ತಕ್ಕಂತೆ ಬೀದಿಗಿಳಿದು ತಮ್ಮ ಪ್ರತಿರೋಧವನ್ನು ಒಡ್ಡಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಕ್ಕೆ ಹಾನಿಗಳನ್ನು ಆಳುವ ಶಕ್ತಿಗಳು ದಲಿತ ದಮನಿತರ ಸಂಘಟಿತ ಶಕ್ತಿಗೆ ಮಾಡಿದೆ ಎನ್ನುವುದನ್ನು ಗಮನಿಸಬೇಕು. ಆದರೆ ಗುಜರಾತ್‌ನ ಉನ್ನಾವೊ ವಿಚಾರ, ರೋಹಿತ್ ವೇಮುಲಾ, ಭೀಮಾ ಕೋರೆಗಾಂವ್, ಉತ್ತರ ಪ್ರದೇಶದ ದಲಿತರ ಮೇಲಿನ ದಮನಕಾಂಡ ಮೊದಲಾದ ವಿಚಾರದಲ್ಲಿ ದಲಿತ ಪ್ರತಿರೋಧಗಳು ಚಿಗುರಿ ಬೆಳೆಯಲಾರಂಭಿಸಿವೆ. ಇದು ಈಗಿನ ಭರವಸೆದಾಯಕ ವಿದ್ಯಮಾನವಾಗಿದೆ. ಒಂದು ವಿಚಾರ ಸ್ಪಷ್ಟ. ಅದು ಮೇಲ್ನೋಟದಲ್ಲೇ ಎದ್ದು ಕಾಣುವ ವಿಚಾರ. ಈ ದೇಶದ ದಲಿತರು, ದಮನಿತರು, ಆದಿವಾಸಿಗಳು, ಮಹಿಳೆಯರು, ಮುಸ್ಲಿಮ್ ಅಲ್ಪಸಂಖ್ಯಾತರು ಇನ್ನಿತರ ಬಡವರ ಬದುಕಿನಲ್ಲಿ ಸಂವಿಧಾನದ ಆಶಯಗಳಾಗಲೀ, ಕಲಮುಗಳಾಗಲೀ ಈಗಲೂ ಮೂಲಭೂತವಾಗಿ ಅನ್ವಯವಾಗುತ್ತಲೇ ಇಲ್ಲ. ಈ ರೀತಿಯಿರುವವರ ಸಂಖ್ಯೆ ಸುಮಾರು ನಲವತ್ತು ಕೋಟಿಯಷ್ಟಿರಬಹುದು. ಇನ್ನು ಅಲ್ಪಸ್ವಲ್ಪಅನುಕೂಲ ಪಡೆದ ಸಮುದಾಯದವರು ಹತ್ತಾರು ಕೋಟಿಗಳಿರಬಹುದು. ಆದರೆ ಅದು ಮೂಲಭೂತವಾಗಿ ಅವರ ಬದುಕುಗಳಲ್ಲಿ ಬದಲಾವಣೆಗಳನ್ನು ತಂದಿಲ್ಲ ಎನ್ನುವುದನ್ನು ಗಮನಿಸಬೇಕು. ವಸತಿಯಿಲ್ಲದ, ಭೂಮಿಯಿಲ್ಲದ, ಶಿಕ್ಷಣವಿಲ್ಲದ, ಕೊನೆಗೆ ತಮ್ಮ ಅಸ್ತಿತ್ವದ ಬಗ್ಗೆ ಯಾವುದೇ ದಾಖಲೆಗಳು ಕೂಡ ಇಲ್ಲದ ಜನರೇ ದೇಶದ ಶೇ. 35ರಿಂದ ಶೇ.40ರಷ್ಟು ಇದ್ದಾರೆ ಎಂದರೆ ಸಂವಿಧಾನ ಇವರ ಜೀವನದಲ್ಲಿ ಈಗಲೂ ಬದಲಾವಣೆ ತಂದಿಲ್ಲ ಎಂದು ತಾನೆ ಅರ್ಥ.?

ಶೇ. 1ರಷ್ಟಿರುವವರ ಬಳಿ ದೇಶದ ಶೇ.70ಕ್ಕೂ ಹೆಚ್ಚು ಸಂಪತ್ತು ಕ್ರೋಡೀಕೃತವಾಗಿದೆ ಎನ್ನುವ ಹಲವು ವರದಿಗಳು ಇದನ್ನೇ ಹೇಳುತ್ತಿವೆ. ಅಂದರೆ ಬಹುಸಂಖ್ಯಾತ ಜನಸಾಮಾನ್ಯರ ದುಡಿಮೆಯ ಸಂಪತ್ತನ್ನು ಶೇ. 1ರಷ್ಟಿರುವ ಮೇಲ್ಜಾತಿ ಮೇಲ್ವರ್ಗದ ಜನರು ಕಬಳಿಸುತ್ತಾ ಬಂದು ಅದರ ವಾರಸುದಾರರಾಗಿ ದೇಶದ ರಾಜಕೀಯ ಅಧಿಕಾರದ ಹಿಡಿತ ಸಾಧಿಸಿದ್ದಾರೆ. ಅವರಿಗೆ ಏನು ಬೇಕೋ ಅದನ್ನು, ಯಾರು ಬೇಕೋ ಅವರನ್ನು ಚುನಾವಣೆ ಎಂಬ ಪ್ರಹಸನದ ಮೂಲಕ ನೇಮಿಸಿಕೊಳ್ಳುತ್ತಾ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾ ದೇಶವನ್ನು ದಿವಾಳಿಯ ಅಂಚಿಗೆ ತಂದಿದ್ದಾರೆ. ನಮ್ಮ ದೇಶದ ಸಾಂಪ್ರಾದಾಯಿಕ ಕೃಷಿ ಹಾಗೂ ಉದ್ಯಮಗಳಿಂದ ಹಿಡಿದು ಆಧುನಿಕ ಕೃಷಿ ಹಾಗೂ ಭಾರೀ ಉದ್ದಿಮೆಗಳು ಇಂದು ನೆಲಕಚ್ಚಿ ತೆವಳುತ್ತಿರುವುದು ಈ ಎಲ್ಲಾ ಕಾರಣಕ್ಕಾಗಿಯೇ. ನಮ್ಮ ದೇಶದ ಆರ್ಥಿಕ ಸಾಮಾಜಿಕ ಅಸಮಾನತೆಯ ಕಂದಕವಿಂದು ತಲುಪಿರುವ ಸ್ಥಿತಿಯನ್ನು ಗಮನಿಸಿದಾಗ ಇಂಡಿಯಾದ ಪ್ರಜಾಪ್ರಭುತ್ವ ಎನ್ನುವುದು ಎಷ್ಟು ಪೊಳ್ಳಾದುದು ಎನ್ನುವುದು ಅರ್ಥವಾಗುವ ವಿಚಾರ. ಹಾಗಂತ ನಮ್ಮ ದೇಶವಿಂದು 1947ರಲ್ಲಿದ್ದಂತೆಯೇ ಇದೆಯೇ ಎಂದು ಕೇಳಿದರೆ ಖಂಡಿತಾ ಇಲ್ಲ ಎಂದೇ ಹೇಳಬೇಕಾಗುತ್ತದೆ.. ಜನಸಂಖ್ಯೆಯಿಂದ ಹಿಡಿದು ಮೂಲಸೌಲಭ್ಯಗಳವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ ಅವುಗಳು ಒಟ್ಟಾರೆ ಬಹುಸಂಖ್ಯಾತ ಜನಸಾಮಾನ್ಯರ ಅಭಿವೃದ್ಧಿ ಹಾಗೂ ಸಮಾನತೆಯ ಲಕ್ಷಣಗಳನ್ನಾಗಿ ನೋಡಿದರೆ ಎಡವಿ ಬೀಳುತ್ತೇವೆ. ವರದಿಗಳ ಪ್ರಕಾರ ಇಂದು ಆರ್ಥಿಕ ಪರಿಸ್ಥಿತಿ ಕಳೆದ ನಲವತ್ತು ವರುಷಗಳ ಹಿಂದಿನಕ್ಕಿಂತಲೂ ಕಳಪೆಯಾಗಿದೆ. ನಿರುದ್ಯೋಗದ ಮಟ್ಟದ ಕತೆ ಕೂಡ ಅದೇ ಪರಿಸ್ಥಿತಿ. ಸಾಮಾಜಿಕ ಭದ್ರತೆಯ ವಿಚಾರದಲ್ಲೂ ಆಗಿನದಕ್ಕಿಂತಲೂ ಕಳಪೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇಡೀ ದೇಶವನ್ನು ಯಾವುದೇ ಸಾಂವಿಧಾನಿಕ ಹಕ್ಕುಗಳು ಮೇಲ್ಮಟ್ಟದಲ್ಲೂ ಕೂಡ ಇಲ್ಲದ ಫ್ಯಾಶಿಸ್ಟ್ ವ್ಯವಸ್ಥೆಯತ್ತ ಯೋಜನಾ ಬದ್ಧವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಅದೂ ಸಂವಿಧಾನ ಬದ್ಧವೆಂದು ತೋರಿಸಿಯೇ ಮಾಡಲಾಗುತ್ತಿದೆ ಎನ್ನುವುದನ್ನು ಗಮನಿಸಬೇಕು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇಷ್ಟೆಲ್ಲಾ ಜನವಿರೋಧ ಭುಗಿಲೆದ್ದ ಮೇಲೂ ಜಾರಿಗೆ ತರಲಾಗಿದೆ.

 ಇವೆಲ್ಲಾ ಕೇವಲ ಮೋದಿಯ ಬಿಜೆಪಿ ಸರಕಾರ ಬಂದಿದ್ದರಿಂದಾಗಿ, ಸಂಘ ಪರಿವಾರದಿಂದಾಗಿ ಸಂಭವಿಸಿವೆ. ಬೇರೆ ಸರಕಾರವಿದ್ದಲ್ಲಿ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದೆಲ್ಲಾ ಅಭಿಪ್ರಾಯಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಚಾಲ್ತಿಯಲ್ಲಿವೆ. ಅಂತಹ ಅಭಿಪ್ರಾಯಗಳನ್ನು ಚಾಲ್ತಿಯಲ್ಲಿಟ್ಟು ಹರಡುವುದರಲ್ಲಿ ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡವರ ಪಾಲೂ ಕೂಡ ಸಾಕಷ್ಟಿದೆ. ಆದರೆ ಅದು ಪೂರ್ಣ ಸತ್ಯವಲ್ಲ ಎನ್ನುವುದನ್ನು ಗಮನಿಸದೆ ಹೋದರೆ ದೇಶದ ಪರಿಸ್ಥಿತಿ ಮತ್ತದರ ಕಾರಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಇಂದಿನ ಪರಿಸ್ಥಿತಿಯ ಆರಂಭ ಸಂವಿಧಾನ ಅಂಗೀಕೃತಗೊಂಡು ಸಂಸತ್ತಿನ, ಹಾಗೂ ವಿಧಾನಸಭೆಗಳ ಚುನಾವಣೆಗಳು ನಡೆದು ಸರಕಾರಗಳು ರಚನೆಗೊಂಡಂದಿನಿಂದಲೇ ಆಗಿದೆ. ಈಗದರ ಉನ್ನತ ಹಂತದಲ್ಲಿ ದೇಶವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಹಿಂದೆ ಆಡಳಿತದಲ್ಲಿದ್ದ ವಿರೋಧ ಪಕ್ಷಗಳು ತಾವು ಪ್ರತಿಪಾದಿಸುತ್ತಾ ಬಂದ ಸಂವಿಧಾನವನ್ನು ಸಮರ್ಥಿಸಿ ಹೇಳಿಕೊಳ್ಳುವಂತಹ ರೀತಿಯಲ್ಲಿ ಗಟ್ಟಿ ದನಿಯೆತ್ತಿ ಜನರನ್ನು ಸಂಘಟಿಸಲು ಸಾಧ್ಯವಾಗದ ಸ್ಥಿತಿಯನ್ನೂ ಇದೇ ಹಿನ್ನೆಲೆಯಲ್ಲಿಯೇ ನೋಡಬೇಕಿದೆ.

ಇಂದಿನ ನಮ್ಮ ಮುಂದಿರುವ ಪ್ರಧಾನ ತಡೆಗಳು ಭಾರೀ ಕಾರ್ಪೊರೇಟ್‌ಹಾಗೂ ಭಾರೀ ಆಸ್ತಿವಂತರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಿಡಿತ. ಅವರ ಪರವಾಗಿ ಆಡಳಿತ ನಡೆಸುತ್ತಿರುವ ಸರಕಾರಗಳು. ಇವರು ಸಂವಿಧಾನವನ್ನೂ ತಮ್ಮ ಶಸ್ತ್ರ ಹಾಗೂ ಗುರಾಣಿಗಳನ್ನಾಗಿ ಬಳಸುತ್ತಾ ಬಂದಿದ್ದಾರೆ. ಈ ತಡೆಗಳನ್ನು ಸೈದ್ಧಾಂತಿಕವಾಗಿ ಹಾಗೂ ಸಂಘಟಿತವಾಗಿ ಎದುರಿಸುವುದೇ ಜನಸಾಮಾನ್ಯರ ಮುಂದಿರುವ ಸವಾಲುಗಳಾಗಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಯೋಜನೆಗಳ ವಿರುದ್ಧ ಚರಿತ್ರಾರ್ಹವಾಗಿ ವಿದ್ಯಾರ್ಥಿ ಯುವ ಸಮೂಹ, ಮಹಿಳೆಯರು ಹಾಗೂ ಜನಸಾಮಾನ್ಯರು ಸಿಡಿದೆದ್ದು ನಿಂತಿರುವ ಈ ಸಂದರ್ಭದಲ್ಲಿ ಈ ಬಗೆಗಿನ ಚಿಂತನೆಗಳು, ಚರ್ಚೆಗಳು ಹೆಚ್ಚಾಗಬೇಕಾದುದು ಅಗತ್ಯವಾಗಿದೆ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News