ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದ ಜೆಎನ್ ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ಬಂಧನ

Update: 2020-01-28 10:51 GMT

ಹೊಸದಿಲ್ಲಿ: ದೇಶದ್ರೋಹದ ಆರೋಪ ಎದುರಿಸುತ್ತಿರುವ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ  ಸಂಶೋಧನಾ ವಿದ್ಯಾರ್ಥಿ ಶರ್ಜೀಲ್ ಇಮಾಮ್ ರನ್ನು ಅವರ ಹುಟ್ಟೂರಾದ ಬಿಹಾರದ ಜೆಹೆನಾಬಾದ್ ಎಂಬಲ್ಲಿಂದ  ಬಂಧಿಸಲಾಗಿದೆ. ಶರ್ಜೀಲ್ ದೇಶವಿರೋಧಿ ಹೇಳಿಕೆ ನೀಡಿದ್ದಾರೆಂದು ಹೇಳಲಾದ ವೀಡಿಯೋವೊಂದು  ಹೊರಬಿದ್ದ  ನಂತರ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು.

ಭಾರತದಿಂದ ಇಡೀ ಈಶಾನ್ಯ ಪ್ರದೇಶವನ್ನು ಪ್ರತ್ಯೇಕಗೊಳಿಸಬೇಕೆಂದು ಹೇಳಿದ್ದಾರೆ ಎಂದು ಆರೋಪಿಸಿ ದಿಲ್ಲಿಯಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲೂ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಅವರನ್ನು ಹುಡುಕಲು ಐದು ಪೊಲೀಸ್ ತಂಡಗಳು ಮುಂಬೈ, ಪಾಟ್ನಾ ಮತ್ತು ದಿಲ್ಲಿಗೆ ತೆರಳಿದ್ದವು. ದಿಲ್ಲಿ ಪೊಲೀಸರ ಪ್ರಕಾರ ಶರ್ಜೀಲ್ ಎರಡು ಸಂದರ್ಭಗಳಲ್ಲಿ  ವಿಭಜನಾತ್ಮಕ  ಭಾಷಣ ಮಾಡಿದ್ದಾರೆ. ಒಂದು ಭಾಷಣವನ್ನು ಡಿಸೆಂಬರ್‍ ನಲ್ಲಿ ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ಹಾಗೂ ಇನ್ನೊಂದು ಭಾಷಣವನ್ನು ಆಲಿಘರ್ ಮುಸ್ಲಿಂ ವಿವಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಅವರು ಮಾಡಿದ್ದಾರೆಂಬ ಆರೋಪವಿದೆ.

ಅವರು ದಿಲ್ಲಿಯ ಶಾಹೀನ್ ಬಾಗ್ ಪ್ರತಿಭಟನೆಯ ಆಯೋಜಕರಲ್ಲೊಬ್ಬರು ಎಂದು ಹೇಳಲಾಗಿದೆ. ಆದರೆ  ಶಾಹೀನ್ ಬಾಗ್ ಪ್ರತಿಭಟನಾಕಾರರು ಮಾತ್ರ ಅವರ ಹೇಳಿಕೆಗಳಿಂದ ದೂರ ಸರಿದು ನಿಂತಿದ್ದು  ಯಾವುದೇ ಒಬ್ಬ ವ್ಯಕ್ತಿ ತಮ್ಮ ಪ್ರತಿಭಟನೆಯ ಆಯೋಜಕರಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News