ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಸಿಎಎ ಜಾರಿ: ಪ್ರಧಾನಿ ಮೋದಿ

Update: 2020-01-28 14:45 GMT

ಹೊಸದಿಲ್ಲಿ,ಜ.28: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಮಂಗಳವಾರ ಇಲ್ಲಿ ಬಲವಾಗಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರಗಳ ವಿರುದ್ಧ ತೀವ್ರ ದಾಳಿ ನಡೆಸಿದರು. ಧಾರ್ಮಿಕ ಕಿರುಕುಳದಿಂದ ಪಾರಾಗಲು ತಮ್ಮ ತವರು ರಾಷ್ಟ್ರಗಳಿಂದ ತಪ್ಪಿಸಿಕೊಂಡು ಬಂದಿರುವ ಜನರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಸಿಎಎ ಅನ್ನು ಸರಕಾರವು ಜಾರಿಗೆ ತಂದಿದೆ ಎಂದು ಅವರು ಹೇಳಿದರು.

ವಾರ್ಷಿಕ ಎನ್‌ಸಿಸಿ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಮೋದಿ,‘ಸಿಎಎ ಕುರಿತು ಭೀತಿಯನ್ನು ಸೃಷ್ಟಿಸುತ್ತಿರುವವರು ಪಾಕಿಸ್ತಾನದಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಕಿರುಕುಳಗನ್ನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಧರ್ಮದ ಕಾರಣದಿಂದ ಕಿರುಕುಳಕ್ಕೊಳಗಾದವರಿಗೆ ನಾವು ನೆರವಾಗಬಾರದೇ? ಕೆಲ ಸಮಯದ ಹಿಂದೆ ಪಾಕಿಸ್ತಾನದ ಸೇನೆಯು ಹೊರಡಿಸಿದ್ದ ಜಾಹೀರಾತೊಂದರಲ್ಲಿ ಸ್ವಚ್ಛತಾ ಕಾರ್ಮಿಕರ ಹುದ್ದೆಗಳಿಗೆ ಮುಸ್ಲಿಮೇತರರು ಮಾತ್ರ ಅರ್ಜಿ ಸಲ್ಲಿಸಬೇಕೆಂದು ಸ್ವಷ್ಟವಾಗಿ ತಿಳಿಸಲಾಗಿತ್ತು ’ಎಂದರು.

ಸಿಎಎ ಬಿಜೆಪಿಯ ಚುನಾವಣಾ ಭರವಸೆಯ ಭಾಗವಾಗಿದೆ ಎಂದು ಒತ್ತಿ ಹೇಳಿದ ಅವರು,ನೆರೆಯ ರಾಷ್ಟ್ರಗಳಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಸರಕಾರವು ಸಿಎಎ ಅನ್ನು ತಂದಿದೆ ಎಂದರು.

ಜಮ್ಮು-ಕಾಶ್ಮೀರದಲ್ಲಿಯ ಪ್ರಚಲಿತ ವಿದ್ಯಮಾನಗಳಿಗೆ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳೇ ಕಾರಣವೆಂದು ದೂರಿದ ಮೋದಿ,ದೇಶಕ್ಕೆ ಸ್ವಾತಂತ್ರ ದೊರೆತಾಗಿನಿಂದಲೂ ಅಲ್ಲಿ ಸಮಸ್ಯೆಗಳು ಉಳಿದುಕೊಂಡು ಬಂದಿದ್ದವು ಮತ್ತು ಕೆಲವು ಕುಟುಂಬಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಗಳಿಗಾಗಿ ಅವುಗಳನ್ನು ಜೀವಂತವಾಗಿಟ್ಟಿದ್ದವು. ಇದರ ಫಲವಾಗಿಯೇ ಅಲ್ಲಿ ಭಯೋತ್ಪಾದನೆ ಹುಲುಸಾಗಿ ಬೆಳೆದಿತ್ತು ಎಂದರು. ಹಾಲಿ ಸರಕಾರವು ದಶಕಗಳಿಂದಲೂ ದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದರು.

ಪಾಕಿಸ್ತಾನವನ್ನು ತರಾಟೆಗೆತ್ತಿಕೊಂಡ ಅವರು,‘ಅದು ಮೂರು ಯುದ್ಧಗಳನ್ನು ಸೋತಿದೆ,ಆದರೂ ಭಾರತದ ವಿರುದ್ಧ ಛಾಯಾ ಸಮರಗಳನ್ನು ಮುಂದುವರಿಸಿದೆ. ಕೇಂದ್ರದಲ್ಲಿಯ ಹಿಂದಿನ ಸರಕಾರಗಳು ಈ ಸಮಸ್ಯೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನಾಗಿ ಪರಿಗಣಿಸಿದ್ದವು. ಆದರೆ ಪಾಕ್ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸಶಸ್ತ್ರ ಪಡೆಗಳು ಅನುಮತಿ ಕೋರಿದ್ದರೂ ಈ ಸರಕಾರಗಳು ಮುಂದುವರಿದಿರಲಿಲ್ಲ. ಅವು ನಿಷ್ಕ್ರಿಯವಾಗಿದ್ದವು ’ಎಂದು ಆರೋಪಿಸಿದರು.

ಇಂದು ಜಮ್ಮು-ಕಾಶ್ಮೀರ ಮಾತ್ರವಲ್ಲ,ದೇಶದ ಇತರ ಭಾಗಗಳಲ್ಲಿಯೂ ಶಾಂತಿ ನೆಲೆಸಿದೆ. ದಶಕಗಳಿಂದಲೂ ಕಡೆಗಣಿಸಲ್ಪಟ್ಟಿದ್ದ ಈಶಾನ್ಯ ಭಾರತದ ಆಕಾಂಕ್ಷೆಗಳನ್ನು ಸರಕಾರವು ಪೂರೈಸುತ್ತಿದೆ ಎಂದರು.

ತನ್ನ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ,ಬೋಡೊ ಒಪ್ಪಂದ,ತ್ರಿವಳಿ ತಲಾಖ್ ಕಾನೂನು ಮತ್ತು ಜಮ್ಮು-ಕಾಶ್ಮೀರದಲ್ಲಿ ವಿಧಿ 370ರ ರದ್ದತಿಯನ್ನು ಪ್ರಸ್ತಾಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News