ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಎನ್‌ಆರ್‌ಸಿಯನ್ನು ಕಡೆಗಣಿಸಿದ ರಾಷ್ಟ್ರಪತಿ

Update: 2020-01-31 18:15 GMT

ಹೊಸದಿಲ್ಲಿ, ಜ. 31: ಬಜೆಟ್ ಅಧಿವೇಶನದ ಮೊದಲು ಶುಕ್ರವಾರ ಸಂಸತ್ತಿನ ಉಭಯ ಸದನಗಳಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ಕಳೆದ ವರ್ಷ ಜೂನ್ 20ರಂದು 17ನೇ ಲೋಕಸಭೆಯ ಉದ್ಘಾಟನೆ ಸಂದರ್ಭ ಜಂಟಿ ಬೈಠಕ್‌ನಲ್ಲಿ ಮಾತನಾಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದ್ಯತೆ ಆಧಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ತರಲಿದೆ ಎಂದು ಹೇಳಿದ್ದರು. ಈಗ ಅವರು ಎನ್‌ಆರ್‌ಸಿಯನ್ನು ಉಲ್ಲೇಖಿಸದೆ ಕಡೆಗಣಿಸಿರುವುದು ಮಹತ್ವ ಪಡೆದುಕೊಂಡಿದೆ.

‘‘ಅಕ್ರಮ ಒಳನುಸುಳುಕೋರರು ನಮ್ಮ ಆಂತರಿಕ ಭದ್ರತೆಗೆ ಪ್ರಮುಖ ಬೆದರಿಕೆ. ಇದು ದೇಶದ ಹಲವು ಭಾಗಗಳಲ್ಲಿ ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಬಹುದು. ಅಲ್ಲದೆ, ಇದು ಇತರರ ಜೀವನ ನಿರ್ವಹಣೆಗೆ ಅಡ್ಡಿ ಉಂಟು ಮಾಡಬಹುದು. ಒಳನುಸುಳುಕೋರರ ಇರುವ ಪ್ರದೇಶಗಳಲ್ಲಿ ಆದ್ಯತೆಯ ಮೇಲೆ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಅನುಷ್ಠಾನಿಸಲು ಸರಕಾರ ನಿರ್ಧರಿಸಿದೆ. ಒಳನುಸುಳುವಿಕೆ ತಡೆಗಟ್ಟಲು ಗಡಿಯಲ್ಲಿ ಭದ್ರತೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ವರ್ಷ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವ ಉದ್ದೇಶವನ್ನು ಘೋಷಿಸುವ ಸಂದರ್ಭ ಹೇಳಿದ್ದರು.

ಒಂದೆಡೆ ಸರಕಾರ ಒಳನುಸುಳುಕೋರರನ್ನು ಗುರುತಿಸುತ್ತಿದೆ. ಇನ್ನೊಂದೆಡೆ ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗುವವರನ್ನು ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಗುರುತನ್ನು ರಕ್ಷಿಸಲು ಪೌರತ್ವ ಕಾಯ್ದೆ ತಿದ್ದುಪಡಿ ತರಲಾಗುವುದು ಎಂದು ರಾಷ್ಟ್ರಪತಿ ಅವರು ಕಳೆದ ವರ್ಷ ಜೂನ್‌ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News