ಸಿಎಎ ಪ್ರತಿಭಟನಕಾರರ ಸೊತ್ತು ಮುಟ್ಟುಗೋಲು: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2020-01-31 20:18 GMT

 ಹೊಸದಿಲ್ಲಿ, ಜ. 31: ಕಳೆದ ತಿಂಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ಜನರ ಸೊತ್ತು ಮುಟ್ಟುಗೋಲು ಹಾಕಿಕೊಳ್ಳುವ ಉತ್ತರಪ್ರದೇಶ ಸರಕಾರದ ನಡೆ ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.

 ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿರುವ ವಕೀಲ ಫರ್ವೇಝ್ ಆರಿಫ್ ಟಿಟು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭ ರಾಜ್ಯದಲ್ಲಿ ನಡೆದ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕೂಡ ಆದೇಶಿಸಿದ್ದಾರೆ.

ರಾಜಕೀಯ ಕಾರಣಕ್ಕೆ ಪ್ರತಿಭಟನಾಕಾರರ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿದ ಭರವಸೆಯಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯಲ್ಲಿ ಉತ್ತರಪ್ರದೇಶ ಸರಕಾರ ಮುಂದುವರಿದಿದೆ ಎಂದು ದೂರುದಾರ ಆರೋಪಿಸಿದ್ದಾರೆ. ಕಳೆದ ತಿಂಗಳು ಹಿಂಸಾಚಾರ ಸ್ಫೋಟಗೊಂಡ ಬಳಿಕ ಮೊದಲ ಪ್ರತಿಕ್ರಿಯೆಯಾಗಿ ಸುದ್ದಿ ಸಂಸ್ಥೆಯಾದ ಪಿಟಿಐ ಮುಖ್ಯಮಂತ್ರಿಯ ‘‘ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ನಾವು ಅವರ ಮೇಲೆ ಸೇಡು ತೀರಿಸಿಕೊಳ್ಳಲಿದ್ದೇವೆ’’ ಎಂಬ ಹೇಳಿಕೆ ಉಲ್ಲೇಖಿಸಿತ್ತು.

‘‘ತಪ್ಪೆಸಗಿರುವುದು ಕಂಡು ಬಂದರೆ, ಅವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಸಮಸ್ಯೆ ಸೃಷ್ಟಿಸಿದವರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಿರುವುದರಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳಲಾಗುವುದು’’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು.

ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾದ ಸೊತ್ತು ನಿರ್ದಿಷ್ಟ ಸಮುದಾಯಕ್ಕೆ ಸೇರಿದೆ ಎಂದು ಕೂಡ ದೂರುದಾರರ ವಕೀಲ ಪರ್ವೈಝ್ ಆರಿಫ್ ಟಿಟು ಒತ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News