×
Ad

ವಿದೇಶಿ ನೇರ ಹೂಡಿಕೆಗೆ ಶಿಕ್ಷಣ ಕ್ಷೇತ್ರದ ಬಾಗಿಲು ತೆರೆದ ವಿತ್ತಸಚಿವೆ: 99,300 ಕೋ.ರೂ.ಮೀಸಲು

Update: 2020-02-01 20:15 IST

ಹೊಸದಿಲ್ಲಿ,ಫೆ.1: ಶಿಕ್ಷಣ ಕ್ಷೇತ್ರವನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಬಾಹ್ಯ ವಾಣಿಜ್ಯಿಕ ಸಾಲಗಳಿಗೆ ಮುಕ್ತವಾಗಿಸುವುದಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡಪತ್ರದಲ್ಲಿ ಪ್ರಕಟಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ 5,000 ಕೋ.ರೂ.ಹೆಚ್ಚುವರಿ ಹಂಚಿಕೆಯನ್ನು ಮಾಡಲಾಗಿದ್ದು,99,300 ಕೋ.ರೂ.ಗಳನ್ನು ನಿಗದಿಗೊಳಿಸಲಾಗಿದೆ. 2019-20ನೇ ಸಾಲಿನ ಮುಂಗಡಪತ್ರದಲ್ಲಿ ಈ ಮೊತ್ತ 94,853.64 ಕೋ.ರೂ.ಆಗಿತ್ತು. ಇದರ ಜೊತೆಗೆ ಕೌಶಲ್ಯಾಭಿವೃದ್ಧಿಗೆ 3,000 ಕೋ.ರೂ.ಗಳನ್ನು ನಿಗದಿ ಮಾಡಲಾಗಿದೆ.

ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಸ್ಥಾಪನೆಯನ್ನ್ನೂ ಸೀತಾರಾಮನ್ ಪ್ರಕಟಿಸಿದರಾದರೂ ಎಲ್ಲಿ ಮತ್ತು ಯಾವಾಗ ಇವುಗಳನ್ನು ಸ್ಥಾಪಿಸಲಾಗುವುದು ಎಂಬ ವಿವರಗಳನ್ನು ನೀಡಲಿಲ್ಲ.

ಅರ್ಹ ವೈದ್ಯರ ಕೊರತೆಯನ್ನು ನೀಗಿಸಲು ಸರಕಾರಿ-ಖಾಸಗಿ ಸಹಭಾಗಿತ್ವದ ಮೂಲಕ ಜಿಲ್ಲಾ ಆಸ್ಪತ್ರೆಗಳೊಂದಿಗೆ ಮೆಡಿಕಲ್ ಕಾಲೇಜುಗಳನ್ನು ಜೋಡಣೆಗೊಳಿಸುವುದಾಗಿ ಅವರು ಪ್ರಕಟಿಸಿದರು.

                                                ಯುವಜನತೆಗಾಗಿ ಕಾರ್ಯಕ್ರಮಗಳು

ಕೌಶಲ್ಯಾಭಿವೃದ್ಧಿ,ಉದ್ಯೋಗ ಸೃಷ್ಟಿ ಮತ್ತು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಸೀತಾರಾಮನ್ ಅಪ್ರೆಂಟಿಸ್‌ಶಿಪ್ ಪದವಿ ಮತ್ತು ಡಿಪ್ಲೋಮಾ ಕಾರ್ಯಕ್ರಮಗಳನ್ನು ಪ್ರಕಟಿಸಿದರು. 150 ಉನ್ನತ ಶಿಕ್ಷಣ ಸಂಸ್ಥೆಗಳು ಈ ಶಿಕ್ಷಣಗಳನ್ನು ನೀಡಲಿವೆ.

ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲಾಗದ ವಿದ್ಯಾರ್ಥಿಗಳಿಗಾಗಿ ಪೂರ್ಣಪ್ರಮಾಣದ ಆನ್‌ಲೈನ್ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಉನ್ನತ ಶಿಕ್ಷಣ ಸಂಸ್ಥೆಗಳು ಇವುಗಳನ್ನು ಒದಗಿಸಲಿವೆ. ಈ ಪೈಕಿ ಹೆಚ್ಚಿನ ಸಂಸ್ಥೆಗಳು ನ್ಯಾಷನಲ್ ಇನ್‌ಸ್ಟಿಟ್ಯೂಷನ್ ರ್ಯಾಂಕಿಂಗ್ ಫ್ರೇಮ್‌ವರ್ಕ್‌ನಲ್ಲಿ ಉನ್ನತ ನೂರರ ಗುಂಪಿಗೆ ಸೇರಿದ್ದಾಗಿವೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಲು ಒಂದು ವರ್ಷ ಅವಧಿಗೆ ದೇಶಾದ್ಯಂತ ನಗರ ಸ್ಥಳೀಯ ಸಂಸ್ಥೆಗಳು ಇಂಟರ್ನ್‌ಶಿಪ್ ಒದಗಿಸಲಿವೆ.

‘ಸ್ಟಡಿ ಇನ್ ಇಂಡಿಯಾ ’ಯೋಜನೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಭಾರತದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ‘ಇಂಡ್-ಸ್ಯಾಟ್’ ಹೆಸರಿನ ಏಕ ಪರೀಕ್ಷೆಯನ್ನು ಆಫ್ರಿಕಾ ಮತ್ತು ಏಷ್ಯದ ದೇಶಗಳಲ್ಲಿ ನಡೆಸಲಾಗುವುದು.

ರಾಷ್ಟ್ರೀಯ ಶಿಕ್ಷಣ ನೀತಿ

ಬಹು ನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಕುರಿತೂ ಮಾತನಾಡಿದ ಸೀತಾರಾಮನ್,ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುವುದು. ರಾಜ್ಯಗಳಲ್ಲಿಯ ವಿವಿಧ ಪಾಲುದಾರರೊಂದಿಗೆ ಮಾತುಕತೆಗಳು ಪ್ರಗತಿಯಲ್ಲಿವೆ. ನೀತಿಯ ಕುರಿತು ಎರಡು ಲಕ್ಷಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಿದ್ದೇವೆ. 2030ರ ವೇಳೆಗೆ ವಿಶ್ವದ ಬೃಹತ್ ದುಡಿಮೆಯ ವಯಸ್ಸಿನ ಜನಸಂಖ್ಯೆಯನ್ನು ಭಾರತವು ಹೊಂದಿರಲಿದೆ. ಅವರಿಗೆ ಸಾಕ್ಷರತೆ ಮಾತ್ರವಲ್ಲ,ಉದ್ಯೋಗ ಮತ್ತು ಜೀವನ ಕೌಶಲ್ಯಗಳೂ ಅಗತ್ಯವಾಗುತ್ತವೆ ಎಂದರು.

ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಕ್ಷೇತ್ರಗಳಿಗಾಗಿ ಹಲವಾರು ಯೋಜನೆಗಳನ್ನು ಒಳಗೊಳ್ಳಲಿರುವ ಎನ್‌ಇಪಿಗೆ ಕೇಂದ್ರ ಸಂಪುಟವಿನ್ನೂ ಅನುಮೋದನೆಯನ್ನು ನೀಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News