ಸಿಎಎ ಭಾರತೀಯ ಸಂವಿಧಾನ, ಅಂತಾರಾಷ್ಟ್ರೀಯ ಮಾನವ ಹಕ್ಕು ಕಾನೂನಿನ ಸ್ಪಷ್ಟ ಉಲ್ಲಂಘನೆ: ಆ್ಯಮ್ನೆಸ್ಟಿ

Update: 2020-02-01 15:49 GMT

ವಾಷಿಂಗ್ಟನ್, ಫೆ. 1: ಇತ್ತೀಚೆಗೆ ಜಾರಿಗೆ ತರಲಾದ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸುತ್ತದೆ ಹಾಗೂ ಧರ್ಮದ ಆಧಾರದ ತಾರತಮ್ಯವನ್ನು ನ್ಯಾಯಸಮ್ಮತಗೊಳಿಸುತ್ತದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸದರಿಗೆ ತಿಳಿಸಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪಘಾನಿಸ್ತಾನದ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ 2019 ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಜೂರಾದ ಕಾಯ್ದೆ ಪೌರತ್ವ ತಿದ್ದುಪಡಿ ಕಾಯ್ದೆ. ನೂತನ ಕಾನೂನು ಯಾವುದೇ ಪೌರತ್ವವನ್ನು ನಿರಾಕರಿಸುವುದಿಲ್ಲ. ಆದರೆ, ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ಹಾಗೂ ಪೌರತ್ವ ನೀಡುವ ಉದ್ದೇಶ ಹೊಂದಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಆಫ್ರಿಕಾ, ಜಾಗತಿಕ ಆರೋಗ್ಯ, ಜಾಗತಿಕ ಮಾನವ ಹಕ್ಕು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ ಕುರಿತ ಸದನದ ವಿದೇಶಿ ವ್ಯವಹಾರಗಳ ಉಪ ಸಮಿತಿ ಹಾಗೂ ಮೇಲ್ವಿಚಾರಣೆಯ ಸದನ, ಸುಧಾರಣಾ ಉಪ ಸಮಿತಿಯ ಮುಂದೆ ಪುರಾವೆ ಸಲ್ಲಿಸುವ ಸಂದರ್ಭ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಏಷಿಯಾ ಪೆಸಿಫಿಕ್ ಅಡ್ವೊಕೆಸಿ ಮ್ಯಾನೇಜರ್ ಫ್ರಾನ್ಸಿಸ್ಕೊ ಬೆನ್‌ಕೋಸ್ಮೆ ಈ ಹೇಳಿಕೆ ನೀಡಿದರು.

ಧರ್ಮದ ಆಧಾರದಲ್ಲಿ ತಾರತಮ್ಯವನ್ನು ಕಾನೂನುಬದ್ಧಗೊಳಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಭಾರತೀಯ ಸಂಸತ್ತು ಮಂಜೂರು ಮಾಡಿದೆ. ಇಂದು ಭಾರತ ಸಂವಿಧಾನ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕು ಕಾನೂನಿನ ಉಲ್ಲಂಘನೆ ಎಂದು ಬೆನ್‌ಕೋಸ್ಮೆ ಹೇಳಿದ್ದಾರೆ. ‘‘ಸಿಎಎ ಭಾರತದ ಆಂತರಿಕ ವಿಷಯ. ಪ್ರಜಾಪ್ರಭುತ್ವ ರೀತಿಯಲ್ಲಿ ಹಾಗೂ ಸೂಕ್ತ ಪ್ರಕ್ರಿಯೆಯಲ್ಲಿ ಈ ಕಾನೂನು ಜಾರಿಗೊಳಿಸಲಾಗಿದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News