ಪಂಜಾಬ್‌ನಲ್ಲಿ ಸಿಎಎ ವಿರುದ್ಧ ಬೃಹತ್ ರ‌್ಯಾಲಿ: 20 ಸಾವಿರಕ್ಕೂ ಅಧಿಕ ರೈತರು, ಮಹಿಳೆಯರು ಭಾಗಿ

Update: 2020-02-02 18:50 GMT

ಚಂಡಿಗಢ, ಫೆ. 2: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪಂಜಾಬ್‌ನ ಮಾಲೇರ್‌ಕೋಟ್ಲಾದಲ್ಲಿ ಶನಿವಾರ ನಡೆದ ಬೃಹತ್ ರ್ಯಾಲಿಯಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಪ್ರತಿಭಟನಕಾರರು ಪಾಲ್ಗೊಂಡಿದ್ದಾರೆ. ಇವರಲ್ಲಿ ರೈತರು, ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿತ್ತು.

  ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಹಾಗೂ ಫೆಬ್ರವರಿ 16ರಂದು ನಗರದಲ್ಲಿ ನಡೆಯುವ ಬೃಹತ್ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಲು ಈ ‘ಆಹ್ವಾನ ರ್ಯಾಲಿ’ ಆಯೋಜಿಸಲಾಗಿತ್ತು. ಭಾರತೀಯ ಕಿಸಾನ್ ಯೂನಿಯನ್ ಉಗ್ರಾಹನ್ ಸಮೂಹದ ಅಡಿಯಲ್ಲಿ ರ್ಯಾಲಿ ಆಯೋಜಿಸಲಾಗಿತ್ತು. ರ್ಯಾಲಿಯಲ್ಲಿ ಜಮಾಅತೆ-ಎ-ಇಸ್ಲಾಮಿ ಹಿಂದ್ ಹಾಗೂ ಝರ್ಕಾ ಝಫ್ರಿಯಂತಹ ಹಲವು ಮುಸ್ಲಿಂ ಸಂಘಟನೆಗಳು ಪಾಲ್ಗೊಂಡಿದ್ದವು.

ಮಹಿಳೆಯರು ಏಕತೆ ಪ್ರತಿನಿಧಿಸುವ ಹಳದಿ ಬಟ್ಟೆ ಧರಿಸಿ ಘೋಷಣೆಗಳನ್ನು ಕೂಗಿದರು. ಪಟ್ಟಣದ ವಿವಿಧ ಕಡೆಗಳಲ್ಲಿ ಸ್ಥಳೀಯ ನಾಯಕಿಯರಾದ ಹರೀಂದರ್ ಕೌರ್ ಬಿಂದು, ಹರ್ಪೀತ್ ಕೌರ್ ಜೇಥುಕೆ, ಬಲ್‌ಜೀತ್ ಕೌರ್, ಪರಮ್‌ಜೀತ್ ಕೌರ್, ಪ್ರೇಮ್‌ಜಿತ್ ಕೌರ್ ಮೊದಲಾದವರು ಸಿಎಎ ಕುರಿತು ಭಾಷಣ ಮಾಡಿದರು. ಧಾರ್ಮಿಕ ಭಿನ್ನತೆಗಳನ್ನು ಮೀರಬೇಕಾದ ಪ್ರಾಮುಖ್ಯತೆ ಬಗ್ಗೆ ಮಹಿಳೆಯರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಹಿಂದೂ-ಮುಸ್ಲಿಂ ಸಹೋದರರು ಪರಸ್ಪರ ಜಗಳವಾಡಲು ನಾವು ಬಿಡಲಾರೆವು ಎಂದು ಅವರು ಹೇಳಿದರು.

ದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರನ್ನು ಕ್ರೂರವಾಗಿ ದಮನ ಮಾಡುತ್ತಿರುವುದನ್ನು ಖಂಡಿಸಿರುವ ಮಹಿಳೆಯರು, ಹಿಂದೂ ರಾಷ್ಟ್ರ ಸ್ಥಾಪಿಸುವ ಕೇಂದ್ರ ಸರಕಾರದ ಪ್ರಯತ್ನವನ್ನು ಟೀಕಿಸಿದರು. ಅಲ್ಲದೆ ಜವಾಹರ್‌ಲಾಲ್ ವಿ.ವಿ. ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿ.ವಿ.ಗಳ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News