ಎನ್‌ಐಎಯಿಂದ ಅಸ್ಸಾಂ ಪ್ರಾದ್ಯಾಪಕನ ವಿಚಾರಣೆ: 42 ವಿದ್ವಾಂಸರಿಂದ ಎನ್‌ಐಎಗೆ ಪತ್ರ

Update: 2020-02-03 15:29 GMT

ಗುವಾಹತಿ/ಹೊಸದಿಲ್ಲಿ, ಫೆ. 3: ಐಐಟಿ ಗುವಾಹತಿಯ ಪ್ರಾಧ್ಯಾಪಕ ಅರುಪ್‌ ಜ್ಯೋತಿ ಸೈಕಿಯಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಎನ್‌ಐಎಗೆ ರಾಮಚಂದ್ರ ಗುಹಾ ಸೇರಿದಂತೆ 42ಕ್ಕೂ ಅಧಿಕ ವಿದ್ವಾಂಸರು ಹಾಗೂ ಶಿಕ್ಷಣ ತಜ್ಞರು ಪತ್ರ ಬರೆದಿದ್ದಾರೆ.

 ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸೋಗಿನಲ್ಲಿ ಮಾವೋವಾದಿಗಳು ನೆಲೆ ಕಂಡುಕೊಳ್ಳಲು ನೆರವು ನೀಡಿದ ಆರೋಪದಲ್ಲಿ ಕಳೆದ ಒಂದು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ರೈತರ ಹಕ್ಕು ಹೋರಾಟಗಾರ ಅಖಿಲ್ ಗೊಗೋಯಿ ಹಾಗೂ ಅವರ ಸವಹರ್ತಿಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿ ಸಾಕ್ಷಿಯಾಗಿಸಿ ಅರುಪ್‌ ಜ್ಯೋತಿ ಸೈಕಿಯಾ ಅವರಿಗೆ ಎನ್‌ಐಎ ಸಮನ್ಸ್ ನೀಡಿತ್ತು ಹಾಗೂ ಅವರನ್ನು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಸೈಕಿಯಾ ಅವರನ್ನು ಯಾಕೆ ಪ್ರಶ್ನಿಸಲಾಯಿತು ಎಂದು ಇದುವರೆಗೆ ಎನ್‌ಐಎ ವಿವರಣೆ ನೀಡಿಲ್ಲ. ಆದರೂ, ಅವರ ವಕೀಲ ಶಂತನು ಬೋರ್ಥಕುರ್, ಸಾಕ್ಷಿ ನೀಡಲು ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಹೇಳಿದ್ದಾರೆ.

 ಸೈಕಿಯಾ ಅವರನ್ನು ಇಂದು ಕೂಡ ವಿಚಾರಣೆಗೆ ಒಳಪಡಿಸಲಾಯಿತು. ‘‘ಅವರನ್ನು ಗೌರವದಿಂದ ನಡೆಸಿಕೊಳ್ಳಿ. ಅವರು ಅಡೆತಡೆ ಇಲ್ಲದೆ ನಿರಂತರ ಕೆಲಸ ಮಾಡಲು ಅವಕಾಶ ನೀಡಿ’’ ಎಂದು ವಿದ್ವಾಂಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘‘ಪ್ರಾಧ್ಯಾಪಕ ಸೈಕಿಯಾ ಅವರು ಭಾರತ ಹಾಗೂ ಅಸ್ಸಾಂ ಸಾಹಿತ್ಯಕ ಹಾಗೂ ಬೌದ್ಧಿಕ ಜಗತ್ತಿನ ಸೊತ್ತು. ಅತ್ಯುಚ್ಚ ನೈತಿಕ ನಡತೆ, ಸೌಮ್ಯ, ಮೃದುಭಾಷಿ ಹಾಗೂ ಸಂಪೂರ್ಣ ಅಹಿಂಸಾವಾದಿ. ಐಐಟಿ ಗುವಾಹತಿಯ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಬದ್ಧ ವ್ಯಕ್ತಿ’’ ಎಂದು ಹೇಳಿಕೆ ತಿಳಿಸಿದೆ.

ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘‘ಅರುಪ್‌ ಜ್ಯೋತಿ ಅವರ ಸಂಕಷ್ಟದ ಬಗ್ಗೆ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ ಹಾಗೂ ಮೂಕನಾಗಿದ್ದೇನೆ. ಅವರು ನಮ್ಮ ಶ್ರೇಷ್ಟ ಇತಿಹಾಸ ತಜ್ಞ. ತಜ್ಞರು ಬರೆದಿರುವ ಪತ್ರವನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News