ಫಡ್ನವೀಸ್ ಆಡಳಿತದಲ್ಲಿ ಎನ್‌ಸಿಪಿ, ಶಿವಸೇನಾ ನಾಯಕರ ಫೋನ್ ಕದ್ದಾಲಿಕೆ?: ತನಿಖೆಗೆ ಮಹಾ ಸರಕಾರ ಆದೇಶ

Update: 2020-02-03 15:56 GMT
ಫೋಟೊ ಕೃಪೆ: twitter.com/AnilDeshmukhNCP

ಹೊಸದಿಲ್ಲಿ,ಜ.3: ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರದಲ್ಲಿದ್ದಾಗ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ನಡೆಸಿತ್ತೆಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರವು ಸೋಮವಾರ ದ್ವಿಸದಸ್ಯ ಸಮಿತಿಯೊಂದನ್ನು ನೇಮಿಸಿದೆ. ತನಿಖೆಯನ್ನು ಪೂರ್ತಿಗೊಳಿಸಲು ಸಮಿತಿಗೆ ಆರು ವಾರಗಳ ಕಾಲಾವಕಾಶ ನೀಡಲಾಗಿದೆಯೆಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀಕಾಂತ್‌ಸಿಂಗ್ ಹಾಗೂ ಜಂಟಿ ಆಯುಕ್ತ (ಗುಪ್ತಚರ) ಅಮಿತೇಶ್ ಕುಮಾರ್ ಸಮಿತಿಯ ಸದಸ್ಯರಾಗಿದ್ದಾರೆ.

 ಕಳೆದ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆ ಹಾಗೂ ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಆಗಿನ ಫಡ್ನವೀಸ್ ಸರಕಾರವು, ಎನ್‌ಸಿಪಿ ಪಕ್ಷದ ವರಿಷ್ಠ ಶರದ್ ಪವಾರ್, ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಹಾಗೂ ಶಿವಸೇನಾ ನಾಯಕ ಸಂಜಯ್ ರಾವತ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ದೂರವಾಣಿ ಕರೆಗಳ ಕದ್ದಾಲಿಕೆ ನಡೆಸುತ್ತಿತ್ತೆಂದು ಅನಿಲ್ ದೇಶಮುಖ್ ಜನವರಿಯಲ್ಲಿ ಆಪಾದಿಸಿದ್ದರು.

 ಫೋನ್ ಕದ್ದಾಲಿಕೆ ನಡೆಯುತ್ತಿರುವುದರ ಬಗ್ಗೆ ಬಿಜೆಪಿಯ ಹಿರಿಯ ನಾಯಕರೊಬ್ಬರು ತನಗೆ ಎಚ್ಚರಿಕೆ ನೀಡಿದ್ದರೆಂದು ರಾವತ್ ಆಪಾದಿಸಿದ್ದರು.

 ಆದಾಗ್ಯೂ, ದೇವೇಂದ್ರ ಫಡ್ನವೀಸ್ ಅವರು ಈ ಆರೋಪಗಳನ್ನು ನಿರಾಕರಿಸಿದ್ದರು. ತಾನು ಮುಖ್ಯಮಂತ್ರಿಯಾಗಿದ್ದಾಗ ಶಿವಸೇನೆಯು ಗೃಹ ಸಚಿವಾಲಯದ ಭಾಗವಾಗಿತ್ತು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News