ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ, ಟೆಸ್ಟ್ ಸರಣಿ: ರೋಹಿತ್ ಶರ್ಮಾ ಅಲಭ್ಯ

Update: 2020-02-03 18:31 GMT

ಹೊಸದಿಲ್ಲಿ, ಫೆ.3: ನ್ಯೂಝಿಲ್ಯಾಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದ ವೇಳೆ ಕಾಲುನೋವಿಗೆ ಒಳಗಾಗಿದ್ದ ಭಾರತದ ಉಪ ನಾಯಕ ರೋಹಿತ್ ಶರ್ಮಾ ಮುಂಬರುವ ಕಿವೀಸ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆೆ. ಈ ಬೆಳವಣಿಗೆ ಭಾರತಕ್ಕೆ ಹಿನ್ನಡೆ ಉಂಟು ಮಾಡಿದೆ.

 ರವಿವಾರ ನಡೆದ ಟ್ವೆಂಟಿ-20 ಪಂದ್ಯದಲ್ಲಿ 41 ಎಸೆತಗಳಲ್ಲಿ 60 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್‌ಗೆ ಮೀನಮಾಂಸಖಂಡದಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಬ್ಯಾಟಿಂಗ್‌ನ್ನು ಮೊಟಕುಗೊಳಿಸಿ ಗಾಯಗೊಂಡು ನಿವೃತ್ತಿಯಾಗಿದ್ದರು.

‘‘ರೋಹಿತ್ ಕಿವೀಸ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಫಿಸಿಯೋ ಅವರನ್ನು ಪರೀಕ್ಷಿಸುತ್ತಿದ್ದಾರೆ. ಅವರ ಗಾಯ ಎಷ್ಟೊಂದು ಗಂಭೀರವಾಗಿದೆ ಎಂದು ನಮಗೆ ಇನ್ನಷ್ಟೇ ತಿಳಿಯಬೇಕಾಗಿದೆ. ರೋಹಿತ್ ಸರಣಿಯ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದಿಲ್ಲ’’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭಾರತ ಬುಧವಾರ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಸಜ್ಜಾ ಗಿದೆ. ಏಕದಿನ ಸರಣಿಯ ಬಳಿಕ ಟೆಸ್ಟ್ ಸರಣಿ ಆರಂಭವಾಗಲಿದೆ. ವೆಸ್ಟ್‌ಇಂಡೀಸ್ ವಿರುದ್ಧ ಸ್ವದೇಶದಲ್ಲಿ ನಡೆದ ಏಕದಿನ ಸರಣಿಯಂತೆಯೇ ಕರ್ನಾಟಕದ ಮಾಯಾಂಕ್ ಅಗರ್ವಾಲ್‌ರನ್ನು ಏಕದಿನ ಪಂದ್ಯಕ್ಕೆ ಮೀಸಲು ಆರಂಭಿಕ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ನ್ಯೂಝಿಲ್ಯಾಂಡ್ ‘ಎ’ ವಿರುದ್ಧದ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಶುಭಮನ್ ಗಿಲ್ ತಂಡಕ್ಕೆ ವಾಪಸಾಗುವ ನಿರೀಕ್ಷೆಯಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅನುಭವಿ ಆಟಗಾರ ಕೆ.ಎಲ್. ರಾಹುಲ್ ಮೊದಲ ಆರಂಭಿಕ ಸ್ಥಾನವನ್ನು ತುಂಬಲಿದ್ದಾರೆ. ಮೀಸಲು ಆರಂಭಿಕನ ಸ್ಥಾನಕ್ಕೆ ಗಿಲ್ ಹಾಗೂ ಪೃಥ್ವಿ ಶಾ ನಡುವೆ ಪೈಪೋಟಿ ಏರ್ಪಟ್ಟಿದೆ. 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದ ರೋಹಿತ್ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದ ಪಂದ್ಯದಲ್ಲೂ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದರು. ರವಿವಾರ ಕೊನೆಗೊಂಡಿರುವ ನ್ಯೂಝಿಲ್ಯಾಂಡ್ ವಿರುದ್ಧ ಟಿ-20 ಸರಣಿಯಲ್ಲಿ ಎರಡು ಬಾರಿ ಆಕರ್ಷಕ ಬ್ಯಾಟಿಂಗ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News