ಪ್ರತಿ ಹತ್ತು ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುತ್ತಾರೆ:ಡಬ್ಲ್ಯುಎಚ್‌ಒ

Update: 2020-02-04 14:29 GMT

ಹೊಸದಿಲ್ಲಿ,ಫೆ.4: ಭಾರತದಲ್ಲಿ 2018ನೇ ಸಾಲಿನಲ್ಲಿ ಅಂದಾಜು 11.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು,ಪ್ರತಿ ಹತ್ತು ಭಾರತೀಯರಲ್ಲಿ ಓರ್ವರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಮತ್ತು ಪ್ರತಿ 15 ಭಾರತೀಯರಲ್ಲಿ ಓರ್ವರು ಈ ರೋಗದಿಂದಾಗಿ ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಶ್ವ ಕ್ಯಾನ್ಸರ್ ದಿನ ಸಂದರ್ಭದಲ್ಲಿ ಬಿಡುಗಡೆಗೊಳಿಸಿರುವ ತನ್ನ ವರದಿಯಲ್ಲಿ ಹೇಳಿದೆ.

2018ರಲ್ಲಿ ಭಾರತದಲ್ಲಿ 7,84,800 ಸಾವುಗಳು ಕ್ಯಾನ್ಸರ್‌ನಿಂದ ಸಂಭವಿಸಿವೆ ಮತ್ತು ಐದು ವರ್ಷಗಳಷ್ಟು ಹಳೆಯದಾದ 22.6 ಲಕ್ಷ ಕ್ಯಾನ್ಸರ್ ಪ್ರಕರಣಗಳಿದ್ದವು ಎಂದಿರುವ ವರದಿಯು,ಸ್ತನ ಕ್ಯಾನ್ಸರ್ (1,62,500 ಪ್ರಕರಣ),ಬಾಯಿ ಕ್ಯಾನ್ಸರ್ (1,20,000),ಗರ್ಭಕೋಶ ಕ್ಯಾನ್ಸರ್ (97,000),ಶ್ವಾಸಕೋಶ ಕ್ಯಾನ್ಸರ್ (68,000),ಹೊಟ್ಟೆಯ ಕ್ಯಾನ್ಸರ್ ಮತ್ತು ಕರುಳು-ಗುದನಾಳ ಕ್ಯಾನ್ಸರ್ (ತಲಾ 57,000) ಭಾರತದಲ್ಲಿ ಆರು ಅತ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಾಗಿವೆ. ಎಲ್ಲ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಇವುಗಳ ಪಾಲು ಶೇ.49ರಷ್ಟಿದೆ ಎಂದು ತಿಳಿಸಿದೆ.

ಪುರುಷರಲ್ಲಿ 5,70,000 ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಬಾಯಿ,ಶ್ವಾಸಕೋಶ,ಹೊಟ್ಟೆ,ಕರುಳು-ಗುದನಾಳ ಮತ್ತು ಅನ್ನನಾಳ ಕ್ಯಾನ್ಸರ್‌ಗಳ ಪಾಲು ಶೇ.45ರಷ್ಟಿತ್ತು. ಮಹಿಳೆಯರಲ್ಲಿ 5,87,000 ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಸ್ತನ,ಗರ್ಭಕೋಶ,ಅಂಡಾಶಯ,ಬಾಯಿ ಮತ್ತು ಕರುಳು-ಗುದನಾಳ ಕ್ಯಾನ್ಸರ್‌ಗಳ ಪಾಲು ಶೇ.60ರಷ್ಟಿತ್ತು ಎಂದು ವರದಿಯು ಉಲ್ಲೇಖಿಸಿದೆ.

ಪುರುಷರಲ್ಲಿ ತಂಬಾಕು ಬಳಕೆ ಸಂಬಂಧಿತ ತಲೆ ಮತ್ತು ಗಂಟಲು ಕ್ಯಾನ್ಸರ್‌ಗಳು,ನಿರ್ದಿಷ್ಟವಾಗಿ ಬಾಯಿ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿದ್ದು,ಈ ಕ್ಯಾನ್ಸರ್ ವಿಧಗಳು ಕೆಳಮಟ್ಟದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯೊಂದಿಗೆ ಗುರುತಿಸಿಕೊಂಡಿವೆ ಎಂದು ವರದಿಯು ಹೇಳಿದೆ.

ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಕ್ಯಾನ್ಸರ್ ಕುರಿತು ಹೆಚ್ಚಿನ ಕಾಳಜಿಯನ್ನು ವಹಿಸದಿದ್ದರೆ ಮುಂದಿನ 20 ವರ್ಷಗಳಲ್ಲಿ ಜಾಗತಿಕ ಕ್ಯಾನ್ಸರ್ ಪ್ರಮಾಣ ಶೇ.60ರಷ್ಟು ಹೆಚ್ಚಬಹುದು ಎಂದೂ ಡಬ್ಲುಎಚ್‌ಒ ಎಚ್ಚರಿಕೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News