ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿ ತ್ರಿಷಾ ಶೆಟ್ಟಿ ಬಂಧನ, ಬಿಡುಗಡೆ
ಹೊಸದಿಲ್ಲಿ, ಫೆ.5: ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಪ್ರತಿಭಟನಾಕಾರರಿಗೆ ಕಾನೂನು ಸಲಹೆ ಮತ್ತು ನೆರವು ನೀಡುತ್ತಿದ್ದ ಖ್ಯಾತ ಮಾನವಹಕ್ಕು ನ್ಯಾಯವಾದಿ ತ್ರಿಷಾ ಶೆಟ್ಟಿಯನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿರುವುದಾಗಿ ವರದಿಯಾಗಿದೆ. ಸೆಂಟ್ರಲ್ ಮುಂಬೈಯ ಮುಂಬೈ ಬಾಗ್‌ನಲ್ಲಿ ಜನವರಿ 26ರಿಂದ ನಡೆಯುತ್ತಿರುವ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ತಾನೂ ಪಾಲ್ಗೊಳ್ಳುತ್ತಿದ್ದೆ. ಫೆ.3ರಂದು ಪ್ರತಿಭಟನಾಕಾರರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿರುವುದಾಗಿ ಸಂದೇಶ ಬಂದ ಹಿನ್ನೆಲೆಯಲ್ಲಿ ಬಂಧಿತ ಪ್ರತಿಭಟನಾಕಾರರಿಗೆ ಕಾನೂನು ಸಲಹೆಗಾರಳಾಗಿ ತಾನು ನಾಗಪಾದ ಪೊಲೀಸ್ ಠಾಣೆಗೆ ತೆರಳಿದ್ದೆ. ಆಗ ಸೀನಿಯರ್ ಪೊಲೀಸ್ ಇನ್‌ಸ್ಪೆಕ್ಟರ್ ಶಾಲಿನಿ ಶರ್ಮರ ಕೋಣೆಯಲ್ಲಿ ತನ್ನನ್ನು ಕೆಲಹೊತ್ತು ಬಂಧನದಲ್ಲಿಡಲಾಗಿತ್ತು ಎಂದು ತ್ರಿಷಾ ಶೆಟ್ಟಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಠಾಣೆಯಲ್ಲಿ ಯಾವುದೇ ಪ್ರತಿಭಟನಾಕಾರರನ್ನು ಬಂಧನದಲ್ಲಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ ಠಾಣೆಯ ಕೋಣೆಯೊಂದರಲ್ಲಿ ಅವರನ್ನು ಕೂಡಿಹಾಕಿರುವುದು ತನ್ನ ಗಮನಕ್ಕೆ ಬಂದಿದೆ. ಅಲ್ಲದೆ ಅವರ ಫೋನ್‌ಗಳನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಇದನ್ನು ಶಾಲಿನಿ ಶರ್ಮರ ಗಮನಕ್ಕೆ ತರಲು ಅವರ ಕೋಣೆಗೆ ತೆರಳಿದಾಗ ತನ್ನ ವಿರುದ್ಧ ಸೆಕ್ಷನ್ 149ರಡಿ ಪ್ರಕರಣ ದಾಖಲಿಸುವುದಾಗಿ ಶರ್ಮ ಗದರಿಸಿದ್ದಾರೆ. ಅಲ್ಲದೆ ಹೊರಗೆ ಹೋಗಲು ಅವಕಾಶ ನೀಡದೆ ಕೋಣೆಯಲ್ಲೇ ಬಂದಿಗಳಾಗಿದ್ದ ಇತರ ಮೂವರ ಜತೆ ತನ್ನನ್ನೂ ಕುಳ್ಳಿರಿಸಿ, ಸೆಕ್ಷನ್ 149ರಡಿ 4 ನೋಟಿಸ್‌ಗಳನ್ನು ನೀಡಿದ್ದಾರೆ. ಅದಕ್ಕೆ ಸಹಿ ಹಾಕಲು ನಿರಾಕರಿಸಿದ್ದೇನೆ ಎಂದು ತ್ರಿಷಾ ಶೆಟ್ಟಿ ಹೇಳಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದ ಮುಂಬೈಬಾಗ್ ಪ್ರದೇಶಕ್ಕೆ ಈ ಹಿಂದೆಯೂ ಭೇಟಿ ನೀಡಿದ್ದ ಶಾಲಿನಿ ಶರ್ಮ , ಪ್ರತಿಭಟನೆ ಹಿಂಪಡೆಯುವಂತೆ ಎಚ್ಚರಿಸಿದ್ದರು ಎಂದು ತ್ರಿಷಾ ಹೇಳಿದ್ದಾರೆ. ಆದರೆ ಬಂಧನದ ವರದಿಯನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರತಿಭಟನಾಕಾರರನ್ನು ಠಾಣೆಗೆ ಕರೆಸಿ ಅವರಿಗೆ ಸೆಕ್ಷನ್ 149ರಡಿ ನೋಟಿಸ್ ನೀಡಿದ್ದೇವೆ. ಅವರಿಗೆ ಚಹಾ ಕೊಟ್ಟು ನೋಟಿಸ್ ಹಸ್ತಾಂತರಿಸಿದ ಬಳಿಕ ಅಲ್ಲಿಂದ ಕಳುಹಿಸಿದ್ದೇವೆ. ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.