“ಭಾರತ ಪ್ರತಿಯೊಬ್ಬರಿಗೂ ಸೇರಿದ್ದು”: ಶಾಹೀನ್‌ಬಾಗ್ ಕುರಿತು ದ್ವೇಷಭಾಷಣಗಳಿಗೆ ಬಿಜೆಪಿಯ ಮಿತ್ರಪಕ್ಷಗಳ ಆಕ್ಷೇಪ
ಹೊಸದಿಲ್ಲಿ,ಫೆ.5: ಚುನಾವಣೆಯ ಕಾವಿನಲ್ಲಿರುವ ದಿಲ್ಲಿಯಲ್ಲಿ ಬಿಜೆಪಿ ನಾಯಕರು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ದ್ವೇಷಭಾಷಣಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎದ ಪಾಲುದಾರ ಪಕ್ಷಗಳಾದ ಎಲ್‌ಜೆಪಿ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಆಕ್ಷೇಪಗಳನ್ನು ವ್ಯಕ್ತಪಡಿಸಿವೆ.
ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಕಾಲಿ ದಳದ ರಾಜ್ಯಸಭಾ ಸದಸ್ಯ ಬಲ್ವಿಂದರ್ ಸಿಂಗ್ ಭುಂದರ್ ಅವರು,‘ನಾವು ಮುಸ್ಲಿಮರನ್ನು ‘ಶಾಹೀನ್‌ಬಾಗ್ ಸಮುದಾಯ ’ಎಂದು ಹಣೆಪಟ್ಟಿ ಕಟ್ಟುವಂತಿಲ್ಲ. ಅಲ್ಪಸಂಖ್ಯಾತ ಪಕ್ಷವಾಗಿರುವ ನಾವು ರಾಜಕೀಯದಲ್ಲಿ ಇಂತಹ ಭಾಷೆಗಳನ್ನು ಸಮರ್ಥಿಸುವುದಿಲ್ಲ. ಈ ದೇಶವು ಪ್ರತಿಯೊಬ್ಬರಿಗೂ ಸೇರಿದೆ. ಈ ಬಿಕ್ಕಟ್ಟು (ಸಿಎಎ ವಿರುದ್ಧ ಪ್ರತಿಭಟನೆ) ಅಂತ್ಯಗೊಳ್ಳಬೇಕು ಎಂದು ಇತ್ತೀಚಿಗೆ ನಡೆದ ಎನ್‌ಡಿಎ ಸಭೆಯಲ್ಲ್ಲಿಯೂ ನಾನು ಹೇಳಿದ್ದೇನೆ. ಕೆಲವು ರಾಜಕೀಯ ಪಕ್ಷಗಳು ಈ ಸ್ಥಿತಿಯ ಲಾಭವೆತ್ತುತ್ತಿವೆ,ಆದರೆ ಸರಕಾರವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಾರದು ’ ಎಂದು ಹೇಳಿದರು.
‘ದ್ವೇಷ ಹಬ್ಬಿಸುವುದನ್ನು ನಾವು ಸಮರ್ಥಿಸಲು ಹೇಗೆ ಸಾಧ್ಯ? ಕೆಲವು ಬಿಜೆಪಿ ನಾಯಕರು ಅತ್ಯಂತ ಆಕ್ಷೇಪಾರ್ಹ ಭಾಷೆಯನ್ನು ಬಳಸುತ್ತಿದ್ದಾರೆ. ಮುಸ್ಲಿಮರನ್ನು ಸಿಎಎ ವ್ಯಾಪ್ತಿಯೊಳಗೆ ಸೇರಿಸುವಂತೆ ನಮ್ಮ ಪಕ್ಷದ ಅಧ್ಯಕ್ಷರು ಈ ಹಿಂದೆ ಸೂಚಿಸಿದ್ದರು. ಒಂದು ಸಮುದಾಯಕ್ಕೆ ದೇಶವಿರೋಧಿ ಪಟ್ಟವನ್ನು ಕಟ್ಟಲು ಹೇಗೆ ಸಾಧ್ಯ ’ ಎಂದು ಅಕಾಲಿದಳದ ಇನ್ನೋರ್ವ ರಾಜ್ಯಸಭಾ ಸದಸ್ಯ ನರೇಶ ಗುಜ್ರಾಲ್ ಪ್ರಶ್ನಿಸಿದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು,‘ಇಂತಹ ಭಾಷೆಯನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಜನ ಪ್ರತಿನಿಧಿಗಳಿಗೆ ತಾವು ಬಳಸುವ ಭಾಷೆಯ ಘನತೆಯನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆಯಿದೆ. ನಾವು ಮಾತನಾಡುವ ಮುನ್ನ ಇಂತಹ ಭಾಷೆಯು ಉಂಟು ಮಾಡುವ ಪರಿಣಾಮದ ಬಗ್ಗೆ ಯೋಚಿಸಬೇಕು. ನಾವೆಂದೂ ದ್ವೇಷ ರಾಜಕಾರಣವನ್ನು ಮಾಡಿಲ್ಲ. ಪ್ರತಿಪಕ್ಷವಾಗಲಿ ಅಥವಾ ಬಿಜೆಪಿಯಾಗಲಿ,ಶಾಹೀನ್‌ಬಾಗ್ ಹೆಸರಿನಲ್ಲಿ ರಾಜಕಿಯ ಮಾಡುವುದು ಅಪಾಯಕಾರಿಯಾಗಿದೆ. ದೇಶವು ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿದೆ. ಧರ್ಮ ಮತ್ತು ಜಾತಿಯ ಆಧಾರದಲ್ಲಿ ಸಮುದಾಯವನ್ನು ಪ್ರತ್ಯೇಕಿಸುವಂತಿಲ್ಲ ’ಎಂದು ಹೇಳಿದರು.
ಸಿಎಎ ಕುರಿತು ಅಲ್ಪಸಂಖ್ಯಾತ ಸಮುದಾಯವನ್ನು ದಾರಿ ತಪ್ಪಿಸುತ್ತಿರುವುದಕ್ಕಾಗಿ ಪ್ರತಿಪಕ್ಷಗಳ ವಿರುದ್ಧ ಪಾಸ್ವಾನ್ ದಾಳಿ ನಡೆಸಿದರಾದರೂ, ‘ಉರಿಯುತ್ತಿರುವ ಬೆಂಕಿಗೆ ತುಪ್ಪವನ್ನು ಸುರಿಯದಿರುವುದು ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಇಲ್ಲದಿದ್ದರೆ ಇತಿಹಾಸವು ನಮ್ಮನ್ನು ಕ್ಷಮಿಸುವುದಿಲ್ಲ ’ಎಂದರು.