×
Ad

ಕೇಂದ್ರ ಸರಕಾರದ ಇಲಾಖೆಗಳಲ್ಲಿ 6.83 ಲಕ್ಷ ಹುದ್ದೆ ಖಾಲಿ

Update: 2020-02-05 19:50 IST

ಹೊಸದಿಲ್ಲಿ, ಫೆ.5: ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 2018ರ ಮಾರ್ಚ್ 1ರ ವೇಳೆಗೆ ಖಾಲಿ ಹುದ್ದೆಗಳ ಸಂಖ್ಯೆ 6.83 ಲಕ್ಷ ಎಂದು ಸಿಬ್ಬಂದಿ ಸಚಿವಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಇರುವ 38,02,779 ಹುದ್ದೆಗಳಲ್ಲಿ 31,18,956 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ನಿವೃತ್ತಿ, ರಾಜೀನಾಮೆ, ಮರಣ, ಭಡ್ತಿ ಇತ್ಯಾದಿ ಕಾರಣಗಳಿಂದ ಹುದ್ದೆ ಖಾಲಿ ಇವೆ. ಖಾಲಿ ಹುದ್ದೆಗಳಿಗೆ ಸಂಬಂಧಿತ ಇಲಾಖೆ/ಸಚಿವಾಲಯದ ನೇಮಕಾತಿ ನಿಯಮದಂತೆ ಭರ್ತಿ ಮಾಡಿಕೊಳ್ಳಲಾಗುವುದು. ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವುದು ಒಂದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

2019-20ರ ವರ್ಷದಲ್ಲಿ ಯುಪಿಎಸ್ಸಿ, ಸ್ಟಾಫ್ ಸಿಲೆಕ್ಷನ್ ಕಮಿಷನ್ ಹಾಗೂ ರೈಲ್ವೇ ನೇಮಕಾತಿ ಮಂಡಳಿಗಳು ಸುಮಾರು 1.34 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಶಿಫಾರಸು ಮಾಡಿವೆ. ಇದರಲ್ಲಿ ರೈಲ್ವೇ ನೇಮಕಾತಿ ಮಂಡಳಿಯಿಂದ 1,16,391 ಹುದ್ದೆಗಳಿಗೆ, ಎಸ್‌ಎಸ್‌ಸಿಯಿಂದ 13,995 ಹಾಗೂ ಯುಪಿಎಸ್ಸಿಯಿಂದ 4,399 ಹುದ್ದೆಗಳ ನೇಮಕಾತಿಗೆ ಶಿಫಾರಸು ಬಂದಿದೆ. ಅಂಚೆ ಸೇವಾ ಇಲಾಖೆ ಹಾಗೂ ರಕ್ಷಣಾ ಸಚಿವಾಲಯವೂ 3,10,832 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News