ಎನ್‌ಆರ್‌ಸಿಯಿಂದ ಎಲ್ಲಾ ಧರ್ಮಗಳ ಮೇಲೂ ಪರಿಣಾಮ: ಜಾರಿಗೆ ಅವಕಾಶ ನೀಡುವುದಿಲ್ಲ; ಉದ್ಧವ್ ಠಾಕ್ರೆ

Update: 2020-02-05 14:23 GMT

ಮುಂಬೈ, ಫೆ.5: ಪೌರತ್ವ ಕಾಯ್ದೆ ಹಿಂದುಗಳ ಸಹಿತ ಎಲ್ಲಾ ಧರ್ಮದವರ ಮೇಲೂ ಪರಿಣಾಮ ಬೀರುತ್ತದೆ. ಈ ಕಾಯ್ದೆ ಜಾರಿಯಾಗಲು ತನ್ನ ಸರಕಾರ ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಪ್ರಕಟವಾದ ಸಂದರ್ಶನದ ಅಂತಿಮ ಕಂತಿನಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಪ್ರಸ್ತಾಪಿಸಿರುವ ಠಾಕ್ರೆ, ಪೌರತ್ವ ಕಾಯ್ದೆಯು ದೇಶದ ನಾಗರೀಕರನ್ನು ದೇಶದಿಂದ ಹೊರಗಟ್ಟುವ ಉದ್ದೇಶ ಹೊಂದಿಲ್ಲ ಎಂಬುದನ್ನು ವಿಶ್ವಾಸದಿಂದ ಹೇಳಬಲ್ಲೆ. ಆದರೆ ಈ ಕಾಯ್ದೆಯು ಹಿಂದುಗಳ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಎನ್‌ಆರ್‌ಸಿ ಪ್ರಕ್ರಿಯೆಯಡಿ ಎಲ್ಲಾ ಪೌರರೂ ತಮ್ಮ ಪೌರತ್ವ ಸಾಬೀತುಪಡಿಸಬೇಕು. ಅಸ್ಸಾಂನಲ್ಲಿ 19 ಲಕ್ಷ ಜನರು ತಮ್ಮ ಪೌರತ್ವ ಸಾಬೀತುಪಡಿಸಲು ವಿಫಲವಾಗಿದ್ದು ಇದರಲ್ಲಿ 14 ಲಕ್ಷ ಹಿಂದೂಗಳು. ಎನ್‌ಆರ್‌ಸಿ ಜಾರಿಯಾದರೆ ಈಗ ಅದನ್ನು ಬೆಂಬಲಿಸುವವರ ಮೇಲೂ ಪರಿಣಾಮ ಬೀರುತ್ತದೆ ಎಂದು ಪೌರತ್ವ ಕಾಯ್ದೆ ಬೆಂಬಲಿಸುತ್ತಿರುವ ತನ್ನ ಸೋದರ ಸಂಬಂಧಿ ರಾಜ್‌ಠಾಕ್ರೆಯವರನ್ನು ಪರೋಕ್ಷವಾಗಿ ಟೀಕಿಸಿದರು. ತಮ್ಮ ದೇಶದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ ನೆರೆದೇಶಗಳ ಅಲ್ಪಸಂಖ್ಯಾತರ ಬಗ್ಗೆ ತಿಳಿದುಕೊಳ್ಳಲು ಭಾರತೀಯರಿಗೆ ಹಕ್ಕು ಇದೆ. ಅವರು ಇಲ್ಲಿಗೆ ಬಂದಾಗ ಅವರಿಗೆ ಪ್ರಧಾನಮಂತ್ರಿ ಆವಾಸ್(ವಸತಿ) ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗುತ್ತದೆಯೇ? ಅವರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಕತೆ ಏನು? ಇಂತಹ ಪ್ರಮುಖ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ಇದೆ. ನನ್ನ ರಾಜ್ಯದಲ್ಲಿ ಇವರಿಗೆ ಉಳಿದುಕೊಳ್ಳಲು ಎಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂಬುದನ್ನು ಮುಖ್ಯಮಂತ್ರಿಯಾಗಿ ತಿಳಿದುಕೊಳ್ಳುವ ಅಧಿಕಾರ ತನಗಿದೆ. ರಾಜ್ಯದ ಜನತೆಗೇ ಸೂಕ್ತ ವಸತಿ ಸೌಕರ್ಯವಿಲ್ಲ. ಹೀಗಿರುವಾಗ ಹೊಸದಾಗಿ ಬರುವವರನ್ನು ಹೇಗೆ ನೆಲೆಗೊಳಿಸಲಾಗುತ್ತದೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ. ಪಾಕ್ ಮೂಲದ ಗಾಯಕ ಅದ್ನಾನ್ ಸಮಿಗೆ ಪದ್ಮಶ್ರೀ ಪುರಸ್ಕಾರ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿದ ಠಾಕ್ರೆ, ವಲಸಿಗರು ವಲಸಿಗರೇ. ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News