ಸಿಎಎ ಮುಸ್ಲಿಮರಿಗೆ ಮಾತ್ರವಲ್ಲ, ಎಸ್‌ಸಿ/ಎಸ್‌ಟಿಗಳಿಗೂ ತೊಂದರೆಯುಂಟು ಮಾಡುತ್ತದೆ: ಮಧ್ಯ ಪ್ರದೇಶ ಬಿಜೆಪಿ ನಾಯಕ
ಹೊಸದಿಲ್ಲಿ,ಫೆ.5: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಟೀಕಿಸಿರುವ ಮಧ್ಯಪ್ರದೇಶದ ಬಿಜೆಪಿ ನಾಯಕ ಅಜಿತ್ ಬೊರ್ಸಾಯಿ ಅವರು,ಸಿಎಎ ಮತ್ತು ಎನ್‌ಆರ್‌ಸಿ ಮುಸ್ಲಿಮರಿಗೆ ಮಾತ್ರವಲ್ಲ,ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೂ ತೊಂದರೆಯನ್ನುಂಟು ಮಾಡುತ್ತವೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಶಾಸಕ ನಾರಾಯಣ ತ್ರಿಪಾಠಿ ಅವರೂ ಕೆಲವು ದಿನಗಳ ಹಿಂದೆ ಸಿಎಎಗೆ ವಿರೋಧ ವ್ಯಕ್ತಪಡಿಸಿ,ಅದು ದೇಶಕ್ಕೆ ಅಪಾಯಕಾರಿ ಎಂದು ಬಣ್ಣಿಸಿದ್ದರು.
‘ಕಾಯ್ದೆಯನ್ನು ಒಮ್ಮೆ ಓದಿದರೆ ನಿಮಗೇ ಅರ್ಥವಾಗುತ್ತದೆ. ಗುಂಪಿನೊಳಗೆ ಒಂದಾಗುವ ಮನಃಸ್ಥಿತಿ ನನ್ನದಲ್ಲ. ಇಂತಹ ತಪ್ಪುಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ ’ ಎಂದೂ ಬೊರ್ಸಾಯಿ ಟ್ವೀಟಿಸಿದ್ದಾರೆ.
ಆದರೆ ಕೆಲವೇ ವಾರಗಳ ಹಿಂದೆ ಸಿಎಎ ಅನ್ನು ಬೆಂಬಲಿಸಿದ್ದ ಅವರು,ತನಗೆ ತಿಳಿದಿರುವಂತೆ ಅದು ಯಾವುದೇ ‘ಹಿಂದುಸ್ಥಾನಿ’ಯ ವಿರುದ್ಧವಾಗಿಲ್ಲ ಎಂದು ಹೇಳಿದ್ದರು.
ಬೊರ್ಸಾಯಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಉಜ್ಜೈನ್ ಜಿಲ್ಲೆಯ ಅಲೋಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ತಂದೆ ಪ್ರೇಮಚಂದ್ ಗುಡ್ಡು ಉಜ್ಜೈನ್‌ನಿಂದ ಕಾಂಗ್ರೆಸ್ ಲೋಕಸಭಾ ಸದಸ್ಯರಾಗಿದ್ದರು. 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ತಂದೆ-ಮಗ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.