×
Ad

ಲೋಕಸಭೆ:ತೆರಿಗೆ ವಿವಾದಗಳ ಇತ್ಯರ್ಥಕ್ಕೆ ‘ವಿವಾದ ಸೆ ವಿಶ್ವಾಸ್’ ಮಸೂದೆ ಮಂಡನೆ

Update: 2020-02-05 20:07 IST

ಹೊಸದಿಲ್ಲಿ,ಫೆ.5: ತೆರಿಗೆ ವಿವಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಉದ್ದೇಶಿಸಿರುವ ‘ವಿವಾದ ಸೆ ವಿಶ್ವಾಸ್ ಮಸೂದೆ,2020 ’ನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಪ್ರಕರಣಗಳಲ್ಲಿ 9.32 ಲ.ಕೋ.ರೂ.ಗಳ ಮೊತ್ತ ಸಿಕ್ಕಿಹಾಕಿಕೊಂಡಿದೆ.

ವಿವಿಧ ನ್ಯಾಯಾಧಿಕರಣಗಳಲ್ಲಿ ಬಾಕಿಯುಳಿದಿರುವ 4,83,000 ನೇರ ತೆರಿಗೆ ವಿವಾದಗಳನ್ನು ಬಗೆಹರಿಸುವ ಉದ್ದೇಶದ ‘ವಿವಾದ ಸೆ ವಿಶ್ವಾಸ್’ ಯೋಜನೆಯನ್ನು ಸೀತಾರಾಮನ್ ಫೆ.1ರಂದು ತನ್ನ ಮುಂಗಡಪತ್ರ ಭಾಷಣದಲ್ಲಿ ಪ್ರಕಟಿಸಿದ್ದರು. ಈ ಯೋಜನೆಯಡಿ ತೆರಿಗೆ ವಿವಾದಗಳನ್ನು ಹೊಂದಿರುವ ತೆರಿಗೆದಾರರು ಮಾ.31ರೊಳಗೆ ತಮ್ಮ ತೆರಿಗೆ ಬಾಕಿಗಳನ್ನು ಪಾವತಿಸಿ ಬಡ್ಡಿ ಮತ್ತು ದಂಡ ತುಂಬುವುದರಿಂದ ಪಾರಾಗಬಹುದು.

ಮಸೂದೆಯು ವಿಶ್ವಾಸ ನಿರ್ಮಾಣಕ್ಕೆ ಒತ್ತು ನೀಡಲಿದೆ ಎಂದು ಹೇಳಿದ ಸೀತಾರಾಮನ್,ಯೋಜನೆಯು ಸೀಮಿತ ಅವಧಿಯದ್ದಾಗಿದೆ. ಉದ್ದೇಶಿತ ಕಾನೂನು ಯಾವುದೇ ತಾರತಮ್ಯವಿಲ್ಲದೆ ಸೂತ್ರ ಆಧಾರಿತ ಪರಿಹಾರವನ್ನು ಒದಗಿಸಲಿದೆ. ಅದು ಸರಕಾರದ ವ್ಯಾಜ್ಯ ವೆಚ್ಚದ ಹೊರೆಯನ್ನು ಕಡಿಮೆ ಮಾಡಲಿದೆ ಮತ್ತು ಆದಾಯ ಸೃಷ್ಟಿಗೆ ನೆರವಾಗಲಿದೆ ಎಂದರು.

ಮಸೂದೆ ಮಂಡನೆಯನ್ನು ವಿರೋಧಿಸಿದ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಆಧಿರ್ ರಂಜನ್ ಚೌಧುರಿ ಅವರು,ಮಸೂದೆಯನ್ನು ಹಿಂದಿಯಲ್ಲಿ ನಾಮಕರಣಗೊಳಿಸುವ ಮೂಲಕ ಕೇಂದ್ರವು ಇಡೀ ದೇಶದ ಮೇಲೆ ಆ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದು ಸರಕಾರದ ತೆರಿಗೆ ಸಂಗ್ರಹಕ್ಕೂ ಹೊಡೆತ ನೀಡಲಿದೆ ಎಂದರು.

ನೂತನ ಮಸೂದೆಯು ಪ್ರಾಮಾಣಿಕರು ಮತ್ತು ಅಪ್ರಾಮಾಣಿಕರನ್ನು ಒಂದೇ ರೀತಿಯಲ್ಲಿ ಪರಿಗಣಿಸುವ ಮೂಲಕ ಸಮಾನತೆಯ ನೀತಿಯನ್ನು ಉಲ್ಲಂಘಿಸಿದೆ ಎಂದು ಇನ್ನೋರ್ವ ಕಾಂಗ್ರೆಸ್ ಸಂಸದ ಶಶಿ ತರೂರ ಹೇಳಿದರು.

 ಮಸೂದೆಯ ಹೆಸರಿನ ಕುರಿತು ವಿವಾದ ಬಗೆಹರಿಸಲು ಮುಂದಾದ ಸೀತಾರಾಮನ್,ಮಸೂದೆಯ ಕರಡನ್ನು ಸಿದ್ಧಗೊಳಿಸುವಾಗ ಹಿಂದಿ ಹೆಸರನ್ನು ಬಳಸಲಾಗಿದೆ,ಆದರೆ ಹಿಂದಿ ಹೇರಿಕೆ ನಡೆಯುತ್ತಿದೆ ಎನ್ನುವುದು ಇದರ ಅರ್ಥವಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News