ಶಾಸಕರ ಭವನದ ದಿಗ್ಭಂಧನದಿಂದ ಗೃಹಬಂಧನಕ್ಕೆ ಇಬ್ಬರು ಕಾಶ್ಮೀರಿ ನಾಯಕರ ಸ್ಥಳಾಂತರ

Update: 2020-02-05 15:01 GMT

ಶ್ರೀನಗರ,ಫೆ.5: ಕಳೆದ ವರ್ಷದ ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಾಗಿನಿಂದ ಶಾಸಕರ ಭವನದಲ್ಲಿ ಬಂದಿಗಳಾಗಿದ್ದ ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜಾದ್ ಲೋನ ಮತ್ತು ಪಿಡಿಪಿ ನಾಯಕ ವಹೀದ್ ಪಾರ್ರಾ ಅವರನ್ನು ಬುಧವಾರ ಬಿಡುಗಡೆಗೊಳಿಸಿ ಗೃಹಬಂಧನದಲ್ಲಿರಿಸಲಾಗಿದೆ.

ಉಪ ಕಾರಾಗೃಹವೆಂದು ಪರಿಗಣಿಸಲಾಗಿರುವ ಶಾಸಕರ ಭವನದಿಂದ ಈ ಇಬ್ಬರ ಬಿಡುಗಡೆಯ ಬಳಿಕ ಅಲ್ಲೀಗ 13 ರಾಜಕಾರಣಿಗಳ ದಿಗ್ಬಂಧನದಲ್ಲಿ ಮುಂದುವರಿದಿದೆ. ಜಮ್ಮು-ಕಾಶ್ಮೀರ ಆಡಳಿತವು ಮಂಗಳವಾರ ಮಾಜಿ ಪಿಡಿಪಿ ಶಾಸಕ ಐಜಾಝ್ ಅಹ್ಮದ್ ಮಿರ್ ಮತ್ತು ಕಾರ್ಮಿಕ ನಾಯಕ ಶಕೀಲ್ ಅಹ್ಮದ್ ಕಲಂದರ್ ಅವರನ್ನು ಬಿಡುಗಡೆಗೊಳಿಸಿತ್ತು. ರವಿವಾರದಿಂದೀಚಿಗೆ ಒಟ್ಟು ಎಂಟು ನಾಯಕರನ್ನು ದಿಗ್ಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ,ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರು ಈಗಲೂ ಬಂಧನದಲ್ಲಿದ್ದಾರೆ.

ಜಮ್ಮು-ಕಾಶ್ಮೀರದ ರಾಜಕಿಯ ನಾಯಕರ ಬಂಧನವು ಬುಧವಾರ ಸಂಸತ್ತಿನಲ್ಲಿ ಪ್ರಸ್ತಾಪಗೊಂಡಿದ್ದು,ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ಆರು ತಿಂಗಳುಗಳಾದರೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳ ಬಂಧನ ಮುಂದುವರಿದಿದೆ,ಭಾರತವು ಈಗಲೂ ಪ್ರಜಾಪ್ರಭುತ್ವವಾಗಿದೆಯೇ ಎಂದು ಅಚ್ಚರಿಯುಂಟಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News