ಅಮಾನತುಲ್ಲಾ ಖಾನ್ ರ 'ಝರಿಯಾ' ಸಂಬಿತ್ ಪಾತ್ರಾಗೆ 'ಶರಿಯಾ ಆದ ಕಥೆ !

Update: 2020-02-06 17:29 GMT

ಹೊಸದಿಲ್ಲಿ: ಸುಳ್ಳು ಸುದ್ದಿಗಳನ್ನು ಟ್ವೀಟ್ ಮಾಡುತ್ತಾ ನಗೆಪಾಟಲಿಗೀಡಾಗುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಈ ಬಾರಿ ಮತ್ತೊಂದು ವಿಡಿಯೋದಿಂದ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ.

ಈ ಬಾರಿ ಅವರು ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಓಖ್ಲಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅಮಾನತುಲ್ಲಾ ಖಾನ್ ಅವರ ಹೇಳಿಕೆಯೊಂದನ್ನು ತಿರುಚಿ ಸುಳ್ಳು ಪ್ರಚಾರ ಮಾಡುವ ಯತ್ನ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ, "ದಬ್ಬಾಳಿಕೆಗೊಂದು ಕೊನೆ ಇರಬೇಕು ಎಂದು ಅಲ್ಲಾಹನು ನಿರ್ಧರಿಸಿದ್ದಾನೆ. ನಾವು ಶರಿಯಾವನ್ನು ಅನುಸರಿಸುತ್ತೇವೆ. ಇದು ಎಲ್ಲಿಂದಲೋ ಆರಂಭವಾಗಬೇಕು?" ಎಂದು ಅಮಾನತುಲ್ಲಾ ಖಾನ್ ಹೇಳಿದ್ದಾಗಿ ಪಾತ್ರಾ ಟ್ವೀಟ್  ನಲ್ಲಿ ಆರೋಪಿಸಿದ್ದರು. ಈ ಟ್ವೀಟ್ ಗಾಗಿ ಅವರು ಒಂದು ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು. 15 ಸಾವಿರ ಬಾರಿ ಈ ಟ್ವೀಟ್ ರಿಟ್ವೀಟ್ ಆಗಿತ್ತು.

ಇದಿಷ್ಟೇ ಅಲ್ಲದೆ ಸಂಬಿತ್ ಪಾತ್ರಾ ಇದು ಆಮ್ ಆದ್ಮಿ ಪಕ್ಷದ ಸಿದ್ಧಾಂತ ಎಂದಿದ್ದರು. "ಎಲ್ಲವನ್ನೂ ಅಲ್ಲಾಹನೇ ನಿರ್ಧರಿಸುತ್ತಾನೋ ಅಥವಾ ನಿರ್ಧರಿಸುವವರು ನೀವೋ? ನೀವು ಶರಿಯಾ ಆಗಲು ಬಯಸಿದ್ದೀರೋ ಅಥವಾ ಇಲ್ಲವೇ?" ಎಂದು ಪ್ರಶ್ನಿಸಿದ್ದರು.

ವಾಸ್ತವವೇನು?

ಆದರೆ ಈ ವಿಡಿಯೋದ ಸತ್ಯಾಂಶದ ಬಗ್ಗೆ ಪರಿಶೀಲಿಸಿದಾಗ ಅಮಾನತುಲ್ಲಾ 'ಹಮ್ ಝರಿಯಾ ಬನೇಂಗೇ' ಎಂದು ಹೇಳಿದ್ದರು ಎನ್ನುವುದು ಖಚಿತಗೊಂಡಿದೆ. ಆದರೆ ಸಂಬಿತ್ ಪಾತ್ರಾ ಮತ್ತು ಇತರ ಬಿಜೆಪಿ ಬೆಂಬಲಿಗರು 'ಝರಿಯಾ'ವನ್ನು  'ಶರಿಯಾ' ಎಂದು ತಿರುಚಿದ್ದಾರೆ.

ಹೀಗಾಗಿ ಅಮಾಮತುಲ್ಲಾ ಖಾನ್ ಮಾತುಗಳ ಅರ್ಥ, "ದಬ್ಬಾಳಿಕೆಗೊಂದು ಕೊನೆ ಇರಬೇಕು ಎಂದು ಅಲ್ಲಾಹನು ನಿರ್ಧರಿಸಿದ್ದಾನೆ. ನಮಗೊಂದು ದಾರಿ ಸಿಗುತ್ತದೆ. ಇದು ಎಲ್ಲಿಂದಲೋ ಆರಂಭವಾಗಬೇಕು?" ಎಂದಾಗಿದೆ.

ಬಿಜೆಪಿ ವಕ್ತಾರರ ಈ ಸುಳ್ಳು ಬಯಲಾಗುತ್ತಲೇ ಹಲವು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದು, 'ಕಿವಿಗೆ ಎಣ್ಣೆ ಬಿಟ್ಟಿದ್ದೀರಾ' ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News