ಸಿಎಎ ಪ್ರತಿಭಟನೆ: ದೇಶದ್ರೋಹ ಆರೋಪದಲ್ಲಿ 135 ಜನರ ವಿರುದ್ಧ ಎಫ್‌ಐಆರ್, 20 ಜನರ ಬಂಧನ

Update: 2020-02-06 17:47 GMT
ಫೈಲ್ ಚಿತ್ರ

ಅಝಮ್‌ಗಡ(ಉ.ಪ್ರ),ಫೆ.6: ನಗರದ ಬಿಲರಿಯಾಗಂಜ್ ಪ್ರದೇಶದಲ್ಲಿ ಮಂಗಳವಾರ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ 135 ಜನರ ವಿರುದ್ಧ ದೇಶದ್ರೋಹ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಪೈಕಿ 20 ಜನರನ್ನು ಬಂಧಿಸಿದ್ದಾರೆ.

 ಎಫ್‌ಐಆರ್ ‌ನಲ್ಲಿ ಕೇವಲ 35 ಜನರನ್ನು ಹೆಸರಿಸಲಾಗಿದ್ದು,ಉಳಿದವರು ಅಪರಿಚಿತ ವ್ಯಕ್ತಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳಲ್ಲಿ ದೇಶದ್ರೋಹ ಒಂದಾಗಿದೆ.

 ಪೊಲೀಸರು ತಮ್ಮನ್ನು ಥಳಿಸಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆದರೆ ಪ್ರತಿಭಟನಾಕಾರರು ನಿಯಂತ್ರಣ ಮೀರಿದಾಗ ಅವರನ್ನು ಎದುರಿಸಲು ತಾವು ಅಶ್ರುವಾಯು ಪ್ರಯೋಗಿಸಿದ್ದೆವು ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಉಲಮಾ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯದರ್ಶಿ ವೌಲಾನಾ ತಾಹಿರ್ ಮದನಿ ಅವರನ್ನು ಬುಧವಾರ ಬಂಧಿಸಲಾಗಿದ್ದು,ತಲೆಮರೆಸಿಕೊಂಡಿರುವ ಉಲೇಮಾ ಕೌನ್ಸಿಲ್‌ನ ನಾಯಕರಾದ ನೂರುಲ್ ಹುದಾ,ಮಿರ್ಝಾ ಶೇನ್ ಆಲಂ ಮತ್ತು ಒಸಾಮಾ ಅವರ ಮೇಲೆ ತಲಾ 25,000 ರೂ.ಗಳ ಬಹುಮಾನವನ್ನು ಪ್ರಕಟಿಸಲಾಗಿದೆ ಎಂದು ಎಸ್‌ಪಿ ತ್ರಿವೇಣಿ ಸಿಂಗ್ ತಿಳಿಸಿದರು.

 ಪ್ರತಿಭಟನಾಕಾರರು ಹಿಂದುಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಭ್ಯ ಭಾಷೆಯನ್ನು ಬಳಸಿದ್ದರು ಎಂದು ಅವರು ಆರೋಪಿಸಿದರು.

ಬಿಲರಿಯಾಗಂಜ್ ಪ್ರದೇಶದಲ್ಲಿ ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಮಕ್ಕಳು ಸೇರಿದಂತೆ 19 ಜನರನ್ನು ಪೊಲೀಸರು ಥಳಿಸಿದ್ದಾರೆ ಮತ್ತು ಬಂಧಿಸಿದ್ದಾರೆ ಎಂದು ಎನ್‌ಜಿಒ ಅಲ್ ಫಲಾಹ್ ಫ್ರಂಟ್ ಆರೋಪಿಸಿದೆ.

ಮುಹಮ್ಮದ್ ಅಲಿ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ನಮಾಝ್‌ಗಾಗಿ ಎದ್ದಾಗ ಪೊಲೀಸರು ಅವರನ್ನು ನಿಂದಿಸಿದ್ದರು,ಬೆದರಿಕೆಯನ್ನೂ ಒಡ್ಡಿದ್ದರು. ಪ್ರತಿಭಟನಾಕಾರರನ್ನು ಥಳಿಸಿ,ಅವರತ್ತ ಕಲ್ಲು ತೂರಾಟ ನಡೆಸುವ ಮೂಲಕ ಪೊಲೀಸರು ಉದ್ವಿಗ್ನತೆಯನ್ನು ಸೃಷ್ಟಿಸಿದ್ದರು. ಮಹಿಳೆಯರ ಕೂದಲು ಹಿಡಿದೆಳೆದು ಅವರನ್ನು ತೀವ್ರವಾಗಿ ಥಳಿಸಲಾಗಿದೆ. ಶರವಾರಿ ಬಾನು ಎಂಬಾಕೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಎನ್‌ಜಿಒದ ಝಾಕಿರ್ ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ವೌಲಾನಾ ಮದನಿಯವರ ಮೇಲೆ ಒತ್ತಡ ಹೇರಲಾಗಿತ್ತು ಮತ್ತು ಗಂಭೀರ ಪರಿಣಾಮಗಳ ಎಚ್ಚರಿಕೆಯನ್ನು ನೀಡಲಾಗಿತ್ತು ಎಂದು ಎನ್‌ಜಿಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News