ಎಚ್ಚರ… ಈ ಜಾಹೀರಾತುಗಳಿಗೆ 5 ವರ್ಷ ಜೈಲು, 50ಲಕ್ಷ ರೂ. ದಂಡ

Update: 2020-02-06 17:53 GMT

ಹೊಸದಿಲ್ಲಿ, ಫೆ. 6: ಔಷಧ ಹಾಗೂ ಮಾಂತ್ರಿಕ ಪರಿಹಾರಗಳು (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ 1954ಕ್ಕೆ ತಿದ್ದುಪಡಿ ತರಲು ಕೇಂದ್ರ ಸರಕಾರ ಗುರುವಾರ ಪ್ರಸ್ತಾವ ಸಲ್ಲಿಸಿದೆ. ಕೇಂದ್ರ ಸರಕಾರ ಸಿದ್ದಪಡಿಸಿದ ಕರಡು ಮಸೂದೆ ಪ್ರಕಾರ, ಸುಂದರ ಚರ್ಮ, ಕಿವುಡುತನ, ಎತ್ತರ ಹೆಚ್ಚಿಸುವಿಕೆ, ಕೂದಲು ಉದುರುವಿಕೆ, ಬೊಜ್ಜು ಹಾಗೂ ಇತರ ಕೆಲವು ವಿಷಯಗಳಿಗೆ ಸಂಬಂಧಿಸಿದ ಔಷಧ ಉತ್ಪನ್ನಗಳ ಜಾಹೀರಾತು ಪ್ರಕಟಿಸುವವರಿಗೆ 50 ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ವಿಧಿಸಬಹುದು.

ನೂತನ ಕರಡು ಔಷಧ ಹಾಗೂ ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) (ತಿದ್ದುಪಡಿ) ಮಸೂದೆ-2020ರ ಅಡಿಯಲ್ಲಿ ಮೊದಲ ಅಪರಾಧ ಪ್ರಕರಣಕ್ಕೆ 10 ಲಕ್ಷ ರೂಪಾಯಿವರೆಗೆ ದಂಡ ಹಾಗೂ ಎರಡು ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ಪ್ರಸ್ತಾಪಿಸಿದೆ. ಅನಂತರದ ಅಪರಾಧ ಪ್ರಕರಣಕ್ಕೆ 5 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಲಕ್ಷ ರೂಪಾಯಿಗಳ ವರೆಗೆ ದಂಡ ಪ್ರಸ್ತಾಪಿಸಿದೆ.

ಸದ್ಯ ಇರುವ ಕಾನೂನಿನಲ್ಲಿ ಮೊದಲ ಅಪರಾಧ ಪ್ರಕರಣಕ್ಕೆ ದಂಡವಿದ್ದು ಅಥವಾ ದಂಡವಿಲ್ಲದೆ 6 ತಿಂಗಳ ವರೆಗೆ ಕಾರಾಗೃಹ ಶಿಕ್ಷೆ. ಎರಡನೇ ಅಪರಾಧ ಪ್ರಕರಣಕ್ಕೆ 1 ವರ್ಷ ಕಾರಾಗೃಹ ಶಿಕ್ಷೆ. ಬದಲಾಗುತ್ತಿರುವ ಕಾಲ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಈ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

ಕರಡು ಮಸೂದೆಯಲ್ಲಿ ಸಚಿವಾಲಯ, ಈ ಕರಡು ನಿರ್ದಿಷ್ಟಪಡಿಸಿದ 78 ರೋಗಗಳು, ಅಸೌಖ್ಯತೆ ಗುಣಪಡಿಸುವ ಔಷಧ ಹಾಗೂ ಉತ್ಪನ್ನಗಳ ಜಾಹೀರಾತನ್ನು ನಿಷೇಧಿಸಲು ಪ್ರಸ್ತಾಪಿಸಿದೆ. ಈ ಹಿಂದಿನ ಕಾಯ್ದೆ 54 ರೋಗಗಳು, ಅಸೌಖ್ಯಗಳನ್ನು ಮಾತ್ರ ಒಳಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News