ರವೀಶ್ ಕುಮಾರ್ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ: ಪ್ರಯಾಣಿಕನಿಗೆ ಗಾಯ

Update: 2020-02-07 08:36 GMT

ಗೋರಖಪುರ್: ಹಿರಿಯ ಪತ್ರಕರ್ತ ರವೀಶ್ ಕುಮಾರ್ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ಸರಕಾರಿ ಬಸ್ ಮೇಲೆ ಕೆಲ ಅಪರಿಚಿತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ನಡೆದಿದೆ.

ಬಸ್ ಕುಸುಮ್ಹಿ ಅರಣ್ಯ ಪ್ರದೇಶದ ಮುಖಾಂತರ ಹಾದು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಬಸ್ ಚಾಲಕ ಅವಧ್ ಬಿಹಾರಿ  ನೀಡಿದ ದೂರಿನ ಆಧಾರದಲ್ಲಿ ಬುಧವಾರ ಮುಂಜಾನೆ 1 ಗಂಟೆಗೆ ಕ್ಯಾಂಟೋನ್ಮೆಂಟ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಘಟನೆಯಲ್ಲಿ ಬಸ್ಸಿನ ಒಂದು ಕಿಟಿಕಿ ಗಾಜು ಕೂಡ ಮುರಿದಿತ್ತು.

ಘಟನೆ ನಡೆದ ನಂತರ ಗಾಯಾಳು ಪ್ರಯಾಣಿಕನಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕರೆದೊಯ್ಯಲಾಯಿತು. ಘಟನೆಯ ತನಿಖೆ ಆರಂಭಿಸಲಾಗಿದ್ದು ಸಿಸಿಟಿವಿ ದೃಶ್ಯಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಎನ್‍ ಡಿಟಿವಿ ಪತ್ರಕರ್ತರಾಗಿರುವ ರವೀಶ್ ಕುಮಾರ್ ತಮ್ಮ ಫೇಸ್‍ ಬುಕ್ ಪೇಜ್ ನಲ್ಲಿ ಕಲ್ಲು ತೂರಾಟದಿಂದ ಹಾನಿಗೊಂಡ ಬಸ್ಸಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ತುರ್ತು ಸಹಾಯವಾಣಿ 112ಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆಯಿರಲಿಲ್ಲ ಎಂದು ರವೀಶ್ ಕುಮಾರ್ ಹೇಳಿದ್ದಾರೆ. ನಂತರ ಅವರು ಗೋರಖಪುರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿದಾಗ ಅವರ ಪಿಆರ್‍ಒ ಫೋನ್ ಸ್ವೀಕರಿಸಿದ್ದು ನಂತರ ಪೊಲೀಸರು ಸ್ಥಳಕ್ಕಾಗಮಿಸಿದ್ದರು.

ಕಲ್ಲು ತೂರಾಟ ನಡೆದಾಗ ಚಾಲಕ ಬಸ್ಸು ನಿಲ್ಲಿಸಿರಲಿಲ್ಲ ಹಾಗೂ ದುಷ್ಕರ್ಮಿಗಳ ಕುರಿತಂತೆ ಆತನಿಗೆ ಯಾವುದೇ ಮಾಹಿತಿಯಿಲ್ಲ ಎಂದು ಗೋರಖಪುರ್ ಎಸ್‍ಎಸ್‍ಪಿ ಸುನೀಲ್ ಕುಮಾರ್ ಗುಪ್ತಾ ಹೇಳಿದ್ದಾರೆ.

ಕಲ್ಲು ತೂರಾಟಕ್ಕೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News