ಮೋದಿ ಪ್ರಧಾನಿಯಂತೆ ವರ್ತಿಸುತ್ತಿಲ್ಲ: ರಾಹುಲ್ ಗಾಂಧಿ

Update: 2020-02-07 16:04 GMT

ಹೊಸದಿಲ್ಲಿ, ಫೆ.7: ಸಾಮಾನ್ಯವಾಗಿ ಪ್ರಧಾನಮಂತ್ರಿ ತನ್ನದೇ ಆದ ಘನತೆ, ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಗೆ ಇದ್ಯಾವುದೂ ಇಲ್ಲ. ಅವರು ಪ್ರಧಾನಿಯಂತೆ ವರ್ತಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ‘ಟ್ಯೂಬ್‌ಲೈಟ್’ ಪದ ಬಳಸಿ ವ್ಯಂಗ್ಯವಾಡಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿಯವರ ವರ್ತನೆ ಪ್ರಧಾನಮಂತ್ರಿ ಹುದ್ದೆಯ ಘನತೆಗೆ ಹೇಳಿಸಿದ್ದಲ್ಲ ಎಂದರು.

ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಉದ್ಯೋಗದ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಸರಕಾರದ ವೈಫಲ್ಯವನ್ನು ಮರೆಮಾಚಲು ಪ್ರಧಾನಿ ಮೋದಿ ಅನಗತ್ಯ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳನ್ನು ಟೀಕಿಸುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ದಿಲ್ಲಿ ಚುನಾವಣೆಯ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಉದ್ಯೋಗ ಕೊರತೆಯಿಂದ ಆಕ್ರೋಶಗೊಂಡಿರುವ ದೇಶದ ಯುವಜನತೆ ಮೋದಿಗೆ ಬಡಿಗೆಯಿಂದ ಬಡಿದು ದೇಶದಿಂದ ಹೊರಗೆಸೆಯುತ್ತಾರೆ ಎಂದು ಹೇಳಿದ್ದರು.

ಈ ಹೇಳಿಕೆಯ ಬಗ್ಗೆ ಶುಕ್ರವಾರ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರು ಪ್ರಸ್ತಾವಿಸಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಲಿಸ್ಟ್‌ನಲ್ಲಿ ಗುರುತು ಮಾಡಿದ್ದ ಪ್ರಶ್ನೆಯನ್ನು ಕಾಂಗ್ರೆಸ್ ಸಂಸದರು ಕೇಳಿದಾಗ ಇದಕ್ಕೆ ಉತ್ತರಿಸುವ ಬದಲು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಹುಲ್ ಗಾಂಧಿಯ ವರ ವಿಲಕ್ಷಣ ಹೇಳಿಕೆ ಖಂಡನೀಯವಾಗಿದೆ ಎಂದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಗಾಂಧಿ, ನಮ್ಮನ್ನು ಹತ್ತಿಕ್ಕಲಾಗುತ್ತಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶ ನೀಡದೆ ಅವರು ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News