ಕಲ್ಕಜಿ ವಿಧಾನಸಭಾ ಕ್ಷೇತ್ರದಲ್ಲಿ ಆಪ್ ನಾಯಕಿ ಅತಿಶಿಗೆ ಭರ್ಜರಿ ಜಯ
Update: 2020-02-11 14:32 IST
ಹೊಸದಿಲ್ಲಿ, ಫೆ.11: ಎರಡೂ ಪಕ್ಷದ ಅಭ್ಯರ್ಥಿಗಳ ನಡುವಿನ ಜಿದ್ದಾಜಿದ್ದಿಯ ಹೋರಾಟಕ್ಕೆ ವೇದಿಕೆಯಾಗಿದ್ದ ಪ್ರತಿಷ್ಠಿತ ಕಲ್ಕಾಜಿ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅತಿಶಿ ಬಿಜೆಪಿಯ ಧರಮ್‌ಬೀರ್ ಸಿಂಗ್ ಎದುರು 11,333 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಅಷ್ಟೇನೂ ಅನುಭವವಿರದ 38 ವರ್ಷದ ಅತಿಶಿ ಶಿಕ್ಷಣ ತಜ್ಞೆಯಾಗಿ ಗುರುತಿಸಿಕೊಂಡವರು. ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಆಪ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋಲುಂಡಿದ್ದರು. ಆದರೆ ಎರಡನೇ ಪ್ರಯತ್ನದಲ್ಲಿ ಬಿಜೆಪಿಯ ಬಲಿಷ್ಟ ಅಭ್ಯರ್ಥಿಯನ್ನು ಮಣ್ಣು ಮುಕ್ಕಿಸಲು ಯಶಸ್ವಿಯಾಗಿದ್ದಾರೆ.
ಅರವಿಂದ್ ಕೇಜ್ರಿವಾಲರನ್ನು ದಿಲ್ಲಿಯ ಜನತೆ ಬೆಂಬಲಿಸಿರುವುದು ಸ್ಪಷ್ಟವಾಗಿದೆ. ದಿಲ್ಲಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಅವರ ಕಾರ್ಯವನ್ನು ಗಮನಿಸಿ ಅವರನ್ನು ಬೆಂಬಲಿಸಿದ್ದಾರೆ ಎಂದು ಆತಿಶಿ ಹೇಳಿದ್ದಾರೆ. ಅಲ್ಲದೆ ತಮ್ಮನ್ನು ಗೆಲ್ಲಿಸಿದ್ದಕ್ಕಾಗಿ ಜನತೆಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.