'ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ’ ಹೇಳಿಕೆ ನೀಡಿದ ಕಪಿಲ್ ಮಿಶ್ರಾಗೆ ಸೋಲು

Update: 2020-02-11 15:14 GMT

ಹೊಸದಿಲ್ಲಿ, ಫೆ. 11: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಡಿಸೆಂಬರ್ ‌ನಲ್ಲಿ ನಡೆದ ರ್ಯಾಲಿ ಉದ್ದೇಶಿಸಿ ‘ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ’ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಮೋಡೆಲ್ ಟೌನ್ ಕ್ಷೇತ್ರದಲ್ಲಿ 11,000 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.

ಇಲ್ಲಿ ಆಪ್‌ನ ಅಖಿಲೇಶ್ ಪಾಟಿ ತ್ರಿಪಾಠಿ ಜಯ ಗಳಿಸಿದ್ದಾರೆ. ಆಪ್ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮಿಶ್ರಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

 ‘‘ನಾವು ದಿಲ್ಲಿಯ ಜನರನ್ನು ತಲುಪಲು ವಿಫಲರಾಗಿದ್ದೇವೆ ಎಂಬುದು ಇದರ ಅರ್ಥ’’ ಎಂದು ಅವರು ಸೋಲುಂಡಿರುವುದನ್ನು ವ್ಯಾಖ್ಯಾನಿಸಿದ್ದಾರೆ. ‘‘ಇದು ದಿಲ್ಲಿ ಹಾಗೂ ಜನರ ಅಭಿವೃದ್ಧಿಯ ಗೆಲುವು’’ ಎಂದು ತ್ರಿಪಾಠಿ ಹೇಳಿದ್ದಾರೆ. ‘‘ದೇಶ ವಿಭಜಿಸಲು ಹಾಗೂ ಕೋಮ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲು ಬಯಸುತ್ತಿರುವ ಜನರಿಗೆ ಇದು ಸೂಕ್ತ ಪ್ರತಿಕ್ರಿಯೆ. ಇದು ಅರವಿಂದ ಕೇಜ್ರಿವಾಲ್ ಅವರ ಸುಂದರ ಕನಸಿನ ದಿಲ್ಲಿಯ ಜಯ’’ ಎಂದು ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ದಿಲ್ಲಿಯಲ್ಲಿ ಡಿಸೆಂಬರ್ 20ರಂದು ನಡೆದ ರ್ಯಾಲಿಯ ನೇತೃತ್ವವನ್ನು ಮಿತ್ರಾ ವಹಿಸಿದ್ದರು. ಈ ಸಂದರ್ಭ ಅವರು ಕೂಗಿದ ಪ್ರಚೋದಕ ಘೋಷಣೆ ‘ದೇಶ ದ್ರೋಹಿಗಳಿಗೆ ಗುಂಡು ಹೊಡೆಯಿರಿ’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News