ದಿಲ್ಲಿ ಚುನಾವಣೆ: ಕಾಂಗ್ರೆಸ್‌ನ 63 ಅಭ್ಯರ್ಥಿಗಳ ಠೇವಣಿ ನಷ್ಟ

Update: 2020-02-11 16:48 GMT

ಹೊಸದಿಲ್ಲಿ, ಫೆ.11: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ಕಳಪೆ ಸಾಧನೆ ದಾಖಲಿಸಿದ್ದು ಒಟ್ಟು ಚಲಾವಣೆಯಾದ ಮತಗಳಲ್ಲಿ ಕೇವಲ 5% ಮತ ಪಡೆಯಲು ಮಾತ್ರ ಶಕ್ತವಾಗಿದೆ. ಅಲ್ಲದೆ ಪಕ್ಷದ 63 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ 15 ವರ್ಷ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಆದರೆ ಸತತ ಎರಡನೇ ಅವಧಿಯಲ್ಲೂ ರಾಜ್ಯದಲ್ಲಿ ಖಾತೆ ತೆರೆಯಲು ಈ ಪಕ್ಷ ವಿಫಲವಾಗಿದೆ. ಈ ಬಾರಿ ಗಾಂಧೀನಗರ ಕ್ಷೇತ್ರದ ಅಭ್ಯರ್ಥಿ ಅರ್ವಿಂದರ್ ಸಿಂಗ್ ಲವ್ಲಿ, ಬಾದ್ಲಿ ಕ್ಷೇತ್ರದ ದೇವೇಂದರ್ ಯಾದವ್ ಮತ್ತು ಕಸ್ತೂರ್ಬಾ ನಗರ ಕ್ಷೇತ್ರದ ಅಭಿಷೇಕ್ ದತ್ ಮಾತ್ರ ಠೇವಣಿ ಉಳಿಸಿಕೊಳ್ಳಲು ಶಕ್ತರಾಗಿದ್ದಾರೆ.

ಆಯಾ ಕ್ಷೇತ್ರದಲ್ಲಿ ಚಲಾವಣೆಯಾಗಿರುವ ಒಟ್ಟು ಮತಗಳಲ್ಲಿ ಆರನೇ ಒಂದು ಪ್ರಮಾಣದ ಮತ ಪಡೆಯಲು ವಿಫಲವಾದ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಳ್ಳುತ್ತಾರೆ. ಠೇವಣಿ ಕಳೆದುಕೊಂಡವರಲ್ಲಿ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚೋಪ್ರಾರ ಪುತ್ರಿ ಶಿವಾನಿ ಚೋಪ್ರಾ , ದಿಲ್ಲಿ ವಿಧಾನಸಭೆಯ ಮಾಜಿ ಸ್ಪೀಕರ್ ಯೋಗಾನಂದ ಶಾಸ್ತ್ರಿಯ ಪುತ್ರಿ ಪ್ರಿಯಾಂಕ ಸಿಂಗ್, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೀರ್ತಿ ಆಝಾದ್ ಪತ್ನಿ ಪೂನಂ ಆಝಾದ್ ಕೂಡಾ ಸೇರಿದ್ದಾರೆ.

ಪಕ್ಷದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಸಾಧು ಸಿಂಗ್, ನಾವು ಈ ಹಿಂದಿನ ಚುನಾವಣೆಯಲ್ಲೂ ಶೂನ್ಯ ಸಂಪಾದಿಸಿದ್ದು ಈ ಬಾರಿಯೂ ಅದೇ ಫಲಿತಾಂಶ ಬಂದಿದೆ. ಇದು ಪಕ್ಷದ ಸೋಲಲ್ಲ. ಇದು ಬಿಜೆಪಿಯ ಸೋಲಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News