ಭಾರತ-ಪೆಸಿಫಿಕ್ ಕಾರ್ಯಕ್ರಮಕ್ಕೆ 2 ಬಿಲಿಯ ಡಾಲರ್ ನೀಡಿದ ಅಮೆರಿಕ

Update: 2020-02-11 16:59 GMT

ನ್ಯೂಯಾರ್ಕ್, ಫೆ. 11: ಮುಂದಿನ ಹಣಕಾಸು ವರ್ಷದ 4.4 ಟ್ರಿಲಿಯನ್ ಡಾಲರ್ (ಸುಮಾರು 313 ಲಕ್ಷ ಕೋಟಿ ರೂಪಾಯಿ) ಬಜೆಟ್‌ನಲ್ಲಿ ವಿದೇಶಿ ನೆರವನ್ನು 21 ಶೇಕಡದಷ್ಟು ಕಡಿತ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ. ಆದರೆ, ಭಾರತ-ಪೆಸಿಫಿಕ್ ತಂತ್ರಗಾರಿಕೆಯನ್ನು ಬೆಂಬಲಿಸಲು 2 ಬಿಲಿಯ ಡಾಲರ್ (ಸುಮಾರು 14,250 ಕೋಟಿ ರೂಪಾಯಿ)ಗೂ ಅಧಿಕ ಮೊತ್ತ ನೀಡಲು ನಿರ್ಧರಿಸಿದ್ದಾರೆ.

ಬಜೆಟ್ ಪ್ರಸ್ತಾವಗಳನ್ನು ಸೋಮವಾರ ಪ್ರಕಟಿಸಲಾಯಿತು. ‘‘ಮುಕ್ತ ಮತ್ತು ತೆರೆದ ಭಾರತ-ಪೆಸಿಫಿಕ್‌ಗಾಗಿ ಭದ್ರತೆ, ಪ್ರಜಾಪ್ರಭುತ್ವ ಮತ್ತು ಆರ್ಥಿಕ ಬೆಳವಣಿಗೆಯನ್ನು ಖಾತರಿಪಡಿಸಲು ಹಾಗೂ ಚೀನಾದ ಕೆಟ್ಟ ಪ್ರಭಾವವನ್ನು ಎದುರಿಸುವ’’ ಉದ್ದೇಶವನ್ನು ಬಜೆಟ್‌ನಲ್ಲಿ ಒದಗಿಸಲಾಗಿರುವ ಅನುದಾನ ಹೊಂದಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಚೀನಾದ ‘ವನ್ ಬೆಲ್ಟ್, ವನ್ ರೋಡ್’ ಯೋಜನೆಯ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಈ ಯೋಜನೆಯು ಅಭಿವೃದ್ಧಿಶೀಲ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸಲಿವೆ ಎಂದು ಅದು ಅಭಿಪ್ರಾಯಪಟ್ಟಿದೆ. ಈ ಸುಳಿಯಿಂದ ಹೊರಬರಲು ಈ ದೇಶಗಳಿಗೆ ಕಷ್ಟವಾಗಲಿದ್ದು, ತಮ್ಮ ಆರ್ಥಿಕತೆಗಳ ವಿಶಾಲ ಕ್ಷೇತ್ರಗಳ ಮೇಲಿನ ನಿಯಂತ್ರಣವನ್ನು ಅವುಗಳು ಚೀನಾಕ್ಕೆ ಬಿಟ್ಟು ಕೊಡುವ ಅಪಾಯಗಳಿವೆ ಎಂಬ ಭೀತಿಯನ್ನು ಅದು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News