ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ಪುದುಚೇರಿ

Update: 2020-02-12 15:22 GMT

ಪುದುಚೇರಿ, ಫೆ. 12: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನ ಸಭೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬುಧವಾರ ನಿರ್ಣಯ ಅಂಗೀಕರಿಸಿದೆ. ಅಲ್ಲದೆ, ಡಿಸೆಂಬರ್ ಮಧ್ಯಭಾಗದಿಂದ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಕಾರಣವಾದ ಕಾಯ್ದೆಯನ್ನು ಹಿಂದೆ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಪುದುಚೇರಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸುತ್ತಿರುವ ಮೊದಲ ಕೇಂದ್ರಾಡಳಿತ ಪ್ರದೇಶ. ಇಲ್ಲಿ ಕಾಂಗ್ರೆಸ್ ಆಡಳಿತವಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ, ಪಂಜಾಬ್, ಪಶ್ಚಿಮಬಂಗಾಳ ಹಾಗೂ ರಾಜಸ್ಥಾನ ಮೊದಲಾದ ನಾಲ್ಕು ರಾಜ್ಯಗಳು ಈಗಾಗಲೇ ನಿರ್ಣಯ ಅಂಗೀಕರಿಸಿವೆ.

ಮಧ್ಯಪ್ರದೇಶ ಸರಕಾರದ ಸಂಪುಟ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಿರ್ಣಯಕ್ಕೆ ಅನುಮೋದನೆ ನೀಡಿದೆ. ಕಳೆದ ವಾರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ಇದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ದೇಶದ ಮೊದಲ ನಗರ ಸಭೆ.

ಪುದುಚೇರಿ ವಿಧಾನಸಭೆ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಆದರೆ 1963ರ ಕೇಂದ್ರಾಡಳಿತ ಪ್ರದೇಶ ಸರಕಾರದ ಕಾಯ್ದೆ ಅಡಿಯಲ್ಲಿ ವಿಧಾನ ಸಭೆಗೆ ಅಧಿಕಾರ ಇಲ್ಲದೇ ಇರುವುದರಿಂದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸಲು ಯಾವುದೇ ಅನುಮತಿ ನೀಡಬಾರದು ಎಂದು ಕೆಲವು ಶಾಸಕರು ಫೆಬ್ರವರಿ 6ರಂದು ಸ್ಪೀಕರ್ ವಿ.ಪಿ. ಸಿವಕೊಲುಂತು ಅವರಿಗೆ ಮನವಿ ಸಲ್ಲಿಸಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ಕೇಂದ್ರಾಡಳಿತ ಪ್ರದೇಶಕ್ಕೆ ಕೂಡ ಅನ್ವಯವಾಗುತ್ತದೆ. ಅಲ್ಲದೆ, ಉದ್ದೇಶಪೂರ್ವಕವಾಗಿ ಯಾವುದೇ ರೀತಿಯಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲೆ ಕಿರಣ್ ಬೇಡಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರಿಗೆ ಫೆಬ್ರವರಿ 10ರಂದು ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News