ಎನ್‌ಆರ್‌ಸಿ ದತ್ತಾಂಶ ಸುರಕ್ಷಿತ: ಗೃಹ ಸಚಿವಾಲಯ

Update: 2020-02-12 15:34 GMT

ಹೊಸದಿಲ್ಲಿ, ಫೆ. 12: ಕೆಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹೊರತಾಗಿಯೂ ಅಸ್ಸಾಂನ ಎನ್‌ಆರ್‌ಸಿ ದತ್ತಾಂಶ ಸುರಕ್ಷಿತವಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ.

 ಕೇಂದ್ರ ಸರಕಾರದ ಅಧಿಕೃತ ವೆಬ್‌ಸೈಟ್ ನಲ್ಲಿ ಅಸ್ಸಾಂ ಎನ್‌ಆರ್‌ಸಿಯ ದತ್ತಾಂಶ ಆಫ್‌ಲೈನ್ (ಕಾಣಿಸಿಕೊಳ್ಳುತ್ತಿಲ್ಲ) ಆಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಸ್ಪಷ್ಟನೆ ನೀಡಿದೆ. ‘‘ಎನ್‌ಆರ್‌ಸಿ ದತ್ತಾಂಶ ಸುರಕ್ಷಿತವಾಗಿದೆ. ಕ್ಲೌಡ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಇದನ್ನು ಶೀಘ್ರದಲ್ಲಿ ಪರಿಹರಿಸಲಾಗುವುದು’’ ಎಂದು ಗೃಹ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. ವೆಬ್‌ಸೈಟ್‌ ನಲ್ಲಿ ಕಳೆದ ಎರಡು ದಿನಗಳಿಂದ ದತ್ತಾಂಶ ಆಪ್‌ ಲೈನ್ ಆಗಿದೆ. ಇದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತ್ತು. ವೆಬ್‌ಸೈಟ್‌ನಲ್ಲಿ ಎನ್‌ಆರ್‌ಸಿ ದತ್ತಾಂಶ ಆಫ್‌ಲೈನ್ ಆಗಿರುವುದನ್ನು ಎನ್‌ಆರ್‌ಸಿಯ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ ಒಪ್ಪಿಕೊಂಡಿದ್ದಾರೆ. ಆದರೆ, ಇದರ ಹಿಂದೆ ದುರುದ್ದೇಶ ಇದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಗುತ್ತಿಗೆ ನವೀಕರಿಸದ ಕೇಂದ್ರ ಸರಕಾರ: ವಿಪ್ರೊ

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಕಾಪಿಡಲು ಕ್ಲೌಡ್‌ ನಲ್ಲಿ ಸಂಗ್ರಹ ಅವಕಾಶ ನೀಡುತ್ತಿರುವ ವಿಪ್ರೊ ಕಂಪೆನಿ, ಸರಕಾರ ಗುತ್ತಿಗೆಯನ್ನು ನವೀಕರಿಸಿಲ್ಲ. ಆದುದರಿಂದ ಅಸ್ಸಾಂ ಎನ್‌ಆರ್‌ಸಿಗೆ ಸಂಬಂಧಿಸಿದ ದತ್ತಾಂಶ ಆಫ್‌ಲೈನ್ ಆಗಿದೆ ಎಂದಿದೆ. ಮಾಹಿತಿ ತಂತ್ರಜ್ಞಾನ ಸೇವೆಯ ಗುತ್ತಿಗೆ 2019 ಅಕ್ಟೋಬರ್‌ಗೆ ಮುಗಿದಿದ್ದರೂ ಆಡಳಿತ ನವೀಕರಿಸಿಲ್ಲ. ಆದರೂ ವಿಪ್ರೊ ಸೇವೆಯನ್ನು 2020 ಜನವರಿ ವರೆಗೆ ಮುಂದುವರಿಸಿತ್ತು ಎಂದು ವಿಪ್ರೊ ಲಿಮಿಟೆಡ್ ಬುಧವಾರ ಹೇಳಿಕೆ ನೀಡಿದೆ. ಆಡಳಿತ ಮಾಹಿತಿ ತಂತ್ರಜ್ಞಾನ ಸೇವೆಯ ಒಪ್ಪಂದವನ್ನು ನವೀಕರಿಸಿದರೆ ಸೇವೆ ನೀಡುವುದನ್ನು ಮುಂದುವರಿಸಲು ವಿಪ್ರೊ ಬಯಸುತ್ತದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News