ಫೆಬ್ರವರಿಯ ಈ 14 ದಿನಗಳಲ್ಲಿ ‘ಫಾಸ್ಟ್ಯಾಗ್’ ಉಚಿತ

Update: 2020-02-12 15:41 GMT

ಹೊಸದಿಲ್ಲಿ,ಫೆ.12: ಇಲೆಕ್ಟ್ರಾನಿಕ್ ಟೋಲ್ ಸಂಗ್ರಹವನ್ನು ಉತ್ತೇಜಿಸುವ ಉದ್ದೇಶದಿಂದ ಫಾಸ್ಟ್‌ಟ್ಯಾಗ್ ಶುಲ್ಕವನ್ನು ಫೆಬ್ರವರಿ 15ರಿಂದ 29ರ ನಡುವೆ ಮನ್ನಾ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಧರಿಸಿದೆಯೆಂದು ಕೇಂದ್ರ ಸರಕಾರವು ಬುಧವಾರ ತಿಳಿಸಿದೆ.

   ದೇಶಾದ್ಯಂತ 527ಕ್ಕೂ ಅಧಿಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಈಗಾಗಲೇ ಜಾರಿಗೊಳಿಸಿದೆ. ರಾಷ್ಟ್ರೀ ಹೆದ್ದಾರಿ ಶುಲ್ಕ ಸಂಗ್ರಹ ಕೇಂದ್ರಗಳಲ್ಲಿ ಫಾಸ್ಟ್ಯಾಗ್ ಮೂಲಕ ಟೋಲ್ ಸಂಗ್ರಹವನ್ನು ಹೆಚ್ಚಿಸುವ ಉದ್ದೇಶದಿಂದ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ www.ihmcl.com(ಎನ್‌ಎಚ್‌ಎಐ)ವು 2020ರ ಫೆಬ್ರವರಿ 15 ಹಾಗೂ ಫೆಬ್ರವರಿ 29ರ ನಡುವೆ ರಾಷ್ಟ್ರೀಯ ಹೆದ್ದಾರಿಯು 100 ರೂ. ಫಾಸ್ಟ್ಯಾಗ್ ವೆಚ್ಚವನ್ನು ಮನ್ನಾ ಮಾಡಲು ನಿರ್ಧರಿಸಿದೆ’’ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಹೆದ್ದಾರಿ ಫಾಸ್ಟಾಗ್‌ನ್ನು ಉಚಿತವಾಗಿ ಪಡೆಯಲು ರಸ್ತೆ ಬಳಕೆದಾರರು ವಾಹನದ ಸಿಂಧುತ್ವವಿರುವ ನೋಂದಣಿ ಪತ್ರದೊಂದಿಗೆ ಯಾವುದೇ ಅಧಿಕೃತ ಮಾರಾಟ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆಯೆಂದು ಅದು ಹೇಳಿದೆ.

  ರಾಷ್ಟ್ರೀಯ ಹೆದ್ದಾರಿ ಫಾಸ್ಟಾಗ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಟೋಲ್ ಶುಲ್ಕ ಸಂಗ್ರಹ ಸ್ಥಳಗಳಲ್ಲಿ, ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ, ಸಾರಿಗೆ ಕೇಂದ್ರಗಳಲ್ಲಿ, ಪೆಟ್ರೋಲ್ ಪಂಪ್‌ಗಳು ಮತ್ತಿತರ ಕಡೆ ಖರೀದಿಸಬಹುದು ಎಂದು ಅದು ತಿಳಿಸಿದೆ.

ಬಳಕೆದಾರರು ತಮ್ಮ ಸಮೀಪದ ಎನ್‌ಎಚ್‌ಎಐ ಫಾಸ್ಟ್‌ಟ್ಯಾಗ್ ಮಾರಾಟ ಸ್ಥಳಗಳನ್ನು ತಿಳಿದುಕೊಳ್ಳಬೇಕಾದರೆ, ಅವರು ಫಾಸ್ಟಾಗ್ ಆ್ಯಪ್ ಡೌನ್‌ಲೋಡ್ ಮಾಡಬಹುದಾಗಿದೆ ಅಥವಾ ಜಾಲತಾಣವನ್ನು ಸಂದರ್ಶಿಸಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.

ಆದಾಗ್ಯೂ, ಫಾಸ್ಟ್ಯಾಗ್ ವ್ಯಾಲೆಟ್‌ಗಾಗಿನ ಭದ್ರತಾ ಠೇವಣಿ ಹಾಗೂ ಕನಿಷ್ಠ ಬ್ಯಾಲೆನ್ಸ್‌ನಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು ಅದು ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಮೊದಲು ನವೆಂಬರ್ 22ರಿಂದ ಡಿಸೆಂಬರ್ 15ರವರೆಗೆ ಉಚಿತ ಫಾಸ್ಟ್ಯಾಗ್ ಅನ್ನು ಘೋಷಿಸಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಅಳವಡಿಕೆಯ ಬಳಿಕ ಪ್ರತಿ ದಿನದ ಟೋಲ್ ಆದಾಯ ಸಂಗ್ರಹವು 68 ಕೋಟಿ ರೂ.ನಿಂದ 87 ಕೋಟಿ ರೂ.ಗೆ ಏರಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಳೆದ ತಿಂಗಳು ತಿಳಿಸಿದ್ದರು.

 ಫಾಸ್ಟ್ಯಾಗ್ ವ್ಯವಸ್ಥೆಯ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದ ಬಳಿಕ ಪ್ರತಿ ದಿನ 100 ಕೋಟಿ ರೂ. ಟೋಲ್ ಆದಾಯ ಸಂಗ್ರಹಿಸುವ ನಿರೀಕ್ಷೆಯನ್ನು ಎನ್‌ಎಚ್‌ಎಐ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News