ದಿಲ್ಲಿ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆ : ಮನೋಜ್ ತಿವಾರಿ ಪದತ್ಯಾಗದ ಕೊಡುಗೆ

Update: 2020-02-12 15:51 GMT

 ಹೊಸದಿಲ್ಲಿ,ಫೆ.12: ದಿಲ್ಲಿ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ಬಿಜೆಪಿಯ ದಿಲ್ಲಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕೊಡುಗೆಯನ್ನು ಮನೋಜ್ ತಿವಾರಿ ಮುಂದಿಟ್ಟಿದ್ದಾರೆ. ಆದರೆ ಹಾಗೆ ಮಾಡದಂತೆ ಅವರಿಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆನ್ನಲಾಗಿದೆ. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳ ಪೈಕಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್ ಆದ್ಮಿ ಪಕ್ಷವು 62ರಲ್ಲಿ ಗೆದ್ದು ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಕೇವಲ 8 ಸ್ಥಾಗಳನ್ನು ಮಾತ್ರವೇ ಪಡೆಯಲು ಸಾಧ್ಯವಾಗಿದೆ.

 ಮುಂದಿನ ಒಂದೆರಡು ತಿಂಗಳುಗಳೊಳಗೆ ಪಕ್ಷದ ಸಾಂಸ್ಥಿಕ ಚುನಾವಣೆಗಳು ನಡೆಯಲಿದ್ದು, ಆ ಬಳಿಕ ಬಿಜೆಪಿಯ ದಿಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದ್ದು, ಅಲ್ಲಿಯವರೆಗೆ ಮನೋಜ್ ತಿವಾರಿ ಆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಭೋಜಪುರಿ ಚಿತ್ರರಂಗ ಜನಪ್ರಿಯ ನಟ, ಗಾಯಕನಾಗಿದ್ದು, ರಾಜಕಾರಣ ಪ್ರವೇಶಿಸಿದ್ದ ಮನೋಜ್‌ತಿವಾರಿಗೆ 2016ರಲ್ಲಿ ದಿಲ್ಲಿಯ ಬಿಜೆಪಿಯ ಉಸ್ತುವಾರಿ ನೀಡಲಾಗಿತ್ತು. ತಿವಾರಿಯವರ ಕಾರ್ಯನಿರ್ವಹಣೆ ಬಗ್ಗೆ ಬಿಜೆಪಿಗೆ ನಿರಾಶೆಯಾಗಿರುವುದಾಗಿ ನಂಬಲಾಗಿದೆ. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭೋಜಪುರಿ ಭಾಷಿಕ ಪೂರ್ವಾಂಚಲ ಮತದಾರರ ಪಾತ್ರ ನಿರ್ಣಾಯಕವಾಗಿದ್ದು, ಅವರನ್ನು ಸೆಳೆಯುವಲ್ಲಿ ಮನೋಜ್ ತಿವಾರಿ ವಿಫಲರಾಗಿದ್ದಾರೆಂದು ಬಿಜೆಪಿ ಭಾವಿಸಿದೆ.

ದಿಲ್ಲಿ ಬಿಜೆಪಿ ಅಧ್ಯಕ್ಷರಾಗಿ ತನ್ನ ಮೂರು ವರ್ಷಗಳ ಅಧಿಕಾರಾವಧಿಯನ್ನು ಮನೋಜ್‌ತಿವಾರಿ ಪೂರ್ಣಗೊಳಿಸಿದ್ದಾರೆಂದು ಪಕ್ಷದ ನಾಯಕರು ತಿಳಿಸುತಾರೆ

  ಬುರಾರಿ ಸೇರಿದಂತೆ ಪೂರ್ವಾಂಚಲದ ಮತದಾರರು ಅಧಿಕ ಸಂಖ್ಯೆಯಲ್ಲಿರುವ ದಿಲ್ಲಿಯ ವಿಧಾನ ಸಭಾಕ್ಷೇತ್ರಗಳಲ್ಲಿ ತಿವಾರಿಯ ವರ್ಚಸ್ಸು ಕೆಲಸ ಮಾಡಲಿಲ್ಲವೆಂಬುದು ಬಿಜೆಪಿಯ ಗಮನಕ್ಕೆ ಬಂದಿದೆ. ಬುರಾರಿ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ 88 ಸಾವಿರ ಮತಗಳಿಂದ ಗೆದ್ದಿದ್ದಾರೆ.

 2013ರಲ್ಲಿ ಬಿಜೆಪಿ ಸೇರಿದ್ದ ತಿವಾರಿ, ಪಕ್ಷದಲ್ಲಿ ಉನ್ನತಸ್ಥಾನಕ್ಕೇರುತ್ತಲೇ ಹೋದರು. 2014ರಲ್ಲಿ ದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಅವರು ಜಯಗಳಿಸಿದ್ದರು. ಎರಡು ವರ್ಷಗಳ ಬಳಿಕ ದಿಲ್ಲಿ ಬಿಜೆಪಿ ಅಧ್ಯಕ್ಷರಾಗಿ ಅವರು ನೇಮಕಗೊಂಡಾಗ ವಿಜಯಗೋಯೆಲ್ ಹಾಗೂ ರಮೇಶ್ ಬಿಧೂರಿಯಂತಹ ಉನ್ನತ ನಾಯಕರಲ್ಲಿ ಅತೃಪ್ತಿ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News