'ಗೋಲಿ ಮಾರೋ'ದಂತಹ ದ್ವೇಷ ಭಾಷಣದಿಂದ ಸೋಲು: ದಿಲ್ಲಿ ಚುನಾವಣೆ ಬಗ್ಗೆ ಅಮಿತ್ ಶಾ

Update: 2020-02-13 16:57 GMT

ಹೊಸದಿಲ್ಲಿ, ಫೆ. 12: ಇತ್ತೀಚೆಗಿನ ದಿಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭ ಬಿಜೆಪಿ ನಾಯಕರು ‘ಗೋಲಿ ಮಾರೋ’ ಹಾಗೂ ‘ಇಂಡೋ-ಪಾಕ್ ಮ್ಯಾಚ್’ನಂತಹ ದ್ವೇಷ ಭಾಷಣಗಳನ್ನು ಮಾಡಬಾರದಿತ್ತು. ಅಂತಹ ಹೇಳಿಕೆಗಳು ಬಿಜೆಪಿ ಸೋಲಿಗೆ ಕಾರಣವಾಗಿರಬಹುದು ಎಂದು ಕೇಂದ್ರ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಬಿಜೆಪಿ ಕೇವಲ ಜಯ ಗಳಿಸಲು ಅಥವಾ ಸೋಲಲು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಬದಲಾಗಿ ಚುನಾವಣೆಯ ಮೂಲಕ ತನ್ನ ಸಿದ್ಧಾಂತವನ್ನು ವಿಸ್ತರಿಸುವ ನಂಬಿಕೆ ಇರಿಸಿತ್ತು ಎಂದು ಅವರು ಹೇಳಿದರು. ‘ಗೋಲಿ ಮಾರೊ’ ಹಾಗೂ ‘ಇಂಡೋ-ಪಾಕ್’ನಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಇಂತಹ ಹೇಳಿಕೆಗಳಿಂದ ನಮ್ಮ ಪಕ್ಷ ಅಂತರ ಕಾಯ್ದುಕೊಂಡಿತ್ತು ಎಂದು ಅವರು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾ, ದಿಲ್ಲಿ ಚುನಾವಣೆಯ ಪ್ರಚಾರದ ಸಂದರ್ಭ ಪಕ್ಷದ ಕೆಲವು ನಾಯಕರ ನೀಡಿದ ಹೇಳಿಕೆಯ ಕಾರಣಕ್ಕಾಗಿ ಬಿಜೆಪಿ ಸೋತಿರಬಹುದು ಎಂದರು.

 ದಿಲ್ಲಿ ಚುನಾವಣೆ ಕುರಿತ ತನ್ನ ಅಂದಾಜು ತಪ್ಪಾಗಿದೆ ಎಂದು ಅಮಿತ್ ಶಾ ಹೇಳಿದರು. ಆದರೆ, ಚುನಾವಣಾ ಫಲಿತಾಂಶ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನೀಡಿದ ಜನರ ತೀರ್ಪು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಯಾರಾದರೂ ಚರ್ಚೆ ಮಾಡಲು ಬಯಸಿದರೆ, ತನ್ನ ಕಚೇರಿಯಿಂದ ಭೇಟಿಗೆ ಸಮಯ ಕೋರಬಹುದು. ನಾನು ಮೂರು ದಿನಗಳ ಒಳಗೆ ಭೇಟಿಗೆ ಸಮಯ ನೀಡುತ್ತೇನೆ ಎಂದು ಅಮಿತ್ ಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News