ಎನ್‌ಪಿಆರ್ ಭೀತಿಯಲ್ಲಿ ಸಮೀಕ್ಷಕರ ಮೇಲೆ ಹಲ್ಲೆಗಳಿಂದ ಜನಗಣತಿಗೆ ತೊಂದರೆ: ಅಂಕಿಅಂಶಗಳ ಸಮಿತಿಯ ಮುಖ್ಯಸ್ಥರ ಕಳವಳ

Update: 2020-02-13 15:31 GMT

ಹೊಸದಿಲ್ಲಿ,ಫೆ.13: ದೇಶದ ಕೆಲವೆಡೆಗಳಲ್ಲಿ ಕ್ಷೇತ್ರ ಸಮೀಕ್ಷಕರ ಮೇಲಿನ ಇತ್ತೀಚಿನ ಹಲ್ಲೆಗಳು ಮುಂಬರುವ ಜನಗಣತಿ ಪ್ರಕ್ರಿಯೆಯನ್ನು ತೀವ್ರ ಸಂಕಷ್ಟಕ್ಕೆ ತಳ್ಳಿವೆ ಮತ್ತು ಮನೆಗಳ ಸಮೀಕ್ಷೆ ಸಂದರ್ಭ ಸಂಗ್ರಹಿಸಲಾಗುವ ದತ್ತಾಂಶಗಳನ್ನು ದೋಷಪೂರ್ಣಗೊಳಿಸುವ ಅಪಾಯವಿದೆ ಎಂದು ಆರ್ಥಿಕ ಅಂಕಿಅಂಶಗಳ ಕುರಿತು ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರಣವ್ ಸೇನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಎನ್‌ಪಿಆರ್‌ಗಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂಬ ತಪ್ಪುಗ್ರಹಿಕೆಯಿಂದ ಕೆಲವು ಆರೋಗ್ಯ ಸಂಶೋಧಕರು ಮತ್ತು ಸರಕಾರಿ ಸರ್ವೆ ಅಧಿಕಾರಿಗಳ ಮೇಲೆ ಹಲ್ಲೆಗಳು ನಡೆದಿವೆ. ಎನ್‌ಪಿಆರ್ ಅಕ್ರಮ ವಲಸಿಗರನ್ನು ಗುರುತಿಸಲು ನಡೆಸಲಾಗುವ ಅಖಿಲ ಭಾರತ ಎನ್‌ಆರ್‌ಸಿಯನ್ನು ಸೃಷ್ಟಿಸಲು ಮೊದಲ ಹೆಜ್ಜೆಯಾಗಿದೆ ಎನ್ನಲಾಗಿದೆಯಾದರೂ ಸರಕಾರವು ಎನ್‌ಪಿಆರ್ ಮತ್ತು ಎನ್‌ಆರ್‌ಸಿ ನಡುವಣ ನಂಟನ್ನು ನಿರಾಕರಿಸಿದೆ. ಆದರೆ ಜನಗಣತಿ ವೆಬ್‌ಸೈಟ್‌ನಲ್ಲಿಯೇ ನಂಟೊಂದನ್ನು ಕಲ್ಪಿಸಲಾಗಿರುವುದರಿಂದ ಎನ್‌ಪಿಆರ್ ಪ್ರಕ್ರಿಯೆಯೂ ಎನ್‌ಆರ್‌ಸಿ ವಿರೋಧಿ ಪ್ರತಿಭಟನಾಕಾರರ ಗುರಿಯಾಗಿದೆ.

ಹಿಂದೆ ನ್ಯಾಷನಲ್ ಸ್ಯಾಂಪಲ್ ಸರ್ವೆಯ ಕ್ಷೇತ್ರ ಸಮೀಕ್ಷಕರ ಮೇಲೂ ಹಲ್ಲೆಗಳು ನಡೆದಿದ್ದವು. ಆದರೆ ಜನರಿಗೆ ಆ ಬಗ್ಗೆ ನಿಜ ಗೊತ್ತಾದ ಬಳಿಕ ಸಮಸ್ಯೆಯಾಗಿಲ್ಲ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವ ಸೇನ್,ಎ.1ರಿಂದ ಸೆ.30ರವರೆಗೆ ನಡೆಯಲಿರುವ ಜನಗಣತಿಗೆ ಪೂರ್ವಭಾವಿಯಾಗಿ ಎನ್‌ಪಿಆರ್‌ನೊಂದಿಗೆ ಮನೆಗಳ ಪಟ್ಟಿಗಳನ್ನು ತಯಾರಿಸುವ ಪ್ರಕ್ರಿಯೆ ನಡೆಯಲಿದೆ. ಇದು ಜನಗಣತಿಯಲ್ಲಿ ಮಹತ್ವದ ಪ್ರಕ್ರಿಯೆಯಾಗಿದೆ. ಈ ಪಟ್ಟಿಗಳನ್ನು ಆಧರಿಸಿ ಜನಗಣತಿಗಾಗಿ ವಿಭಾಗಗಳನ್ನು ರೂಪಿಸಲಾಗುತ್ತದೆ. ಆದರೆ ಈ ಕಾರ್ಯ ಕೈಗೊಳ್ಳಲು ಸಮಸ್ಯೆಗಳು ಎದುರಾದರೆ ಜನಗಣತಿಯೂ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಭವಿಷ್ಯದಲ್ಲಿ ಸರಕಾರಗಳ ವಿವಿಧ ಯೋಜನೆಗಳನ್ನು ರೂಪಿಸಲು ಎಲ್ಲ ಮನೆಮನೆ ಸಮೀಕ್ಷೆಗಳು ಜನಗಣತಿ ವರದಿಯನ್ನೇ ಅವಲಂಬಿಸಿರುವುದರಿಂದ ಈ ವರದಿಯೇ ದೋಷಪೂರ್ಣವಾಗಿದ್ದರೆ ಯಾವುದೇ ಸಮೀಕ್ಷೆಯು ವಿಶ್ವಾಸಾರ್ಹವಾಗುವುದಿಲ್ಲ ಎಂದಿದ್ದಾರೆ.

ನೀವು ಏನೇ ಮಾಡಿದರೂ ಶಂಕಿಸುವವರು ಇದ್ದೇ ಇರುತ್ತಾರೆ. ಜನರು ಗಣತಿಯ ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಬಹುದು,ಆದರೆ ಕುಟುಂಬ ಸದಸ್ಯರ ವಿಷಯದಲ್ಲಿ ಸರಿಯಾದ ಮಾಹಿತಿಗಳನ್ನು ಒದಗಿಸಲು ಹಿಂದೇಟು ಹಾಕಬಹುದು. ಹೀಗಾಗಿ ಪ್ರಶ್ನೆಗಳ ಸಂಖ್ಯೆಗಳನ್ನು ಕಡಿತಗೊಳಿಸಿ ಕನಿಷ್ಠ ಮಾಹಿತಿಗಳನ್ನು ಸಂಗ್ರಹಿಸುವುದೊಂದೇ ಈ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಜನಗಣತಿಗೆ ಪ್ರತಿಮನೆಯಲ್ಲಿ ಎಷ್ಟು ಜನರಿದ್ದಾರೆ ಎಂಬ ಮಾಹಿತಿ ಲಭಿಸಿದರೆ ಸಾಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News