ಸಂಭ್ರಮಾಚರಣೆಯಲ್ಲಿದ್ದ ಆಪ್ ಶಾಸಕ ಅಮಾನತುಲ್ಲಾ ಖಾನ್ ಸಂಬಂಧಿಕರಿಗೆ ಪೊಲೀಸರ ಲಾಠಿ ಪ್ರಹಾರ

Update: 2020-02-13 15:51 GMT
file photo

ಮೀರತ್,ಫೆ.13: ದಿಲ್ಲಿಯ ಓಖ್ಲಾ ವಿಧಾನಸಭಾ ಕ್ಷೇತ್ರದಿಂದ ಆಪ್ ನಾಯಕ ಅಮಾನತುಲ್ಲಾ ಖಾನ್ ಅವರ ಪುನರಾಯ್ಕೆಯ ವಿಜಯೋತ್ಸವ ಆಚರಿಸುತ್ತಿದ್ದ ಅವರ ಬಂಧುಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.

ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳು ಮಂಗಳವಾರ ಪ್ರಕಟಗೊಂಡಿದ್ದು,ಅಂದು ಸಂಜೆ ಖಾನ್ ಅವರ ಸ್ವಗ್ರಾಮ ಅಗ್ವಾನ್‌ಪುರದಲ್ಲಿ ವಿಜಯೋತ್ಸವ ನಡೆದಿತ್ತು. ಅದನ್ನು ನಿಲ್ಲಿಸಿದ ಪೊಲೀಸರು ಗ್ರಾಮಸ್ಥರನ್ನು ಚದುರಿಸಲು ಲಾಠಿಪ್ರಹಾರ ನಡೆಸಿದ್ದರು. ಪೊಲೀಸರು ಕೆಲವು ಯುವತಿಯರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಖಾನ್ ಸಂಬಂಧಿಗಳು ಆರೋಪಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ.

‘ಪೊಲೀಸರ ವಿರುದ್ಧ ಆರೋಪಗಳು ಸುಳ್ಳಾಗಿವೆ ಮತ್ತು ಕಟ್ಟುಕಥೆಗಳಾಗಿವೆ. ಗ್ರಾಮಸ್ಥರು ಮೆರವಣಿಗೆಯೊಂದನ್ನು ಹೊರಡಿಸಿದ್ದರು ಮತ್ತು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನಾವು ಅದನ್ನು ನಿಲ್ಲಿಸಿದ್ದೆವು. ಗ್ರಾಮಸ್ಥರ ವಿರುದ್ಧ ಬಲಪ್ರಯೋಗ ನಡೆಸಿರಲಿಲ್ಲ’ ಎಂದು ಪರೀಕ್ಷಿತಗಡ ಪೊಲೀಸ್ ಠಾಣಾಧಿಕಾರಿ ಕೈಲಾಷ್ ಚಂದ್ ತಿಳಿಸಿದ್ದಾರೆ.

ಇಂತಹ ಘಟನೆಗಳು ದ್ವೇಷ ರಾಜಕಾರಣದ ಫಲಶ್ರುತಿಗಳಾಗಿವೆ ಎಂದು ಹೇಳಿದ ಖಾನ್,‘ಪೊಲೀಸರು ಅವರನ್ನು ಥಳಿಸಿದಾಗ ಅವರು ನನ್ನ ವಿಜಯದ ಖುಷಿಯನ್ನು ಆಚರಿಸುತ್ತಿದ್ದರು. ಯಾರಿಗೂ ಗಂಭೀರ ಗಾಯವಾಗಿಲ್ಲವಾದರೂ ಪೊಲೀಸರ ಇಂತಹ ಕ್ರಮವು ಖಂಡನೀಯವಾಗಿದೆ. ಅವರೆಲ್ಲ ನನ್ನ ಬಂಧುಗಳಾಗಿದ್ದಾರೆ ಮತ್ತು ಈ ಬಗ್ಗೆ ನಾವು ದೂರನ್ನು ಸಲ್ಲಿಸಲಿದ್ದೇವೆ ’ಎಂದರು.

 ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಹಲವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಖಾನ್ ಅವರ ಬಂಧು ನೂರುಲ್ಲಾ ಎನ್ನುವವರನ್ನು ಮುಖ್ಯ ಆರೋಪಿ ಎಂದು ಹೆಸರಿಸಲಾಗಿದೆ. ತಾವು ಮೆರವಣಿಗೆಯನ್ನು ನಡೆಸಿರಲಿಲ್ಲ,ಕೇವಲ ಸಿಹಿಯನ್ನು ಹಂಚುತ್ತಿದ್ದೆವು ಎಂದು ನೂರುಲ್ಲಾ ತಿಳಿಸಿದ್ದಾರೆ.

ಖಾನ್ ಮುಸ್ಲಿಂ ಪ್ರಾಬಲ್ಯದ ಓಖ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಪುನರಾಯ್ಕೆಗೊಂಡಿದ್ದಾರೆ. ಈ ವಿಧಾನಸಭಾ ಕ್ಷೇತ್ರವು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನೆಗಳ ಕೇಂದ್ರ ಬಿಂದುವಾಗಿದ್ದು,ಶಾಹೀನ್‌ಬಾಗ್ ಮತ್ತು ಜಾಮಿಯಾ ನಗರ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News