ಡೈಮಂಡ್ ಪ್ರಿನ್ಸೆಸ್ ದಿಗ್ಬಂಧನ: ವೃದ್ಧರಿಗೆ ಹಡಗು ತೊರೆಯಲು ಅನುಮತಿ

Update: 2020-02-13 17:20 GMT

ಯೊಕೊಹಾಮಾ,ಫೆ.13: ಕೊರೋನ ವೈರಸ್ ಬಾಧಿತ ಪ್ರಯಾಣಿಕರು ಹಾಗೂ ನಾವಿಕ ಸಿಬ್ಬಂದಿ ಇರುವ ಹಿನ್ನೆಲೆಯಲ್ಲಿ ಜಪಾನ್‌ನ ಯೊಕೊಹಾಮದ ಬಂದರಿನಲ್ಲಿ ದಿಗ್ಬಂಧನಕ್ಕೀಡಾಗಿದ ಪ್ರವಾಸಿ ಹಡಗಿನಲ್ಲಿರುವ ಕೆಲವು ಹಿರಿಯ ವಯಸ್ಸಿನ ಪ್ರಯಾಣಿಕರಿಗೆ ಹಡಗನ್ನು ತೊರೆಯಲು ಅನುಮತಿ ನೀಡುವುದಾಗಿ ಜಪಾನ್ ಗುರುವಾರ ತಿಳಿಸಿದೆ. ಈ ಮಧ್ಯೆ ಹಡಗಿನಲ್ಲಿ ಕೊರೋನ ವೈರಸ್ ಪೀಡಿತರ ಸಂಖ್ಯೆ 118ಕ್ಕೇರಿದೆ.

  ಡೈಮಂಡ್ ಪ್ರಿನ್ಸೆಸ್ ಹೆಸರಿನ ಈ ಹಡಗಿನಲ್ಲಿರುವ 3700ಕ್ಕೂ ಅಧಿಕ ಪ್ರವಾಸಿಗರು ಹಾಗೂ ನಾವಿಕರಿದ್ದು, ಅದು ಇನ್ನೂ ಹಲವು ದಿನಗಳ ಕಾಲ ದಿಗ್ಬಂಧನಕ್ಕೀಡಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಮಧ್ಯೆ ಹಡಗಿನಲ್ಲಿರುವ ಪ್ರಯಾಣಿಕರ ಪರಿಸ್ಥಿತಿಯ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

  ಹಡಗಿನಲ್ಲಿ ಕೆಲಸ ಮಾಡುವ ಹಲವರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿಯಿಂದ ವರದಿಗಾರರ ಜೊತೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ. ಆದಾಗ್ಯೂ, ಭಾರತೀಯ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಇಬ್ಬರು ನಾವಿಕರು ಹಡಗಿನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕ ಹದಗೆಡುತ್ತಿದೆಯೆಂದು ಹೇಳಿದ್ದಾರೆ,.

  

   44 ಮಂದಿ ಕೊರೋನ ಸೋಂಕಿತರಾಗಿದ್ದಾರೆಂದು ಇಂದು ಬೆಳಗ್ಗೆ ನಾವಿಕ ಸಿಬ್ಬಂದಿ ನಮಗೆ ತಿಳಿಸಿದ್ದಾರೆ ಹಾಗೂ ಪ್ರತಿಯೊಬ್ಬರ ಭಯಭೀತರಾಗರಾಗಿದ್ದಾರೆ ಹಾಗೂ ಸಾಧ್ಯವಿದ್ದಷ್ಟು ಬೇಗನೇ ಹಡಗಿನಿಂದ ನಿರ್ಗಮಿಸಲು ಬಯಸಿದ್ದಾರೆ ಎಂದು ಹಡಗಿನ ಭದ್ರತಾ ಅಧಿಕಾರಿಣಿ ಸೋನಾಲಿ ಠಕ್ಕರ್ ತಿಳಿಸಿದ್ದಾರೆ.ಬಹುತೇಕ ಪ್ರಯಾಣಿಕರು ಹಡಗಿನಲ್ಲಿರುವ ತಮ್ಮ ಕ್ಯಾಬಿನ್‌ಗಳಲ್ಲಿಯೇ ಉಳಿದುಕೊಂಡಿದ್ದು, ಆಹಾರ ಮತ್ತಿತರ ಸಾಮಗ್ರಿಗಳನ್ನು ಒದಗಿಸಲು ಅವರ ಬಳಿಕ ನಾವಿಕ ಸಿಬ್ಬಂದಿ ತೆರಳಬೇಕಾಗುತ್ತದೆ. ಇದರಿಂದಾಗಿ ಕೊರೋನ ಹರಡದಂತೆ ತಡೆಗಟ್ಟುವ ಕ್ರಮಗಳು ಪರಿಣಾಮಕಾರಿಯಾಗುತ್ತಿಲ್ಲವೆನ್ನಲಾಗಿದೆ.

 ಈಗಾಗಲೇ ಹಡಗಿನಲ್ಲಿರುವ 221 ಕೊರೋನ ಪ್ರಕರಣಗಳು ವರದಿಯಾಗಿದ್ದು, ೆಇಂದು ಓರ್ವ ನಾವಿಕ ಸೇರಿದಂತೆ 44 ಮಂದಿಗೆ ಹೊಸತಾಗಿ ಸೋಂಕು ತಗಲಿರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಕಾಟ್ಸುನೊಬು ಕಾಟೊ ಗುರುವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News