ಧರ್ಮಾಂತರ ಯಾಕೆ ಅತ್ಯಗತ್ಯ?

Update: 2020-02-13 18:29 GMT

ಮೇ 17, 1936 ರವಿವಾರದಂದು ಕಲ್ಯಾಣದಲ್ಲಿ ಧರ್ಮಾಂತರಕ್ಕೆ ಮುಕ್ತ ಬೆಂಬಲ ನೀಡುವ ಉದ್ದೇಶದಿಂದ ಠಾಣೆ ಜಿಲ್ಲೆ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಅಸ್ಪಶ್ಯರು ಎಂದು ಪರಿಗಣಿಸಲ್ಪಟ್ಟಿರುವ ಜನರ ಸಮಾವೇಶ ಡಾ. ಅಂಬೇಡ್ಕರ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು. ಸಮಾವೇಶದ ನಿಯೋಜಿತ ಅಧ್ಯಕ್ಷರಾಗಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು, ಮುಂಬೈನಿಂದ ಆಗಮಿಸುವ ಮಾಹಿತಿಯನ್ನು ಎಲ್ಲೆಡೆ ಭಿತ್ತಿಪತ್ರ, ಕರಪತ್ರಗಳ ಮುಖಾಂತರ ಪ್ರಚಾರ ಮಾಡಿದ್ದರಿಂದ ದೊಡ್ಡ ಉತ್ಸಾಹದೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಸ್ಪಶ್ಯರು ರೈಲ್ವೆ ನಿಲ್ದಾಣದ ಬಳಿ ಸೇರಿದ್ದರು. ಸುಮಾರು ಇನ್ನೂರು ಗ್ರಾಮಗಳಿಂದ ಆಗಮಿಸಿದ್ದ ಅಸ್ಪಶ್ಯರು ನಿಲ್ದಾಣದಲ್ಲಿ ಅಂಬೇಡ್ಕರ್ ಅವರ ಹಾದಿ ಕಾಯುತ್ತಿದ್ದರು. ಮಧ್ಯಾಹ್ನ ಸುಮಾರು 3ಗಂಟೆ ಹೊತ್ತಿಗೆ ಡಾ. ಅಂಬೇಡ್ಕರ್ ಅವರು ರೈಲಿನಿಂದ ಇಳಿಯುತ್ತಿದ್ದಂತೆಯೇ ಸ್ಥಳೀಯ ಸದಸ್ಯರು ಹೂವಿನ ಹಾರ ಹಾಕಿ ಬರಮಾಡಿಕೊಂಡರು.

ನಿಲ್ದಾಣದ ಹೊರಗೆ ಡಾ. ಅಂಬೇಡ್ಕರ್‌ಗೆ ಜಯವಾಗಲಿ, ಅಂಬೇಡ್ಕರ್ ಜಿಂದಾಬಾದ್, ಕೆಲವೇ ದಿನಗಳಲ್ಲಿ ಭೀಮರಾಜ್ ಮುಂತಾದ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು ಡಾ. ಅಂಬೇಡ್ಕರ್ ಅವರ ದರ್ಶನಕ್ಕೆ ಆಗಮಿಸಿದ್ದ ದಲಿತ ಸಮಾಜ ಸಂತಸದಿಂದ ಆನಂದಭಾಷ್ಟ ಸುರಿಸಿ ನವಚೈತನ್ಯ ಮೂಡಿಸಿಕೊಂಡಂತೆ ಕಾಣುತ್ತಿತ್ತು. ಬಳಿಕ ಸುಮಾರು ನಾಲ್ಕು ಸಾವಿರ ಜನರ ನಡುವೆ ನಗರದ ಪ್ರಮುಖ ಬೀದಿಗಳಲ್ಲಿ ಡಾ. ಅಂಬೇಡ್ಕರ್ ಅವರ ಅದ್ದೂರಿ ಮೆರವಣಿಗೆ ಜರುಗಿತು. ಮೆರವಣಿಗೆಯ ಇಕ್ಕೆಲಗಳಲ್ಲಿ ಸ್ವಯಂ ಸೇವಕರು ಡಾ. ಅಂಬೇಡ್ಕರ್‌ಗೆ ಜಯವಾಗಲಿ ಎಂದು ಶಿಸ್ತಿನಿಂದ ಘೋಷಣೆ ಹಾಕುತ್ತಿದ್ದರು. ಮೆರವಣಿಗೆಯಲ್ಲಿ ಯುವಕರಿಂದ ಲಾಠಿ ಪ್ರಯೋಗ ಪ್ರದರ್ಶನ ಕೂಡ ನಡೆಯುತ್ತಿತ್ತು. ಒಟ್ಟಾರೆ ಆ ಮೆರವಣಿಗೆ ನೋಡುವಂತಿತ್ತು. ಮುಗ್ದ ಜನರ ನಿಸ್ಸೀಮ ಪ್ರೇಮ ಮತ್ತು ಅವರ ಸ್ವಾಭಿಮಾನ ನೋಡಿ ಯಾರಿಗೇ ಆಗಲಿ ಧನ್ಯತೆಯ ಭಾವ ಒಡಮೂಡುತ್ತಿತ್ತು.

ಈ ಸಮಾವೇಶದ ಭಾಷಣದಲ್ಲಿ ಡಾ. ಅಂಬೇಡ್ಕರ್ ಅವರು ಧರ್ಮಾಂತರದ ವಿಚಾರವಾಗಿ ವಿಸ್ತಾರವಾಗಿ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ:
ನಾನು ಧರ್ಮಾಂತರದ ಕುರಿತು ಏನು ಮಾತನಾಡುವವನಿದ್ದೇನೆ ಎಂದು ಕೇಳುವುದಕ್ಕೆ ತಾವು ಎಲ್ಲರೂ ಇಲ್ಲಿ ಆಗಮಿಸಿದ್ದೀರಿ. ಹೀಗಾಗಿ ನಾನು ಸ್ಪಷ್ಟವಾಗಿ ಮಾತನಾಡುವ ಅವಕಾಶ ಲಭಿಸಿದೆ. ಧರ್ಮಾಂತರಕ್ಕೆ ಸಂಬಂಧಿಸಿದಂತೆ ಕೆಲವರು ನಾವು ಯಾವ ಕಾರಣಕ್ಕೆ ಧರ್ಮಾಂತರ ಮಾಡಬೇಕು? ಎಂದು ಕೇಳುತ್ತಿದ್ದಾರೆ. ಅವರಿಗೆ ನನ್ನದು ಅದಕ್ಕೆ ತದ್ವಿರುದ್ಧ ಪ್ರಶ್ನೆ ಎಂದರೆ ನಾವೇಕೆ ಧರ್ಮಾಂತರ ಮಾಡಬಾರದು? ಧರ್ಮಾಂತರ ನಾವೇಕೆ ಮಾಡಬೇಕು ಎನ್ನುವುದಕ್ಕೆ ನನ್ನ ಜೀವನದಲ್ಲಿ ನಡೆದ ಘಟನೆಗಳಿಂದ ನಿಮಗೆ ಅರ್ಥವಾಗಬಹುದು. ನನ್ನಂತೆಯೇ ತಮ್ಮ ಜೀವನದಲ್ಲೂ ಇಂತಹ ಘಟನೆಗಳು ಸಂಭವಿಸಿರಬಹುದು. ಯಾವ ಕಾರಣಗಳಿಂದಾಗಿ ನಾನು ಧರ್ಮಾಂತರಕ್ಕೆ ಸಿದ್ಧವಾಗಿದ್ದೇನೆ ಎನ್ನುವುದನ್ನು ಸಾಬೀತುಪಡಿಸುವ ನಾಲ್ಕಾರು ಘಟನೆಗಳು ನನ್ನ ಜೀವನದ ಮೇಲೆ ಗಾಢ ಪ್ರಭಾವ ಬೀರಿವೆ. ಅವುಗಳ ಪೈಕಿ ಒಂದೆರಡು ಸಂಗತಿಗಳನ್ನು ನಾನಿಲ್ಲಿ ತಮ್ಮ ಎದುರು ವಿಷದೀಕರಿಸುತ್ತಿದ್ದೇನೆ.

ನನ್ನ ತಂದೆ ಸೇನೆಯಲ್ಲಿದ್ದ ವೇಳೆ ಇಂದೋರ್ ಹತ್ತಿರದ ಮಹುನಲ್ಲಿ ನಾನು ಹುಟ್ಟಿದ್ದು. ಆಗ ನನ್ನ ತಂದೆ ಸೇನೆಯಲ್ಲಿ ಸುಭೇದಾರ ಆಗಿದ್ದವರು. ನಾನು ಸೇನಾ ವಸತಿ ಪ್ರದೇಶದಲ್ಲಿ ಇದ್ದ ಕಾರಣ ನಮಗೆ ಹೊರ ಜಗತ್ತಿನ ಸಂಪರ್ಕ ಇರಲಿಲ್ಲ. ಹೀಗಾಗಿ ಅಸ್ಪಶ್ಯತೆಯ ಕಲ್ಪನೆ ಕೂಡ ನಮಗೆ ಇರಲಿಲ್ಲ. ನನ್ನ ತಂದೆಯ ನಿವೃತ್ತಿಯ ಬಳಿಕ ಸಾತಾರಕ್ಕೆ ನಾವೆಲ್ಲ ಬಂದು ಇರಲು ಆರಂಭಿಸಿದೆವು. ನಾನು ಐದು ವರ್ಷದವನಿದ್ದಾಗ ನನ್ನ ತಾಯಿ ವಿಧಿವಶರಾದರು. ಸತಾರಾ ಜಿಲ್ಲೆಯ ಗೋರೆಗಾಂವ್‌ನಲ್ಲಿ ಬರಗಾಲ ಬಂದ ಕಾರಣ ಸರಕಾರ ಆರಂಭಿಸಿದ ಬರ ಕಾಮಗಾರಿಯಡಿ ಕೈಗೆತ್ತಿಕೊಂಡ ಕೆರೆ ನಿರ್ಮಿಸುವ ಕಾರ್ಮಿಕರಿಗೆ ವೇತನ ಹಂಚುವ ಕೆಲಸವನ್ನು ನನ್ನ ತಂದೆಗೆ ವಹಿಸಿದ್ದರಿಂದ ಅವರು ಗೋರೆಗಾಂವ್‌ಗೆ ಹೋದರು ಮತ್ತು ನಾವು ಸತಾರಾದಲ್ಲಿಯೇ ಸುಮಾರು ನಾಲ್ಕು ವರ್ಷಗಳವರೆಗೆ ಇರಬೇಕಾಯಿತು. ನಾವು ಸತಾರಾದಲ್ಲಿದ್ದ ವೇಳೆ ಅಸ್ಪಶ್ಯತೆ ಏನು ಅನ್ನುವುದರ ಅರಿವು ಆಗಲು ಆರಂಭಿಸಿತು. ಮೊದಲಿಗೆ ನಮ್ಮ ಕೇಶಮುಂಡನಕ್ಕೆ ಕ್ಷೌರಿಕ ಸಿಗಲಿಲ್ಲ. ಈ ಕಾರಣವಾಗಿ ನಮಗೆ ತುಂಬ ತೊಂದರೆಯಾಯಿತು. ಆಮೇಲೆ ನನ್ನ ಹಿರಿಯಕ್ಕ ನಮ್ಮ ಕೇಶಮುಂಡನ ಮಾಡುತ್ತಿದ್ದಳು.

ಸತಾರಾದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕ್ಷೌರಿಕರಿದ್ದರೂ ಅವರು ನಮ್ಮ ಕೇಶ ಮುಂಡನ ಮಾಡುವುದಿಲ್ಲ ಎನ್ನುವುದು ಮೊದಲ ಬಾರಿಗೆ ನನ್ನ ಅರಿವಿಗೆ ಬಂದಿತು. ಇನ್ನೊಂದು ಘಟನೆ ಎಂದರೆ, ಗೋರೆಗಾಂವ್‌ನಲ್ಲಿದ್ದ ನಮ್ಮ ತಂದೆ ನಮಗೆ ಬರೆದಿದ್ದ ಪತ್ರದಲ್ಲಿ ಗೋರೆಗಾಂವ್‌ಗೆ ಬರುವಂತೆ ತಿಳಿಸಿದ್ದರು. ಗೋರೆಗಾಂವ್‌ಗೆ ನಾವು ಉಗಿಬಂಡಿಯಲ್ಲಿ ಕುಳಿತು ಹೋಗುವವರಿದ್ದ ಕಾರಣ ನನಗೆ ಎಲ್ಲಿಲ್ಲದ ಖುಷಿಯಾಗಿತ್ತು. ಈ ಮೊದಲು ನಾನೆಂದೂ ಉಗಿಬಂಡಿಯಲ್ಲಿ ಕುಳಿತವನಲ್ಲ. ತಂದೆ ಕಳುಹಿಸಿದ ಹಣದಿಂದ ಒಳ್ಳೆಯ ಬಟ್ಟೆಗಳನ್ನು ಖರೀದಿಸಿದೆವು. ನಾನು, ನನ್ನ ಸಹೋದರ ಮತ್ತು ಅಕ್ಕನ ಮಗಳೊಂದಿಗೆ ನಾವು ತಂದೆಯ ಭೇಟಿಗೆ ಹೊರಟೆವು. ಅದಕ್ಕೂ ಮೊದಲು ನಾವು ಅವರಿಗೆ ಪತ್ರ ಬರೆದಿದ್ದೆವು. ನೌಕರರ ನಿರ್ಲಕ್ಷದಿಂದಾಗಿ ಅವರಿಗೆ ನಮ್ಮ ಪತ್ರ ಸಿಕ್ಕಿರಲಿಲ್ಲ. ಹೀಗಾಗಿ ಅವರಿಗೆ ನಾವು ಗೋರೆಗಾಂವ್‌ಗೆ ಬರುತ್ತಿರುವ ವಿಚಾರ ಗೊತ್ತಿರಲಿಲ್ಲ. ಆದರೆ ನಮ್ಮನ್ನು ಕರೆದುಕೊಂಡು ಹೋಗುವುದಕ್ಕೆ ತಂದೆ ನೌಕರನನ್ನು ಕಳುಹಿಸಿಕೊಡುತ್ತಾರೆ ಎಂದು ಭಾವಿಸಿ ನಾವು ಪ್ರಯಾಣ ಬೆಳೆಸಿದೆವು. ಆದರೆ ಈ ವಿಚಾರದಲ್ಲಿ ನಮಗೆ ನಿರಾಸೆ ಕಾದಿತ್ತು.

ಉಗಿಬಂಡಿಯಿಂದ ನಾವು ಇಳಿಯುತ್ತಿದ್ದಂತೆಯೇ ನೌಕರನ ಹಾದಿ ಕಾಯುತ್ತ ಕುಳಿತೆವು. ನನ್ನ ವೇಷಭೂಷಣ ಬ್ರಾಹ್ಮಣನಂತಿತ್ತು. ಸುಮಾರು ಅರ್ಧ ಮುಕ್ಕಾಲು ಗಂಟೆ ರೈಲ್ವೆ ನಿಲ್ದಾಣದಲ್ಲಿ ಹಾದಿ ಕಾಯುತ್ತ ಕುಳಿತೆವು. ನಿಲ್ದಾಣದಲ್ಲಿ ನಮ್ಮನ್ನು ಹೊರತುಪಡಿಸಿ ಬೇರೆಯವರು ಯಾರೂ ಇರಲಿಲ್ಲ. ಅಷ್ಟರಲ್ಲಿ ನಮ್ಮನ್ನು ನೋಡಿದ ಸ್ಟೇಷನ್ ಮಾಸ್ತರ್ ನಮ್ಮ ಬಳಿ ಬಂದು ಯಾವ ಕಡೆ ಹೋಗಲಿಕ್ಕಿದೆ, ನೀವು ಯಾರು ಇತ್ಯಾದಿ ಪ್ರಶ್ನೆ ಕೇಳಲು ಆರಂಭಿಸಿದ. ನಾವು ಮಹಾರ್ ಎಂದು ಹೇಳುತ್ತಿದ್ದಂತೆಯೇ ಸ್ಟೇಷನ್ ಮಾಸ್ತರ್ ಸಿಡಿಲಿಗೆ ಸಿಕ್ಕ ಹಕ್ಕಿಯಂತೆ ವಿಲಿವಿಲಿ ಒದ್ದಾಡಿದ. ತಕ್ಷಣ ನಾಲ್ಕೈದು ಹೆಜ್ಜೆ ಹಿಂದೆ ಸರಿದು ನಿಂತ. ನಮ್ಮ ವೇಷಭೂಷಣ ನೋಡಿದರೆ ಸುಖಿ ಮಹಾರ್ ಕುಟುಂಬದಿಂದ ಬಂದವರು ಎಂದು ತಿಳಿದು ನಮಗೆ ಗಾಡಿ ಮಾಡಿಕೊಡುವುದಕ್ಕೆ ಸಿದ್ಧನಾದ. ನಾವು ಮಹಾರ್ ಮಕ್ಕಳು ಎಂದು ತಿಳಿದ ಗಾಡಿ ಹೊಡೆಯುವವರು ರಾತ್ರಿ ಏಳು ಗಂಟೆಯಾದರೂ ಯಾರೂ ಮುಂದೆ ಬರಲಿಲ್ಲ. ಕೊನೆಗೆ ಒಬ್ಬ ಗಾಡಿ ಹೊಡೆಯುವವನು ಮುಂದೆ ಬಂದ. ಆದರೆ ನಾನು ಗಾಡಿ ನಡೆಸುವುದಿಲ್ಲ ಎಂದು ಷರತ್ತು ಹಾಕಿದ. ನನಗೆ ಗಾಡಿ ಹೊಡೆಯುವುದು ನನಗೆ ಕಷ್ಟವಾಗಿಲಿಕ್ಕಿಲ್ಲವೆಂದು ನಾವು ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ಗಾಡಿ ಹೊಡೆಯುವ ತನ್ನ ಗಾಡಿ ತಂದು ನಿಲ್ಲಿಸಿದ.

ಗ್ರಾಮದಿಂದ ಸಾಕಷ್ಟು ದೂರ ಬಂದ ಬಳಿಕ ಇಲ್ಲಿಯೇ ರೊಟ್ಟಿ ತಿಂದು ನೀರು ಕುಡಿಯಿರಿ, ಮುಂದೆ ನಿಮಗೆ ಕುಡಿಯಲು ನೀರು ಸಿಗಲಿಕ್ಕಿಲ್ಲ ಎಂದು ಹೇಳಿದ. ನಾವು ಕೆಳಗಿಳಿದು ರೊಟ್ಟಿ ತಿಂದು ನಾಲೆಯ ನೀರು ಕುಡಿಯುವುದಕ್ಕೆ ಹೋದೆವು. ನಾಲೆಯ ನೀರು ಎಷ್ಟು ಕಲುಷಿತವಾಗಿತ್ತೆಂದರೆ ಅದರಲ್ಲಿ ಇದ್ದ ಸೆಗಣಿ ನೋಡಿ ವಾಕರಿಕೆ ಬಂದಿತ್ತು. ಗಾಡಿ ಹೊಡೆಯುವವ ಎಲ್ಲಿಯೋ ಕುಳಿತು ರೊಟ್ಟಿ ತಿಂದು ಬಂದ. ಮತ್ತೆ ನಮ್ಮ ಗಾಡಿ ಹೊರಟಿತು. ರಾತ್ರಿ ಸಾಕಷ್ಟು ಆಗಿದ್ದರಿಂದ ಗಾಡಿ ಹೊಡೆಯುವವ ಕೂಡ ಗಾಡಿ ಏರಿ ಕುಳಿತುಕೊಂಡ. ರಸ್ತೆಯಲ್ಲಿ ದೀಪ ಇರಲಿಲ್ಲ. ಮನುಷ್ಯರ ಸುಳಿವಿರಲಿಲ್ಲ. ನಾವು ಯಾರೂ ಗೋರೆಗಾಂವ್ ತಲುಪುವುದೇ ಇಲ್ಲವೇನೋ ಎಂದು ಭಾಸವಾಗುತ್ತಿತ್ತು. ಮನಸ್ಸಿನಲ್ಲಿ ತರ್ಕ-ಕುತರ್ಕದ ಹೋರಾಟವೇ ನಡೆದಿತ್ತು. ಅಷ್ಟೊತ್ತಿಗೆ ನಮ್ಮ ಗಾಡಿ ಟೋಲ್ ನಾಕಾ ಹತ್ತಿರ ಬಂದಿತು. ನನಗೆ ಪರ್ಷಿಯನ್ ಭಾಷೆ ಚೆನ್ನಾಗಿ ಬರುತ್ತಿದ್ದ ಕಾರಣ ಟೋಲ್ ನಾಕಾದಲ್ಲಿದ್ದ ವ್ಯಕ್ತಿಯನ್ನು ರೊಟ್ಟಿ ತಿಂದು ನೀರು ಕುಡಿಯುವುದಕ್ಕೆ ಜಾಗ ಎಲ್ಲಿ ಎಂದು ಕೇಳಿದೆ. ಆದರೆ ಆ ವ್ಯಕ್ತಿ ಅತ್ಯಂತ ನಿರ್ಲಕ್ಷ್ಯದಿಂದ ಎದುರಿನ ಗುಡ್ಡ ತೋರಿಸಿದ. ಕೊನೆಗೆ ಹೇಗೋ ಟೋಲ್ ನಾಕಾದಲ್ಲಿ ರಾತ್ರಿ ಕಳೆದು ಮರುದಿನ ಮಧ್ಯಾಹ್ನ ಅರ್ಧ ಸತ್ತ ಸ್ಥಿತಿಯಲ್ಲಿ ಗೋರೆಗಾಂವ್ ತಲುಪಿದೆವು.

ನನ್ನ ಜೀವನದಲ್ಲಿನ ಇನ್ನೊಂದು ಘಟನೆ ಎಂದರೆ ಬಡೋದಾ ಸಂಸ್ಥಾನದಲ್ಲಿನ ನನ್ನ ಸರಕಾರಿ ನೌಕರಿ. ಬಡೋದಾ ಸಂಸ್ಥಾನದಿಂದ ಶಿಷ್ಯವೇತನ ಲಭಿಸಿದ ಬಳಿಕ ವಿದೇಶಕ್ಕೆ ಹೋಗಿ ನನ್ನ ಉನ್ನತ ಶಿಕ್ಷಣ ಪೂರ್ಣಗೊಳಿಸಿದೆ. ಅಲ್ಲಿಂದ ಮರಳಿದ ಬಳಿಕ ವಿದ್ಯಾರ್ಥಿ ವೇತನದ ಷರತ್ತಿನಂತೆ ನಾನು ಬಡೋದಾ ಸಂಸ್ಥಾನದಲ್ಲಿ ನೌಕರಿ ಮಾಡಬೇಕಿತ್ತು. ಆದರೆ ಬಡೋದಾದಲ್ಲಿ ವಾಸಕ್ಕಾಗಿ ನನಗೆ ಒಂದೇ ಒಂದು ಮನೆ ಸಿಗಲಿಲ್ಲ. ಕೊನೆಗೆ ಒಂದು ಪಾರ್ಸಿ ಧರ್ಮಶಾಲೆಯಲ್ಲಿ ಪಾರ್ಸಿ ಎಂದು ಇರಲು ನಿರ್ಧರಿಸಿದ್ದೆ. ವಿದೇಶದಿಂದ ಮರಳಿದ ಬಳಿಕ ಕೆಂಪಗೆ, ದಷ್ಟಪುಷ್ಟವಾಗಿ ಕಾಣಿಸುತ್ತಿದ್ದೆ. ಕೊನೆಗೆ ಎದಲಜೀ ಸೊರಾಬ್ಜಿ ಎಂದು ಪಾರ್ಸಿ ಹೆಸರು ಇಟ್ಟುಕೊಂಡು ವಾಸಿಸಲು ಆರಂಭಿಸಿದೆ. ಎರಡು ರೂಪಾಯಿ ದಿನ ಬಾಡಿಗೆಯ ಮೇಲೆ ಧರ್ಮಶಾಲೆಯಲ್ಲಿ ನನ್ನ ಜೀವನ ಆರಂಭವಾಯಿತು. ಆದರೆ ಇದಕ್ಕೆ ಮೊದಲೇ ಶ್ರೀಮಂತ ಮಹಾರಾಜ್ ಸರಕಾರ್ ಅವರು ಸುಶಿಕ್ಷಿತ ಮಹಾರ್ ಹುಡುಗನನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಊರ ತುಂಬಾ ಹರಡಿತ್ತು. ನಾನು ಪಾರ್ಸಿ ಎಂದು ಹೇಳಿಕೊಂಡು ಇರುವ ವಿಚಾರ ಕೂಡ ಗುಪ್ತವಾಗಿ ಉಳಿಯಲಿಲ್ಲ.

ಧರ್ಮಶಾಲೆಯಲ್ಲಿ ಮಹಾರ್ ನಾನೇ ಎನ್ನುವುದು ಪಾರ್ಸಿ ಜನರಿಗೆ ಗೊತ್ತಾಯಿತು. ಮರುದಿನ ಊಟ ಮುಗಿಸಿಕೊಂಡು ಆಫೀಸಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಸುಮಾರು ಹತ್ತು ಹದಿನೈದು ಪಾರ್ಸಿಗಳ ಗುಂಪು ನನ್ನನ್ನು ಅಡ್ಡಗಟ್ಟಿ ‘‘ಯಾರು ನೀನು?’’ ಎಂದು ಕೇಳಿತು. ನಾನವರಿಗೆ ಕೇವಲ ‘‘ಹಿಂದೂ’’ ಎಂದು ಉತ್ತರಿಸಿದೆ. ಅದರಿಂದ ತೃಪ್ತರಾಗದ ಅವರು ತಕ್ಷಣ ಜಾಗ ಖಾಲಿ ಮಾಡುವಂತೆ ಹೇಳಿದರು. ಕೊನೆಗೆ ಅವರಿಗೆ ಎಂಟು ಗಂಟೆಗಳ ಕಾಲಾವಧಿ ಕೇಳಿದ್ದಕ್ಕೆ ಅವರು ಸಮ್ಮತಿಸಿದರು. ಆ ದಿನ ವಾಸ್ತವ್ಯಕ್ಕಾಗಿ ಸಾಕಷ್ಟು ಹುಡುಕಾಟ ಮಾಡಿದರೂ ನನಗೆ ನೆಲೆ ದಕ್ಕಲೇ ಇಲ್ಲ. ಎಷ್ಟೋ ಮಿತ್ರರ ಬಳಿ ಹೋಗಿ ನೆರವು ಕೇಳಿದರೆ ಅವರು ನಾನಾ ತರಹದ ನೆಪ ಹೇಳಿ ಸಾಗಹಾಕಿದರು. ಕೊನೆಗೆ ಎಷ್ಟೊಂದು ನಿರಾಸೆಯಾಗಿತ್ತೆಂದರೆ ಮುಂದೆ ಏನು ಮಾಡಬೇಕು ಎನ್ನುವುದು ತಿಳಿಯದಾಗಿತ್ತು. ಒಂದು ಕಡೆ ಸುಮ್ಮನೆ ಕುಳಿತೆ. ಮನಸ್ಸು ಉದ್ವಿಗ್ನವಾಗಿತ್ತು. ಕಣ್ಣಿನಿಂದ ನೀರು ಒಂದೇ ಸಮನೆ ಹರಿದು ಬರುತ್ತಿತ್ತು. (ಈ ಸಮಯದಲ್ಲೂ ಅವರ ಕಣ್ಣಿನಲ್ಲಿ ನೀರು ಒಸರಿತು. ಅಸ್ಪೃಶ್ಯತೆಯ ಬಡಬಾಗ್ನಿಯಲ್ಲಿ ಅವರ ಮನಸ್ಸು ಸುಟ್ಟು ಹೋಗಿತ್ತು.) ಇನ್ನು ಗತ್ಯಂತರವೇ ಇಲ್ಲ ಎಂದುಕೊಂಡು ನೌಕರಿ ಬಿಟ್ಟು ಅದೇ ದಿನ ರಾತ್ರಿ ಮುಂಬೈಗೆ ಮರಳಿದೆ. ನನ್ನ ಜೀವನದಲ್ಲಿ ಆಗಿರುವಂತಹ ಘಟನೆಗಳು ನಿಮ್ಮ ಜೀವನದಲ್ಲೂ ಘಟಿಸಿರಬಹುದು. ಅದಕ್ಕೆ ನಾನು ಹೇಳುವುದು ಏನೆಂದರೆ ಯಾವ ಸಮಾಜದಲ್ಲಿ ಮನುಷ್ಯತ್ವ ಇಲ್ಲವೋ ಕರುಣೆ ಇಲ್ಲವೋ ಅಂತಹ ಸಮಾಜದಲ್ಲಿ ನಿಷ್ಕಾರಣವಾಗಿ ಅಪಮಾನ ಅನುಭವಿಸುತ್ತ ಜೀವನ ಕಳೆಯುವುದರಲ್ಲಿ ಯಾವ ಪುರುಷಾರ್ಥ ಇದೆ? ಇಂತಹ ನಿರ್ದಯ ಧರ್ಮದಲ್ಲಿ ಇರುವವ ಗುಲಾಮನಾಗಿರಬೇಕು. ಮನುಷ್ಯತ್ವ ಬೇಕು ಎನ್ನುವ ವ್ಯಕ್ತಿ ಇಂತಹ ಧರ್ಮದಲ್ಲಿ ಇರಲಾರ.

ನನ್ನ ಪೂರ್ವಿಕರು ಈ ಹಿಂದೂ ಧರ್ಮದಲ್ಲಿದ್ದರು. ಆದರೆ ಅವರಿಗೆ ಹಿಂದೂ ಧರ್ಮದ ನಿಯಮದಂತೆ ಶಿಕ್ಷಣ ಪಡೆಯುವುದಕ್ಕೆ ಆಗಲಿಲ್ಲ. ಶಸ್ತ್ರಗಳನ್ನು ಹಿಡಿಯುವುದಕ್ಕೆ ಆ ಧರ್ಮ ಅನುಮತಿಸಲಿಲ್ಲ. ಅದಲ್ಲದೆ ಧಾರ್ಮಿಕ ನಿಬಂಧನೆಗಳಿಂದಾಗಿ ಅವರಿಗೆ ಸಂಪತ್ತು ಗಳಿಸುವ ಅಧಿಕಾರ ಇರಲಿಲ್ಲ. ಹೀಗಾಗಿ ನಮ್ಮ ಪೂರ್ವಿಕರಿಗೆ ಶಿಕ್ಷಣ, ಶಸ್ತ್ರ ವಿದ್ಯೆ ಮತ್ತು ಸಂಪತ್ತು ಗಳಿಸಲು ಸಾಧ್ಯವಾಗಲಿಲ್ಲ.

ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ನನಗೆ ಸಂಸ್ಕೃತ ಕಲಿಯಬೇಕು ಎಂದಿತ್ತು. ಆದರೆ ಧಾರ್ಮಿಕ ಕಟ್ಟಳೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ವಿದ್ಯೆ ಪಡೆಯುವುದು, ಶಸ್ತ್ರ ಹಿಡಿಯುವುದು ಮತ್ತು ಸಂಪತ್ತು ಗಳಿಸುವುದು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಪೂರ್ವಿಕರನ್ನು ಗುಲಾಮಗಿರಿಯ ಹೀನ ಸ್ಥಿತಿಯಲ್ಲಿ ಇರಿಸಿದ ಆ ಧರ್ಮ, ಯಾವುದೇ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಆ ಧರ್ಮ, ನಮ್ಮನ್ನು ಅಜ್ಞಾನದಲ್ಲಿ ದಾರಿದ್ರ್ಯದಲ್ಲಿ ನರಳುವಂತೆ ಮಾಡಿದ ಆ ಧರ್ಮದ ಬಗ್ಗೆ ನಾವೇಕೆ ಚಿಂತೆ ಮಾಡಬೇಕು? ನಿಮ್ಮ ಪೂರ್ವಿಕರಂತೆಯೇ ನೀವೂ ಈ ಧರ್ಮದಲ್ಲಿ ಮುಂದುವರಿಯ ಬೇಕೆಂದರೆ ನಿಮ್ಮನ್ನು ಕೇಳುವವರು ಯಾರೂ ಇಲ್ಲ. ನಿಮ್ಮ ಬಗ್ಗೆ ಚಿಂತೆ ಮಾಡುವವರು ಯಾರೂ ಇರುವುದಿಲ್ಲ. ಧರ್ಮಾಂತರದ ಪ್ರಶ್ನೆ ಏಕೆ ಇಷ್ಟು ಮಹತ್ವ ಪಡೆದಿದೆ ಎಂದರೆ ಇದೇ ಕಾರಣಕ್ಕೆ. ಹಿಂದೂ ಧರ್ಮದಲ್ಲಿ ನೀವು ಉಳಿದುಕೊಂಡರೆ ನಿಮಗೆ ಗುಲಾಮನ ದರ್ಜೆಗಿಂತ ಹೆಚ್ಚಿನ ಸ್ಥಾನಮಾನ ಲಭ್ಯವಾಗದು. ನಾನು ಅಸ್ಪೃಶ್ಯನಾಗಿದ್ದರೂ ಹಿಂದೂ ಧರ್ಮದಲ್ಲಿ ಯಾವುದೇ ವ್ಯಕ್ತಿ ಮಾಡುವಂತಹ ಕೆಲಸ ಮಾಡಬಲ್ಲೆ. ನನ್ನ ಹಿತಾಸಕ್ತಿ ಹಿಂದೂ ಧರ್ಮದಲ್ಲಿ ಇದೆಯೋ ಅಥವಾ ಇಲ್ಲವೋ ಎನ್ನುವುದರಿಂದ ಪರಿಹಾರವಾಗದು. ಇಂದಿನ ನನ್ನ ಪರಿಸ್ಥಿತಿಯಲ್ಲಿ ನಾನು ಉಚ್ಚ ನಾಯಾಲಯದ ನ್ಯಾಯಮೂರ್ತಿ ಆಗಬಲ್ಲೆ. ಕಾನೂನು ಮಂಡಳಿಯಲ್ಲಿ ಸಚಿವ ಸ್ಥಾನ ಪಡೆಯುವ ಸಾಮರ್ಥ್ಯ ನನಗಿದೆ. ಆದರೆ ನಿಮ್ಮ ಸ್ವಾಭಿಮಾನದ ರಕ್ಷಣೆಗಾಗಿ ನಾನು ಧರ್ಮಾಂತರ ಮಾಡುವವನಿದ್ದೇನೆ. ಮಣ್ಣುಪಾಲಾದ ಜೀವನಕ್ಕೆ ಬಂಗಾರದ ಮೌಲ್ಯ ಬರಬೇಕೆಂದರೆ ಧರ್ಮಾಂತರ ಅವಶ್ಯವೆಂದು ನನಗೆ ಭಾಸವಾಗುತ್ತದೆ.

ನಿಮ್ಮ ಸ್ಥಿತಿ ಸುಧಾರಿಸುವುದಕ್ಕೆ ನನ್ನ ಸಂಗಡಿಗರಿಂದ ನಿಮಗೆ ನೆರವು ಲಭಿಸುತ್ತದೆ ಎನ್ನುವುದು ನನಗೆ ಖಾತ್ರಿ ಇದೆ. ನಿಮ್ಮಲ್ಲಿ ಕರ್ತವ್ಯಪರತೆ ಬೆಳೆಸುವುದಕ್ಕಾಗಿ ನಾನು ಧರ್ಮಾಂತರ ಮಾಡಬೇಕಾಗಿದೆ. ನನ್ನ ಹಿತದ ಬಗ್ಗೆ ನನಗೆ ಕಾಳಜಿ ಇಲ್ಲ. ಇಂದು ನಾನು ಮಾಡುತ್ತಿರುವ ಎಲ್ಲ ಕೆಲಸಗಳಲ್ಲಿ ನಿಮ್ಮ ಹಿತಾಸಕ್ತಿ ಇದೆ. ನೀವು ನನ್ನನ್ನು ಈಶ್ವರ ಎಂದು ಭಾವಿಸಿದ್ದೀರಿ. ಆದರೆ ನಾನು ಈಶ್ವರನಲ್ಲ. ನಾನು ಕೂಡ ನಿಮ್ಮಂತೆಯೇ ಒಬ್ಬ ಸಾದಾ ಸೀದಾ ಮನುಷ್ಯ. ನಿಮಗೆ ಬೇಕಾಗಿರುವ ಯಾವುದೇ ನೆರವು ನನ್ನಿಂದ ನಿಮಗೆ ದೊರಕುತ್ತದೆ. ನನಗಾಗಿ ನಾನು ಏನನ್ನೂ ಮಾಡಿಕೊಳ್ಳುವುದಿಲ್ಲ. ನಿಮ್ಮನ್ನು ಕರ್ತವ್ಯನಿಷ್ಠರನ್ನಾಗಿ ಮಾಡುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ. ನಿಮ್ಮ ಪರಿಸ್ಥಿತಿಯ ಕುರಿತು ನೀವೇ ಚಿಂತನೆ ಮಾಡಿಕೊಳ್ಳಿ. ನಾನು ತೋರಿಸುವ ಮಾರ್ಗದಲ್ಲಿ ಮುಂದುವರಿಯುವಲ್ಲಿ ನಿಮ್ಮ ಹಿತ ಅಡಗಿದೆ. ನಿಮ್ಮಲ್ಲಿ ಕರ್ತವ್ಯನಿಷ್ಠೆ ಮೂಡಿಸದೇ ನಾನು ವಿಶ್ರಮಿಸುವುದಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News