ಗಾರ್ಗಿ ಕಾಲೇಜು ಲೈಂಗಿಕ ಕಿರುಕುಳ ಪ್ರಕರಣ: ಸಿಬಿಐ ತನಿಖೆ ಕೋರಿದ ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು

Update: 2020-02-14 16:25 GMT

ಹೊಸದಿಲ್ಲಿ,ಫೆ.14: ಸ್ಥಳೀಯ ಗಾರ್ಗಿ ಕಾಲೇಜಿನಲ್ಲಿ ಫೆ.6ರಂದು ವಾರ್ಷಿಕ ಸಾಂಸ್ಕೃತಿಕ ಉತ್ಸವದ ಸಂದರ್ಭದಲ್ಲಿ ಪಾನಮತ್ತ ಗುಂಪೊಂದು ಬಲವಂತದಿಂದ ಒಳಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳಗಳನ್ನು ನೀಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ 10 ಯುವಕರಿಗೆ ಇಲ್ಲಿಯ ಸಾಕೇತ್‌ನ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

 ಬಂಧಿತರು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್)ದ ಖಾಸಗಿ ಮತ್ತು ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬಂಧಿತ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿತ್ತು. ಶುಕ್ರವಾರ ತಲಾ 10,000 ರೂ.ಗಳ ಭದ್ರತೆ ಪಡೆದುಕೊಂಡು ಜಾಮೀನು ನೀಡಲಾಗಿದೆ.

ಘಟನೆಯಲ್ಲಿ ಭಾಗಿಯಾಗಿದ್ದ ಇತರ ಇಬ್ಬರನ್ನು ಪೊಲೀಸರು ಗುರುತಿಸಿದ್ದು,ಅವರೂ ಎನ್‌ಸಿಆರ್‌ನ ವಿದ್ಯಾರ್ಥಿಗಳಾಗಿರಬಹುದು ಎಂದು ಶಂಕಿಸಿದ್ದಾರೆ.

“ಬಂಧಿತ ಆರೋಪಿಗಳು ಕಾಲೇಜಿನ ಗೇಟ್‌ನ್ನು ಮುರಿದು ಒಳಗೆ ನುಗ್ಗುತ್ತಿರುವುದನ್ನು ತೋರಿಸುವ ಸಿಸಿಟಿವಿ ಫೂಟೇಜ್‌ ಗಳು ನಮ್ಮ ಬಳಿಯಿವೆ. ಆದರೆ ಈ ವ್ಯಕ್ತಿಗಳು ಸಹ ಲೈಂಗಿಕ ಕಿರುಕುಳ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಸಾಬೀತುಗೊಳಿಸಲು ಯಾವುದೇ ವೀಡಿಯೊ ಅಥವಾ ಸಿಸಿಟಿವಿ ಪೂಟೇಜ್ ಲಭ್ಯವಿಲ್ಲ”  ಎಂದು ಪೊಲೀಸ್ ಅಧಿಕಾರಿಯೋರ್ವರು ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದರು.

ತನ್ಮಧ್ಯೆ ಪ್ರಕರಣದಲ್ಲಿ ನ್ಯಾಯಾಲಯದ ಉಸ್ತುವಾರಿಯಡಿ ಸಿಬಿಐ ತನಿಖೆಯನ್ನು ಕೋರಿ ನ್ಯಾಯವಾದಿ ಎಂ.ಎಲ್.ಶರ್ಮಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲು ದಿಲ್ಲಿ ಉಚ್ಚ ನ್ಯಾಯಾಲಯವು ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News