ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಬೇಡಿ: ಟರ್ಕಿಗೆ ಸೂಚಿಸಿದ ಭಾರತ

Update: 2020-02-15 09:16 GMT

ಹೊಸದಿಲ್ಲಿ: ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರು ಪಾಕಿಸ್ತಾನ ಭೇಟಿ ವೇಳೆ ಜಮ್ಮು ಮತ್ತು ಕಾಶ್ಮೀರದ ಕುರಿತಂತೆ ನೀಡಿರುವ ಹೇಳಿಕೆಗೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದೆಯಲ್ಲದೆ, ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸದಂತೆ ಟರ್ಕಿ ನಾಯಕತ್ವಕ್ಕೆ ಸೂಚಿಸಿದೆ.

ಶುಕ್ರವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜತೆಗಿನ ಮಾತುಕತೆ ವೇಳೆ ಟರ್ಕಿ ಅಧ್ಯಕ್ಷ ಎರ್ದೊಗಾನ್ ಅವರು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಿಲುವಿಗೆ ತಮ್ಮ ದೇಶದ ಬೆಂಬಲ ವ್ಯಕ್ತಪಡಿಸಿದ್ದರು.

ಟರ್ಕಿ ಅಧ್ಯಕ್ಷ ಹಾಗೂ ಪಾಕ್ ಪ್ರಧಾನಿಯ ಜಂಟಿ ಘೋಷಣೆಯಲ್ಲಿ ಜಮ್ಮು ಕಾಶ್ಮೀರದ ಕುರಿತಾದ ಉಲ್ಲೇಖಗಳ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ``ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಕಾಶ್ಮೀರದ ಕುರಿತಾದ ಉಲ್ಲೇಖಗಳನ್ನು ಭಾರತ ತಿರಸ್ಕರಿಸುತ್ತದೆ'' ಎಂದು ಹೇಳಿದ್ದಾರೆ.

``ಪಾಕಿಸ್ತಾನ ಮೂಲಗಳಿಂದ ಭಾರತಕ್ಕೆ ಉಗ್ರವಾದದಿಂದ ಎದುರಾಗುತ್ತಿರುವ ಗಂಭೀರ ಅಪಾಯ ಸಹಿತ ವಾಸ್ತವಗಳನ್ನು ಸರಿಯಾಗಿ ಅರ್ಥೈಸಿಕೊಂಡು ಟರ್ಕಿಯ ನಾಯಕತ್ವ ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಬಾರದೆಂದು ನಾವು ಕೇಳಿಕೊಳ್ಳುತ್ತೇವೆ'' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಶುಕ್ರವಾರ ಕಾಶ್ಮೀರ ಕುರಿತಂತೆ ಮಾತನಾಡಿದ್ದ ಟರ್ಕಿ ಅಧ್ಯಕ್ಷ "ನಮ್ಮ ಕಾಶ್ಮೀರಿ ಸೋದರ ಸೋದರಿಯರು ದಶಕಗಳಿಂದ ಕಷ್ಟಗಳನ್ನು ಅನುಭವಿಸಿದ್ದಾರೆ ಹಾಗೂ ಇತ್ತೀಚಿಗಿನ ದಿನಗಳಲ್ಲಿ ತೆಗೆದುಕೊಳ್ಳಲಾದ ಕೆಲ ಏಕಪಕ್ಷೀಯ ಕ್ರಮಗಳಿಂದ ಈ ಕಷ್ಟಗಳು ಇನ್ನಷ್ಟು ಹೆಚ್ಚಾಗಿವೆ'' ಎಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕ್ರಮದ ಕುರಿತಂತೆ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News