ಟ್ರಂಪ್ ರೋಡ್‌ಶೋಗೆ 10 ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲು

Update: 2020-02-15 16:25 GMT

ಅಹ್ಮದಾಬಾದ್,ಫೆ.15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24ರಂದು ಅಹ್ಮದಾಬಾದ್‌ನಲ್ಲಿ ರೋಡ್‌ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 25 ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಭಾರತಕ್ಕೆ ತನ್ನ ಚೊಚ್ಚಲ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಟ್ರಂಪ್, ಅಹ್ಮದಾಬಾದ್‌ನಲ್ಲಿ ಪ್ರಧಾನಿ ಮೋದಿ ಜೊತೆ ರೋಡ್‌ಶೋನಲ್ಲಿ ಪಾಲ್ಗೊಳ್ಳಲಿರುವರು ಹಾಗೂ ಸಬರಮತಿ ಆಶ್ರಮಕ್ಕೂ ಭೇಟಿ ನೀಡಲಿರುವರು. ಮೊಟೆರಾದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಅಮೆರಿಕ ಅಧ್ಯಕ್ಷರು ಉದ್ಘಾಟಿಸಲಿರುವರು.

ಟ್ರಂಪ್ -ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಅಹ್ಮದಾಬಾದ್ ನಗರದ ಆಯಕಟ್ಟಿನ ಸ್ಥಳಗಳಲ್ಲಿ 65 ಸಹಾಯಕ ಕಮೀಶರನ್‌ಗಳು,200 ನಿರೀಕ್ಷಕರು ಹಾಗೂ 800 ಸಬ್‌ಇನ್ಸ್‌ಪೆಕ್ಟರ್‌ಗಳು ಅವರನ್ನು ಒಳಗೊಂಡ 10 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿತರಾಗಲಿದ್ದಾರೆಂದು ಉಪ ಪೊಲೀಸ್ ಆಯುಕ್ತ (ನಿಯಂತ್ರಣ ಕೊಠಡಿ) ವಿಜಯ್ ಪಟೇಲ್ ತಿಳಿಸಿದ್ದಾರೆ.

  ಇವರ ಜೊತೆಗೆ ಅಮೆರಿಕದ ಬೇಹುಗಾರಿಕೆ ದಳ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ಮತ್ತು ವಿಶೇಷ ರಕ್ಷಣಾ ತಂಡ (ಎಸ್‌ಪಿಜಿ)ದ ಅಧಿಕಾರಿಗಳು ಕೂಡಾ ಭದ್ರತಾ ಕಾರ್ಯಗಳಿಗಾಗಿ ನಿಯೋಜಿತರಾಗಲಿದ್ದಾರೆ ಎಂದವರು ಹೇಳಿದ್ದಾರೆ.

     ಟ್ರಂಪ್, ಅವರ ಪತ್ನಿ ಮೆಲನಿಯಾ ಟ್ರಂಪ್ ಹಾಗೂ ಪ್ರಧಾನಿ ಮೋದಿ ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಸಬರಮತಿ ಅಶ್ರಮದವರೆಗೆ 22 ಕಿ.ಮೀ. ದೂರದವರೆಗೆ ರೋಡ್‌ಶೋ ನಡೆಸಲಿದ್ದಾರೆ ಆನಂತರ ಇಂದಿರಾ ಬ್ರಿಜ್ ಮಾರ್ಗವಾಗಿ ಮೊಯಿತ್ರಾ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ ಎಂದು ವಿಜಯ್‌ಪಟೇಲ್ ತಿಳಿಸಿದ್ದಾರೆ.

 ರೋಡ್‌ಶೋ ಮಾರ್ಗದುದ್ದಕ್ಕೂ ಎನ್‌ಎಸ್‌ಜಿಯ ಹೊಂಚು ಈಡುಗಾರರನ್ನು (ಸ್ನಿಪರ್) ನಿಯೋಜಿಸಲಾಗುವುದು. ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯದಳವು ಈಗಾಗಲೇ ಇಡೀ ಮಾರ್ಗವನ್ನು ಸ್ಕಾನ್ ಮಾಡುವುದನ್ನು ಆರಂಭಿಸಿದೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ವಿಶೇಷವಾಗಿ ವಿದೇಶಗಳಿಂದ ನಗರಕ್ಕೆ ಆಗಮಿಸಿದ ಅತಿಥಿಗಳ ಬಗ್ಗೆ ಮಹಿತಿಯನ್ನು ಹೊಟೇಲ್‌ಗಳಲ್ಲಿ ಪಡೆಯಲು ಪೊಲೀಸರು ವಿಶೇಷ ಸಾಫ್ಟ್‌ವೇರ್ ಒಂದನ್ನು ಬಳಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News