ಈ ದೇಶವನ್ನು ಗೋಡೆಗಳ ನಗರ ಮಾಡುವುದು ನನ್ನ ಕನಸು!

Update: 2020-02-16 05:46 GMT

ಎಂದಿನಂತೆ ಎಂಜಲು ಕಾಸಿ ಅನಿಲ್ ಅಂಬಾನಿಯ ಮನೆಯ ಮುಂದೆ ಹೋಗಿ ಗೇಟು ಬಳಿ ಕುರ್ಚಿಯಲ್ಲಿ ಕೂತಿದ್ದ ಚೌಕೀದಾರ್‌ನನ್ನು ಗೋಗರೆದ ‘‘ಸಾರ್...ಇಂಟರ್ಯೂ ಕೊಡಿ....’’

‘‘ಈಗಷ್ಟೇ ಅರ್ನಾಬ್ ಗೋಸ್ವಾಮಿಗೆ ಕೊಟ್ಟಾಗಿದೆ. ಮತ್ತೆ ಬಾ...’’

‘‘ಸಾರ್...ಯಡಿಯೂರಪ್ಪಾಜಿ ಊರಿನಿಂದ ಬಂದಿದ್ದೇನೆ....’’ ಕಾಸಿ ಎಂದದ್ದೇ ಚೌಕೀದಾರ್ ಬೆಚ್ಚಿ ಬಿದ್ದ ‘‘ಮತ್ತೆ ನೆರೆ ಪರಿಹಾರ ಬೇಕು ಅಂದಿದ್ದಾರ....’’ ಕೇಳಿದ.

‘‘ಇಲ್ಲ ಸಾರ್....ನನಗೆ ಗುಜರಾತ್ ಬಗ್ಗೆ ಇಂಟರ್ಯೂ ಬೇಕು....’’ ಕಾಸಿ ಸ್ಪಷ್ಟಪಡಿಸಿದ.

‘‘ಗುಜರಾತ್ ಅಭಿವೃದ್ಧಿಯನ್ನು ನೋಡುವುದಕ್ಕಾಗಿ ಟ್ರಂಪ್ ಸಾಹೇಬರು ಬರುತ್ತಿದ್ದಾರೆ....ನಿಮಗೆ ಗೊತ್ತಲ್ಲ? ಫೇಸ್‌ಬುಕ್‌ನಲ್ಲಿ ಅವರು ನಂ. 1, ನಾನು ನಂ. 2...’’

‘‘ಅಂದರೆ ಅವರು ಗುಜರಾತ್‌ಗೆ ನಂ.2 ಮಾಡ್ಲಿಕೆ ಬರ್ತಿದ್ದಾರಾ...ಸಾರ್?’’

‘‘ಇದು ಆ ಟೂ ಅಲ್ಲ....ನಂಬರ್ ಟೂ ಸ್ಥಾನದಲ್ಲಿದ್ದೇನೆ....ಅವರು ಗುಜರಾತ್ ಮಾದರಿಯಲ್ಲಿ ಅಮೆರಿಕವನ್ನು ಕಟ್ಟಲು ಹೊರಟಿದ್ದಾರೆ....ಅದಕ್ಕಾಗಿ ಗುಜರಾತ್‌ಗೆ ಭೇಟಿ ಮಾಡಲಿದ್ದಾರೆ....’’ ಚೌಕಿದಾರ್ ವಿವರಿಸಿದ.

‘‘ಗುಜರಾತ್ ಅಭಿವೃದ್ಧಿ ಕಾಣದ ಹಾಗೆ ಅದಕ್ಕೆ ಅಡ್ಡವಾಗಿ ಗೋಡೆ ಕಟ್ಟಲಾಗುತ್ತದೆಯಂತೆ...ಹೌದಾ ಸಾರ್?’’ ಕಾಸಿ ಕೇಳಿದ.

‘‘ಝೂಟ್ ಹೇ ಝೂಟ್ ಝೂಟ್ ಹೇ....ಟ್ರಂಪ್ ಬರುತ್ತಿರುವುದೇ ಗುಜರಾತ್‌ನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಗೋಡೆಯನ್ನು ನೋಡುವುದಕ್ಕಾಗಿ....’’

‘‘ಅಂದರೆ...’’

‘‘ಮುಖ್ಯವಾಗಿ ಚೀನಕ್ಕೆ ಪೈಪೋಟಿ ನೀಡುವುದು ನಮ್ಮ ಗುರಿ. ದಿ ಗ್ರೇಟ್ ವಾಲ್ ಆಫ್ ಚೈನಾಕ್ಕೆ ಬದಲಾಗಿ ನಾವು ದಿ ಗ್ರೇಟ್ ವಾಲ್ ಆಫ್ ಗುಜರಾತ್‌ನ್ನು ನಿರ್ಮಿಸುತ್ತಿದ್ದೇವೆ...ಅದನ್ನು ಟ್ರಂಪ್ ಅವರು ಉದ್ಘಾಟನೆ ಮಾಡುತ್ತಿದ್ದಾರೆ....’’

‘‘ಅಂದರೆ ವಲ್ಲಭಭಾಯಿ ಪಟೇಲ್ ಪ್ರತಿಮೆಯ ಹಾಗೆ ಇದು ಕೂಡ ವಿಶ್ವದಲ್ಲೇ ಅತಿ ಉದ್ದವಾದ ಗೋಡೆಯೆ?’’

‘‘ಹೌದು. ಮುಂದಿನ ದಿನಗಳಲ್ಲಿ ಈ ಗೋಡೆಯನ್ನು ನೋಡಲು ವಿಶ್ವದಿಂದ ಕೋಟ್ಯಂತರ ಪ್ರವಾಸಿಗರು ಗುಜರಾತ್‌ಗೆ ಆಗಮಿಸಲಿದ್ದಾರೆ. ಭಾರತಕ್ಕೆ ಇದರಿಂದ ಬಹಳಷ್ಟು ಆದಾಯ ಬರಲಿದೆ. ಈ ಆದಾಯದಿಂದಲೇ ನಾವು ದೇಶದ ಆರ್ಥಿಕತೆಯನ್ನು ಮೇಲೆತ್ತಲಿದ್ದೇವೆ....’’ ಚೌಕೀದಾರ್ ಭರವಸೆ ನೀಡಿದ.

‘‘ಸಾರ್...ಈ ಗೋಡೆಯ ಆಚೆಗೆ ಏನಿದೆ ಸಾರ್...?’’

‘‘ನೋಡ್ರೀ ಈ ಗೋಡೆಯ ಇಕ್ಕೆಡೆಗಳಲ್ಲಿ ಹಾಂಕಾಂಗ್, ಸಿಂಗಾಪುರ್‌ನಂತೆ ಕಂಗೊಳಿಸುವ ಗುಜರಾತ್ ಇದೆ....’’

‘‘ಹಾಗಾದರೆ ಟ್ರಂಪ್ ಅದನ್ನು ನೋಡುವುದು ಬೇಡವೆ?’’ ಕಾಸಿ ಅರ್ಥವಾಗದೆ ಕೇಳಿದ.

‘‘ಅದನ್ನೆಲ್ಲ ನಾವು ಈಗಾಗಲೇ ಸಿನೆಮಾ ಮಾಡಿ ಎಲ್ಲವನ್ನೂ ಕಂಪ್ಯೂಟರ್‌ನಲ್ಲೇ ತೋರಿಸಲಿದ್ದೇವೆ...ನಮ್ಮ ದೇಶದ ಅಭಿವೃದ್ಧಿ ನೋಡಿ ಅವರ ದೃಷ್ಟಿ ತಾಗಬಾರದು ಎನ್ನುವ ಉದ್ದೇಶವೂ ಇದರ ಹಿಂದೆ ಇದೆ...’’ ಚೌಕೀದಾರ್ ತನ್ನ ದೂರದೃಷ್ಟಿಯನ್ನು ಪ್ರದರ್ಶಿಸಿದ.

‘‘ಸಾರ್...ಟ್ರಂಪ್ ಅವರು ಕಾರಿನ ಕಿಟಕಿಯಿಂದ ಶಾಹೀನ್ ಬಾಗ್‌ನ್ನು ನೋಡಿದರೆ....’’ ಕಾಸಿ ಆತಂಕವನ್ನು ಮುಂದಿಟ್ಟ.

‘‘ನೋಡಿ...ನಾವು ಸಿಎಎ ತಂದದ್ದೇ ಶಾಹೀನ್ ಬಾಗ್‌ನ ಮುಂದೆ ದೀರ್ಘವಾದ ಗೋಡೆಯೊಂದನ್ನು ಕಟ್ಟಿ ಭಾರತದ ಅಭಿವೃದ್ಧ್ದಿಯನ್ನು ವಿಶ್ವಕ್ಕೆ ತೋರಿಸುವುದಕ್ಕಾಗಿ. ಆದರೆ ಈ ಗೋಡೆ ಕಟ್ಟುವುದಕ್ಕೆ ಕೆಲವರು ರಾಷ್ಟ್ರಧ್ವಜವನ್ನು ಬಳಸಿ ಅಡ್ಡಿ ಮಾಡುತ್ತಿದ್ದಾರೆ....ಇಲ್ಲವಾದರೆ ಸಿಎಎ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅತಿ ದೀರ್ಘವಾದ ಗೋಡೆಯನ್ನು ಕಟ್ಟಿ ನಾವು ಚೀನಕ್ಕೆ ಸವಾಲು ಹಾಕುತ್ತಿದ್ದೆವು. ಆದರೆ ಕೆಲವು ದೇಶವಿರೋಧಿಗಳು ಈ ಗೋಡೆಕಟ್ಟಲು ಅಡ್ಡಿ ಮಾಡುತ್ತಿದ್ದಾರೆ....’’ ಚೌಕೀದಾರ್ ಕಳವಳ ವ್ಯಕ್ತಪಡಿಸುತ್ತಿದ್ದರು.

‘‘ಸಾರ್ ದಿಲ್ಲಿ ಚುನಾವಣೆಯ ಇವಿಎಂ ಒತ್ತಿ ಶಾಹೀನ್ ಬಾಗ್‌ನ್ನು ಢಮಾರ್ ಮಾಡುವ ನಿಮ್ಮ ಯೋಜನೆ ಕೈ ಕೊಟ್ಟದ್ದು ಹೇಗೆ ?’’

‘‘ಶಾಹೀನ್ ಬಾಗ್‌ನಲ್ಲಿ ಢಮಾರ್ ಮಾಡುವುದಕ್ಕಾಗಿಯೇ ಇವಿಎಂನೊಳಗೆ ಸ್ಫೋಟಕಗಳನ್ನು ಇಟ್ಟು ಚುನಾವಣೆ ಬರುವವರೆಗೆ ಜೋಪಾನವಾಗಿಟ್ಟುಕೊಳ್ಳಿ ಇಂದು ದಿಲ್ಲಿಯ ಬಿಜೆಪಿಯ ನಾಯಕರ ಕೈಗೆ ಕೊಡಲಾಗಿತ್ತು. ಆದರೆ ಅದು ಬಿಜೆಪಿಯ ಕಚೇರಿಯೊಳಗೇ ಸ್ಫೋಟವಾಗಿ ಬಿಟ್ಟಿತು.....’’

‘‘ಸಾರ್...ಈ ದೇಶದಲ್ಲಿ ಬಡವರು, ಅಲೆಮಾರಿಗಳು....ಇವರನ್ನೆಲ್ಲ ಟ್ರಂಪ್ ನೋಡಿದರೆ ದೇಶಕ್ಕೆ ಅವಮಾನವಲ್ಲವೆ?’’ ಕಾಸಿ ಇನ್ನಷ್ಟು ಆತಂಕ ವ್ಯಕ್ತಪಡಿಸಿದ.

‘‘ನಾನು ಸಿಎಎ ಜಾರಿ ತಂದದ್ದೇ ಈ ಅವಮಾನದಿಂದ ತಪ್ಪಿಸಿ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಾದ್ಯಂತ ಹರಡುವುದಕ್ಕಾಗಿ. ಎನ್‌ಆರ್‌ಸಿ ಜಾರಿಗೊಳಿಸಿ ಈ ದೇಶದೊಳಗಿರುವ ಬಡವರನ್ನು, ದಲಿತರನ್ನು, ಅಲೆಮಾರಿಗಳನ್ನೆಲ್ಲ ಡಿಟೆನ್‌ಶನ್ ಕ್ಯಾಂಪ್‌ಗೆ ಹಾಕಿ ಆ ಕ್ಯಾಂಪ್‌ನ ಉದ್ದಕ್ಕೆ ಬೃಹತ್ ಗೋಡೆ ಕಟ್ಟಿ ಈ ದೇಶದ ಮರ್ಯಾದೆ ಉಳಿಸುವುದು ನನ್ನ ಉದ್ದೇಶವಾಗಿತ್ತು. ಆದರೆ ವಿರೋಧ ಪಕ್ಷಗಳಿಗೆ ಈ ದೇಶದ ಮರ್ಯಾದೆಗಿಂತ ಅವರ ರಾಜಕೀಯ ಸ್ವಾರ್ಥ ಮುಖ್ಯವಾಗಿತ್ತು....’’ ಚೌಕೀದಾರ್ ಈಗ ಅಳತೊಡಗಿದ.

‘‘ಸಾರ್....ಇನ್ನೂ ಎಲ್ಲೆಲ್ಲ ಗೋಡೆಗಳನ್ನು ಕಟ್ಟಲಿದ್ದೀರಿ ಸಾರ್...?’’ ಕಾಸಿ ಆಸಕ್ತಿಯಿಂದ ಕೇಳಿದ.

‘‘ನೋಡಿ...ಇಡೀ ಭಾರತವನ್ನು ಗೋಡೆಗಳ ದೇಶ ಎಂದು ಕರೆಯುವುದು ನನ್ನ ಪ್ರಮುಖ ಉದ್ದೇಶ. ಮುಖ್ಯವಾಗಿ ಋತುಮತಿಯಾಗಿರುವ ಮಹಿಳೆಯರನ್ನು ಒಂದೆಡೆ ಸೇರಿಸಿ ಗೋಡೆಕಟ್ಟಲಿದ್ದೇವೆ....ಆಝಾದಿ ಘೋಷಣೆ ಕೂಗುವವರಿಗಾಗಿ ಇನ್ನೊಂದು ಬೃಹತ್ ಗೋಡೆ....ಪದ್ಯ ಬರೆಯುವ ಕವಿಗಳಿಗಾಗಿ ಮಗದೊಂದು ಗೋಡೆ....ಸರಕಾರಿ ಶಾಲೆಗಳಿಗೆ ಅತಿ ಎತ್ತರದ ಗೋಡೆ....ಹೀಗೆ....ಎಲ್ಲ ಕಡೆಗೆ ಗೋಡೆ ಕಟ್ಟುವುದಕ್ಕಾಗಿಯೇ ನಾವು ವಿಶೇಷ ತೆರಿಗೆಯನ್ನು ಜಾರಿಗೊಳಿಸಲಿದ್ದೇವೆ....’’

‘‘ದೇಶದ ಜನರ ಮೇಲೆ ಇನ್ನಷ್ಟು ತೆರಿಗೆಯೆ?’’ ಕಾಸಿ ಬೆದರಿ ಕೇಳಿದ...

‘‘ದೇಶದ ಗೌರವ ವಿಶ್ವದಲ್ಲಿ ಉಳಿಯಬೇಕಾದರೆ ಗೋಡೆಗಳು ಅತ್ಯಗತ್ಯ. ನಮ್ಮ ಬೆತ್ತಲೆ ಮೈ ಕಾಣದ ಹಾಗೆ ನಾವು ಬಟ್ಟೆ ಧರಿಸುವುದಿಲ್ಲವೇ? ಹಾಗೆಯೇ ಈ ದೇಶದ ಮರ್ಯಾದೆಯನ್ನು ಉಳಿಸುವುದಕ್ಕಾಗಿ ಗೋಡೆಗಳನ್ನು ಕಟ್ಟಲಿದ್ದೇವೆ. ಈ ಗೋಡೆ ಕಟ್ಟಲು ಬೇಕಾದ ಸಾಮಗ್ರಿಗಳಿಗಾಗಿ ವಿಶ್ವ ಬ್ಯಾಂಕ್ ಭಾರೀ ಮಟ್ಟದ ಸಾಲವನ್ನು ನೀಡುವುದಕ್ಕೆ ಮುಂದೆ ಬಂದಿದೆ’’ ಚೌಕೀದಾರ್ ಯೋಜನೆಗಳನ್ನು ವಿವರಿಸಿದ. ‘‘ಸಾರ್ ಕೊನೆಯ ಪ್ರಶ್ನೆ....ನಿಮ್ಮ ಕನಸಿನ ಪುತ್ರ ವಿಕಾಸ್ ಎಲ್ಲಿದ್ದಾನೆ?’’

‘‘ನೋಡಿ....ಈ ಬೃಹತ್ ಗೋಡೆಗಳನ್ನು ಕಟ್ಟುವಾಗ ನರಬಲಿ ಕೊಡುವುದು ಪುರಾತನ ಸಂಪ್ರದಾಯ. ನಮ್ಮ ಸರಕಾರ ಪ್ರಾಚೀನ ಸಂಪ್ರಾಯದಾಯಕ್ಕೆ ಗೌರವ ಕೊಡುತ್ತದೆ. ಆದುದರಿಂದ ಈ ಗೋಡೆಗೆ ಈಗಾಗಲೇ ವಿಕಾಸನನ್ನು ಬಲಿ ಕೊಟ್ಟು ಆಗಿದೆ....’’ ಚೌಕೀದಾರ್ ಹೇಳಿದ್ದೇ....ಎಂಜಲು ಕಾಸಿ ಗೋಡೆ ಹಾರಿ ಓಡತೊಡಗಿದೆ.

* ಚೇಳಯ್ಯ

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News