ಪೊಲೀಸರು ತಾರತಮ್ಯವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರು ಗೌರವಕ್ಕೆ ಅರ್ಹರು: ಗೃಹಸಚಿವ ಅಮಿತ್ ಶಾ

Update: 2020-02-16 14:26 GMT

ಹೊಸದಿಲ್ಲಿ,ಫೆ.16: ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ತಮ್ಮ ಕರ್ತವ್ಯವನ್ನು ಯಾವುದೇ ತಾರತಮ್ಯವಿಲ್ಲದೆ ನಿರ್ವಹಿಸುತ್ತಿದ್ದಾರೆ ಮತ್ತು ಅವರು ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರವಿವಾರ ಇಲ್ಲಿ ಹೇಳಿದರು.

ದಿಲ್ಲಿ ಪೊಲೀಸ್‌ 70ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ಧರ್ಮ ಮತ್ತು ಜಾತಿಯ ಆಧಾರದಲ್ಲಿ ಯಾವುದೇ ತಾರತಮ್ಯವಿಲ್ಲದೆ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವುದು ಪೊಲೀಸರ ಕೆಲಸವಾಗಿದೆ. ಅವರು ಯಾರದೇ ಶತ್ರುಗಳಲ್ಲ,ಅವರು ಶಾಂತಿಯ ಸ್ನೇಹಿತರು. ಇದೇ ಕಾರಣದಿಂದ ಅವರನ್ನು ಗೌರವಿಸಬೇಕು. ಸದಾ ಪೊಲೀಸರನ್ನು ಟೀಕಿಸುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಜನರು ಪೊಲೀಸರ ಪಾತ್ರವನ್ನೂ ಅರ್ಥಮಾಡಿಕೊಳ್ಳಬೇಕು ಎಂದರು.

ನಗರದಲ್ಲಿ ಅಪರಾಧಗಳನ್ನು ಕಡಿಮೆ ಮಾಡಲು ಸ್ಮಾರ್ಟ್ ಪೊಲೀಸಿಂಗ್,ಡಯಲ್ 112 ಮತ್ತು ನ್ಯಾಷನಲ್ ಸೈಬರ್ ಫೊರೆನ್ಸಿಕ್ ಲ್ಯಾಬ್‌ನಂತಹ ಯೋಜನೆಗಳನ್ನು ಪರಿಚಯಿಸುತ್ತಿರುವ ಪೊಲೀಸ್ ಇಲಾಖೆಯ ಪ್ರಯತ್ನಗಳನ್ನೂ ಶಾ ಪ್ರಶಂಸಿಸಿದರು.

ದಿಲ್ಲಿ ಪೊಲೀಸ್ ಭಾರತದಲ್ಲಿ ಮಾತ್ರವಲ್ಲ,ವಿಶ್ವದಲ್ಲಿಯೇ ಅತ್ಯುತ್ತಮ ಪೊಲೀಸ್ ಪಡೆಗಳಲ್ಲೊಂದಾಗಿದೆ ಎಂದರು.

ತನ್ನ ಭಾಷಣದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನೂ ಉಲ್ಲೇಖಿಸಿದ ಶಾ,ಪಟೇಲ್ ಅವರೇ ದಿಲ್ಲಿ ಪೋಲಿಸ್‌ನ್ನು ಆರಂಭಿಸಿದ್ದರು. ಅದು ಇಂದಿಗೂ ಇಡೀ ಪಡೆಗೆ ಸ್ಫೂರ್ತಿಯನ್ನು ನೀಡುತ್ತಿದೆ ಎಂದು ತಾನು ಭಾವಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News