ಸ್ವಾಧೀನಪಡಿಸಿಕೊಂಡ 67 ಎಕರೆ ಜಮೀನು ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರ: ಪ್ರಧಾನಿ ಮೋದಿ

Update: 2020-02-16 14:30 GMT

 ವಾರಣಾಸಿ,ಫೆ.16: ಕೇಂದ್ರ ಸರಕಾರವು ಅಯೋಧ್ಯೆ ಕಾನೂನಿನಡಿ ಸ್ವಾಧೀನ ಪಡಿಸಿಕೊಂಡಿರುವ 67 ಎಕರೆ ಜಮೀನನ್ನು ಮಂದಿರ ನಿರ್ಮಾಣದ ಉಸ್ತುವಾರಿಗಾಗಿ ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಇಲ್ಲಿ ಪ್ರಕಟಿಸಿದರು.

ಕೇಂದ್ರವು ಅಯೋಧ್ಯೆಯಲ್ಲಿನ ‘ವಿವಾದಿತ ನಿವೇಶನ’ದ ಸುತ್ತಲಿನ 67 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತ್ತು. ವಿವಾದವು ಬಗೆಹರಿಯುವವರೆಗೆ ಈ ಜಮೀನು ಕೇಂದ್ರದ ಅಧೀನದಲ್ಲಿಯೇ ಇರಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿತ್ತು.

ವಾರಣಾಸಿಯ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮೋದಿ,ಭಾರತದ ಅನನ್ಯತೆಯು ಅದರ ಸಾಮೂಹಿಕ ಸಂಪ್ರದಾಯ ಮತ್ತು ಸಂಸ್ಕೃತಿಯ ಮೂಲಕ ರೂಪುಗೊಂಡಿದೆಯೇ ಹೊರತು ಅದರ ಆಡಳಿತಗಾರರಿಂದಲ್ಲ ಎಂದರು.

ಇದೇ ವೇಳೆ ಮೋದಿ 19 ಭಾಷೆಗಳಲ್ಲಿ ‘ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ’ದ ಆವೃತ್ತಿ ಮತ್ತು ಅದರ ಮೊಬೈಲ್ ಆ್ಯಪ್‌ನ್ನು ಬಿಡುಗಡೆಗೊಳಿಸಿದರು. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಮತ್ತು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಮೋದಿ ಜೊತೆಯಲ್ಲಿದ್ದರು.

ತನ್ನ ಸ್ವಕ್ಷೇತ್ರ ಬನಾರಸ ಭೇಟಿ ಸಂದರ್ಭದಲ್ಲಿ 30ಕ್ಕೂ ಅಧಿಕ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ,430 ಹಾಸಿಗೆಗಳ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ಬನಾರಸ ಹಿಂದು ವಿವಿಯಲ್ಲಿ 70 ಹಾಸಿಗೆಗಳ ಮನೋರೋಗ ಆಸ್ಪತ್ರೆಯನ್ನು ಉದ್ಘಾಟಿಸಿದರು.

ರಾತ್ರಿ ಸಂಚಾರದ ದೇಶದ ಮೊದಲ ಖಾಸಗಿ ರೈಲು ‘ಮಹಾಕಾಲ ಎಕ್ಸ್ ಪ್ರೆಸ್’ಗೂ ಮೋದಿ ವೀಡಿಯೊ ಲಿಂಕ್ ಮೂಲಕ ಚಾಲನೆ ನೀಡಿದರು. ಈ ರೈಲು ಮೂರು ಜ್ಯೋತಿರ್ಲಿಂಗ ಧಾಮಗಳಾದ ಉತ್ತರ ಪ್ರದೇಶದ ವಾರಣಾಸಿ ಹಾಗೂ ಮಧ್ಯಪ್ರದೇಶದ ಉಜ್ಜೈನ ಮತ್ತು ಓಂಕಾರೇಶ್ವರಗಳನ್ನು ಸಂಪರ್ಕಿಸಲಿದೆ. ಚಾಂದೌಲಿ ಜಿಲ್ಲೆಯ ಪದವನಲ್ಲಿರುವ ಪಂಡಿತ ದೀನದಯಾಳ ಉಪಾಧ್ಯಾಯ ಸ್ಮಾರಕ ಕೇಂದ್ರದಲ್ಲಿ ದೀನದಯಾಳರ 63 ಅಡಿ ಎತ್ತರದ ಪ್ರತಿಮೆಯನ್ನೂ ಮೋದಿ ಅನಾವರಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News