ಇನ್ನು ಮತದಾನದಲ್ಲಿ ನೂತನ ತಂತ್ರಜ್ಞಾನ: ಇದರ ವಿಶೇಷತೆಯೇನು ಗೊತ್ತಾ?

Update: 2020-02-16 14:35 GMT

ಹೊಸದಿಲ್ಲಿ,ಫೆ.16: ಮತದಾನಕ್ಕಾಗಿ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲು ಚುನಾವಣಾ ಆಯೋಗವು ಐಐಟಿ-ಮದ್ರಾಸ್ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ದೂರದ ಊರುಗಳಲ್ಲಿರುವ ಮತದಾರರು ತಮ್ಮ ಕ್ಷೇತ್ರಗಳ ನಿಗದಿತ ಮತಗಟ್ಟೆಗಳಿಗೆ ತೆರಳದೆ ಮತಗಳನ್ನು ಚಲಾಯಿಸಲು ಈ ತಂತ್ರಜ್ಞಾನವು ಅವಕಾಶ ಕಲ್ಪಿಸಲಿದೆ. ಯೋಜನೆಯು ಹಾಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಂತದಲ್ಲಿದೆ ಎಂದು ಆಯೋಗದ ಹಿರಿಯ ಅಧಿಕಾರಿಗಳು ತಿಳಿಸಿದರು.

ಯೋಜನೆಯಲ್ಲಿ ಬಳಸಲಾಗುವ ‘ಬ್ಲಾಕ್ ಚೈನ್’ ತಂತ್ರಜ್ಞಾನದ ಕುರಿತು ವಿವರಿಸಿದ ಹಿರಿಯ ಉಪ ಚುನಾವಣಾ ಆಯುಕ್ತ ಸಂದೀಪ ಸಕ್ಸೇನಾ ಅವರು,ಇದು ಬಯೊಮೆಟ್ರಿಕ್ ಸಾಧನಗಳು ಮತ್ತು ವೆಬ್ ಕ್ಯಾಮರಾ ಸಜ್ಜಿತ ವೈಟ್ ಲಿಸ್ಟೆಡ್ ಐಪಿ ಸಾಧನಗಳ ಮೇಲೆ ನಿಯಂತ್ರಿತ ವಾತಾವರಣದಲ್ಲಿ ದ್ವಿಮಾರ್ಗ ವಿದ್ಯುನ್ಮಾನ ಮತದಾನ ವ್ಯವಸ್ಥೆಯ ಪರಿಕಲ್ಪನೆಯಾಗಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ಇಂಟರ್ನೆಟ್ ಲೈನ್‌ಗಳನ್ನು ಬಳಸಲಾಗುವುದು ಎಂದರು. ಆದರೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಮತದಾರರು ಪೂರ್ವ ನಿರ್ಧರಿತ ಅವಧಿಯಲ್ಲಿ ನಿಯೋಜಿತ ತಾಣಕ್ಕೆ ಭೇಟಿ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ ಅವರು,‘ಯಾವುದೇ ಸಮಯ-ಎಲ್ಲಿಂದಲೂ-ಯಾವುದೇ ಸಾಧನದಲ್ಲಿ’ ಮತ ಚಲಾಯಿಸಬಹುದಾದ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಕಾಲಾವಕಾಶ ಮತ್ತು ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಅಗತ್ಯವಿದೆ ಎಂದರು.

ಉದಾಹರಣೆಗೆ ಲೋಕಸಭಾ ಚುನಾವಣೆಯಿದೆ ಮತ್ತು ಚೆನ್ನೈನ ಮತದಾರನೋರ್ವ ದಿಲ್ಲಿಯಲ್ಲಿದ್ದಾನೆ ಎಂದಿಟ್ಟುಕೊಳ್ಳಿ. ಮತದಾನಕ್ಕಾಗಿ ತನ್ನ ಊರಿಗೆ ಮರಳುವ ಅಥವಾ ಮತದಾನವನ್ನು ತಪ್ಪಿಸಿಕೊಳ್ಳುವ ಬದಲು ಆತ ನಿಗದಿತ ಅವಧಿಯಲ್ಲಿ ಚುನಾವಣಾ ಆಯೋಗವು ಸ್ಥಾಪಿಸಿರುವ,ಉದಾಹರಣೆಗೆ ‘ಕನಾಟ್ ಪ್ಲೇಸ್’ ನಲ್ಲಿರುವ ಕೇಂದ್ರಕ್ಕೆ ತೆರಳಿ ತನ್ನ ಮತವನ್ನು ಚಲಾಯಿಸಬಹುದು. ಇಂತಹ ಮತದಾರರು ಈ ಅವಕಾಶವನ್ನು ಬಳಸಿಕೊಳ್ಳಲು ತಮ್ಮ ಚುನಾವಣಾಧಿಕಾರಿಗಳಿಗೆ ಮೊದಲೇ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News