‘ಸೋಲಿಲ್ಲದ ಸರದಾರರು’ ಎಂಬ ಭ್ರಮೆಯಲ್ಲಿದ್ದವರಿಗೆ ಪಾಠ ಕಲಿಸಿದ ದಿಲ್ಲಿ ಚುನಾವಣೆ: ಶಿವಸೇನೆ

Update: 2020-02-16 14:51 GMT

ಹೊಸದಿಲ್ಲಿ, ಫೆ.16: ತಾವು ಅಜೇಯರು, ಸೋಲರಿಯದ ಸರದಾರರು ಎಂಬ ಭ್ರಮೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ದಿಲ್ಲಿಯ ಜನತೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಮುಖವಾಣಿ ‘ಸಾಮ್ನ’ದ ವಾರದ ಅಂಕಣದಲ್ಲಿ, ಬಿಜೆಪಿಯ ಧರ್ಮ ಕೇಂದ್ರಿತ ಚುನಾವಣಾ ತಂತ್ರಗಾರಿಕೆಯನ್ನು ರಾವತ್ ಟೀಕಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಜೇಯ ಎಂಬ ಭಾವನೆ ಮೂಡಿಸಿದ್ದ ಬಿಜೆಪಿ, ದಿಲ್ಲಿ ಚುನಾವಣೆ ಸಂದರ್ಭ ಇಸ್ಪಿಟ್ ಕಾರ್ಡ್‌ನ ಮನೆಯಂತೆ ಉರುಳಿ ಬಿದ್ದಿದೆ. ಹನುಮಂತನ ಭಕ್ತ ಕೇಜ್ರಿವಾಲ್‌ರನ್ನು ದಿಲ್ಲಿಯ ಜನತೆ ರಾಮನಂತೆ ಆಶೀರ್ವದಿಸಿದ್ದಾರೆ. ಈ ಚುನಾವಣೆಯಿಂದ ಹಲವು ಪಾಠಗಳನ್ನು ಕಲಿಯಬೇಕಿದೆ ಎಂದು ರಾವತ್ ಹೇಳಿದ್ದಾರೆ.

 ಮತದಾರರು ಅಪ್ರಾಮಾಣಿಕರಲ್ಲ. ರಾಜಕೀಯ ಲಾಭಕ್ಕಾಗಿ ಮುನ್ನೆಲೆಗೆ ತಂದ ಧಾರ್ಮಿಕ ಭಾವನೆಯ ಸುಳಿಗಾಳಿಗೆ ಮತದಾರರು ಸಿಲುಕಲಿಲ್ಲ. ಧರ್ಮವಿಲ್ಲದ ಯಾವುದೇ ದೇಶವಿಲ್ಲ. ಆದರೆ ಧರ್ಮ ಎಂದರೆ ದೇಶಭಕ್ತಿಯಲ್ಲ. ಈಗ ಬಿಜೆಪಿಗೆ ಚುನಾವಣೆ ಗೆಲ್ಲಲು ಶ್ರೀರಾಮನೂ ನೆರವಾಗುತ್ತಿಲ್ಲ. ಮೋದಿ ಮತ್ತು ಕೇಜ್ರೀವಾಲರ ಮಧ್ಯೆ ಇರುವ ಸಾಮ್ಯತೆಯೆಂದರೆ ಇಬ್ಬರೂ ಸ್ವಹಿತಾಸಕ್ತರು. ಆದರೆ ಮೋದಿಗೆ ದುರಹಂಕಾರ ಮತ್ತು ಜಂಭ ಹೆಚ್ಚಿದೆ. ಕೇಜ್ರಿವಾಲ್ ಈ ಹಿಂದೊಮ್ಮೆ ಇಡೀ ದೇಶದ ನಾಯಕನಾಗುವ ಆಸೆ ಮೂಡಿತ್ತು. ಆದರೆ ಲೋಕಸಭೆಯಲ್ಲಿ ಎದುರಾದ ಸೋಲಿನಿಂದ ಅವರು ಪಾಠ ಕಲಿತು ತನ್ನ ಮಿತಿಯನ್ನು ಅರಿತುಕೊಂಡಿದ್ದಾರೆ.

 ಕೇಜ್ರೀವಾಲ್ ಜನತೆಗೆ ನೀಡುತ್ತಿರುವ ಉಚಿತ ಸೇವೆಗಳನ್ನು ಟೀಕಿಸುತ್ತಿರುವ ಬಿಜೆಪಿಯೂ ಈ ಹಿಂದಿನ ಚುನಾವಣೆಯಲ್ಲಿ ದೇಶದ ಪ್ರತೀ ಪ್ರಜೆಯ ಖಾತೆಗೂ 15 ಲಕ್ಷ ರೂ. ಜಮೆ ಮಾಡುವ ಭರವಸೆ ನೀಡಿತ್ತು. ಇದು ಭರವಸೆಯಾಗಿಯೇ ಉಳಿದಿದೆ. ಆದರೆ ಉತ್ತಮ ಶಿಕ್ಷಣ ವ್ಯವಸ್ಥೆ, ಆರೋಗ್ಯ ಸೇವೆ, ವಿದ್ಯುತ್, ನೀರು, ಅಗತ್ಯವಿದ್ದವರಿಗೆ ವಸತಿ ಕಟ್ಟಿ ಕೊಡುವ ಭರವಸೆಯನ್ನು ಆಪ್ ಪಕ್ಷ ಈಡೇರಿಸಿದೆ. ಕಳೆದ 2 ವರ್ಷದಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿರುವುದನ್ನು ನೀವು(ಬಿಜೆಪಿಯವರು) ದೇಶಭಕ್ತಿ ಎನ್ನುತ್ತೀರಾ ಎಂದು ರಾವತ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News