ಯಮನ್: ವಾಯುದಾಳಿಯಲ್ಲಿ 30ಕ್ಕೂ ಅಧಿಕ ನಾಗರಿಕರ ಸಾವು?

Update: 2020-02-16 16:28 GMT
ಸಾಂದರ್ಭಿಕ ಚಿತ್ರ

 ಸಾನಾ,ಫೆ.16: ಭೀಕರ ಅಂತರ್ಯದ್ಧಕ್ಕೆ ಸಾಕ್ಷಿಯಾಗಿರುವ ಯಮನ್‌ನ ಉತ್ತರ ಪ್ರಾಂತ ಪರ್ವತಾವೃತ ಪ್ರದೇಶಗಳಲ್ಲಿ ಶನಿವಾರ ಸೌದಿ ನೇತೃತ್ವದಲ್ಲಿ ನಡೆದ ವಾಯುದಾಳಿಯಲ್ಲಿ 30ಕ್ಕೂ ಅಧಿಕ ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯ ಮಾನವೀಯ ನೆರವಿನ ಕಾರ್ಯಾಚರಣೆಗಳ ವರಿಷ್ಠರು ತಿಳಿಸಿದ್ದಾರೆ ಹಾಗೂ ಈ ದಾಳಿಯು ಅತ್ಯಂತ ಆಘಾತಕಾರಿಯೆಂದು ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

  ಯೆಮೆನ್ ಜಾವಫ್ ಪ್ರಾಂತದಲ್ಲಿ ಮೈತ್ರಿಪಡೆಗಳ ಯುದ್ಧವಿಮಾನವನ್ನು ತಾವು ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಸೌದಿ ನೇತೃತ್ವದ ಮೈತ್ರಿಪಡೆಯು ಪ್ರತೀಕಾರಾತ್ಮಕ ವಾಯುದಾಳಿಗಳನ್ನು ನಡೆಸುತ್ತಿದೆಯೆಂದು ಯೆಮನ್‌ನ ಹುದಿ ಬಂಡುಕೋರರು ಆರೋಪಿಸಿದ್ದಾರೆ.

 ಉತ್ತರ ಯೆಮನ್‌ನ ಅಲ್ ಮಸ್ಲುಬ್ ಜಿಲ್ಲೆಯಲ್ಲಿ ನಡೆದ ವಾಯುದಾಳಿಯಲ್ಲಿ ಕನಿಷ್ಠ 31 ನಾಗರಿಕರು ಮೃತಪಟ್ಟಿದ್ದು, ಇತರ 12 ಮಂದಿ ಗಾಯಗೊಂಡಿದ್ದಾರೆಂದು ಯಮನ್‌ಗಾಗಿನ ವಿಶ್ವಸಂಸ್ಥೆಯ ಸಮನ್ವಯಕಾರರಾದ ಲೈಸ್ ಗ್ರಾಂಡೆ ತಿಳಿಸಿದ್ದಾರೆ.

  ಈ ಮಧ್ಯೆ ಯೆಮನ್‌ನಲ್ಲಿನ ಸೌದಿ ನೇತೃತ್ವದ ಮಿತ್ರಪಡೆಗಳ ವಕ್ತಾರರಾದ ಕ. ತುರ್ಕಿ ಅಲ್ ಮಾಲಿಕಿ ಹೇಳಿಕೆಯೊಂದನ್ನು ನೀಡಿ, ಆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ‘ ಭಾರೀ ಹಾನಿ’ ಆಗಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ.

  ಹುತಿ ಬಂಡುಕೋರರು ಕಳೆದ ಶುಕ್ರವಾರ ಯೆಮೆನ್‌ನ ಸರಕಾರಿ ಪಡೆಗಳಿಗೆ ವೈಮಾನಿಕ ನೆರವು ನೀಡುತ್ತಿದ್ದ ಸೌದಿ ಆರೇಬಿಯದ ಟೊರ್ನಾಡೊ ವಿಮಾನವನ್ನು ಹೊಡೆದುರುಳಿಸಿದ್ದರು. ಆದಾಗ್ಯೂ ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಚ್ಯೂಟ್ ಮೂಲಕ ಸುರಕ್ಷಿತವಾಗಿ ಜಿಗಿಯುವಲ್ಲಿ ಸಫಲರಾಗಿದ್ದರು. ಈ ಪೈಲಟ್‌ಗಳ ಮೇಲೆ ಹುದಿ ಬಂಡುಕೋರರು ಗುಂಡಿನ ದಾಳಿ ನಡೆಸಿದ್ದರೆಂದು ಸೌದಿ ಆರೇಬಿಯ ಆರೋಪಿಸಿದೆ. ಈ ಪೈಲಟ್‌ಗಳ ಪ್ರಾಣ ಹಾಗೂ ಸುರಕ್ಷತೆಗೆ ಹುದಿ ಬಂಡುಕೋರರು ಹೊಣೆಗಾರರಾಗುತ್ತಾರೆಂದು ಕ. ತುರ್ಕ್ ಅಲಿ ಮಲಿಕಿ ಎಚ್ಚರಿಕೆ ನೀಡಿದ್ದಾರೆಂದು ಸೌದಿ ಆರೇಬಿಯದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News