ರಣಜಿ ಟ್ರೋಫಿ: ಫೆ.20ರಿಂದ ಕ್ವಾರ್ಟರ್ ಫೈನಲ್

Update: 2020-02-17 03:31 GMT

ಮುಂಬೈ, ಫೆ.16: ಈ ಸಾಲಿನ ರಣಜಿ ಟ್ರೋಫಿಯ ಲೀಗ್ ಹಂತಗಳ ಪಂದ್ಯಗಳು ಮುಗಿದಿವೆ. ಇನ್ನೂ ನಾಕೌಟ್ ಹಂತ ಪ್ರಾರಂಭವಾಗಿದೆ. ಇನ್ನು ನಡೆಯುವ ಪಂದ್ಯಗಳ ಅವಧಿ ಐದು ದಿನಗಳಾಗಿರುತ್ತದೆ.

   ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಗಳು ಫೆ.20ರಿಂದ 24ರ ತನಕ ವಲ್ಸಾದ್, ಕಟಕ್, ಜಮ್ಮು ಮತ್ತು ಒಂಗೋಲ್‌ನಲ್ಲಿ ನಡೆಯಲಿವೆೆ.

  ರಣಜಿ ಟ್ರೋಫಿಯಲ್ಲಿ ಒಂಬತ್ತು ಸುತ್ತಿನ ಬಳಿಕ ಕ್ವಾರ್ಟರ್ ಫೈನಲ್ ಶ್ರೇಣಿಯನ್ನು ನಿರ್ಧರಿಸಲಾಗಿದೆ. ಎ ಮತ್ತು ಬಿ ಗುಂಪುಗಳ ಅಗ್ರ ತಂಡವಾಗಿ ಗುಜರಾತ್ ಮುಂದಿನ ಸುತ್ತಿಗೆ ಪ್ರವೇಶಿಸಿದರೆ, ಬಂಗಾಳ, ಕರ್ನಾಟಕ, ಸೌರಾಷ್ಟ್ರ, ಆಂಧ್ರ, ಜಮ್ಮು ಮತ್ತು ಕಾಶ್ಮೀರ, ಒಡಿಶಾ ಮತ್ತು ಗೋವಾ ನಂತರ ಪ್ರವೇಶಿಸಿದ ತಂಡಗಳಾಗಿವೆ.

ದೇಶೀಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಮುಂಬೈ ಎರಡು ಋತುಗಳಲ್ಲಿ ಎರಡನೇ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿದೆ ಮತ್ತು ಹಾಲಿ ಚಾಂಪಿಯನ್ ವಿದರ್ಭ ಈಗಾಗಲೇ ಗ್ರೂಪ್ ಹಂತದಲ್ಲೇ ನಿರ್ಗಮಿಸಿದೆ.

ಹೈದರಾಬಾದ್ ಮತ್ತು ಉತ್ತರಾಖಂಡ ತಂಡ ಮುಗ್ಗರಿಸಿವೆೆ. ಪಂಜಾಬ್ ಮತ್ತು ಹರ್ಯಾಣ ಕ್ವಾರ್ಟರ್ ಫೈನಲ್ ಸ್ಥಾನ ಗಿಟ್ಟಿಸಲು ವಿಫಲವಾಗಿವೆೆ.

 ಕ್ವಾರ್ಟರ್ ಫೈನಲ್‌ಗಳಿಗೆ ವಿವಿಧ ತಂಡಗಳು ಸಾಗಿ ಬಂದ ಹಾದಿ ಇಂತಿವೆ.

1. ಗುಜರಾತ್

       ಗುಜರಾತ್ ರಣಜಿ ಟ್ರೋಫಿಯ ಲೀಗ್ ಸುತ್ತಿನಲ್ಲಿ ಎಂಟು ಪಂದ್ಯಗಳಲ್ಲಿ ಐದರಲ್ಲಿ ಜಯಗಳಿಸಿದೆ. ಸೂರತ್‌ನಲ್ಲಿ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ ಜಯ ಗಳಿಸುವ ಮೂಲಕ ಅಭಿಯಾನ ಆರಂಭಿಸಿತ್ತು. ಅಂತಿಮ ಸುತ್ತಿನಲ್ಲಿ ಆಂಧ್ರ ವಿರುದ್ಧ ಜಯ ಗಳಿಸುವ ಮೂಲಕ ತನ್ನ ಐದನೇ ಗೆಲುವನ್ನು ದಾಖಲಿಸಿತು.

  ಆದಾಗ್ಯೂ ಅಂತಿಮ ಸುತ್ತಿನ ಹೊತ್ತಿಗೆ ಗುಜರಾತ್ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು,. ಕೊನೆಯ ಪಂದ್ಯದಲ್ಲಿ ಗೆಲುವು ಗುಜರಾತನ್ನು ಅಗ್ರ ಸ್ಥಾನಕ್ಕೆ ಏರಿಸಲು ನೆರವಾಯಿತು.

 ವಲ್ಸಾದ್‌ನಲ್ಲಿ ಪಂಜಾಬ್‌ನ್ನು ಸೋಲಿಸಿತು, ಭಾರ್ಗವ್ ಮೆರೈ ಅವರ ಬ್ಯಾಟಿಂಗ್ ಮತ್ತು ಬೌಲರ್ ಅರ್ಜನ್ ನಾಗ್ವಾಸ್ವಾಲಾ ಬೌಲಿಂಗ್‌ನಲ್ಲಿ ಗಮನಾರ್ಹ ಕೊಡುಗೆಯಿಂದ ಗುಜರಾತ್‌ಗೆ ಗೆಲುವು ಸಾಧ್ಯವಾಯಿತು. ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು. ದಿಲ್ಲಿ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಅದರ ಲಾಭ ಪಡೆಯಿತು. ಮೆರೈ (487 ) ತಂಡದ ಪರ ಗರಿಷ್ಠ ಸ್ಕೋರರ್ ಮತ್ತು ಎಡಗೈ ಸೀಮರ್ ರೂಶ್ ಕಲಾರಿಯಾ ಗರಿಷ್ಠ ವಿಕೆಟ್ (30) ಗಳಿಸಿದರು.

2. ಬಂಗಾಳ

  ಬಂಗಾಳದ ನಾಯಕ ಮನೋಜ್ ತಿವಾರಿ ಮತ್ತು ಎಡಗೈ ಸ್ಪಿನ್ನರ್ ಶಹಬಾಝ್ ಅಹ್ಮದ್ ಅವರು ಬಂಗಾಳದ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಎ ಮತ್ತು ಬಿ ಗುಂಪುಗಳ ತಂಡಗಳಿಗೆ ಸಂಯೋಜಿತ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.

 ತಿವಾರಿ ಎಂಟು ಪಂದ್ಯಗಳಲ್ಲಿ 641 ರನ್ ಗಳಿಸಿದ್ದಾರೆ ಮತ್ತು ಇದುವರೆಗೆ ಸ್ಪರ್ಧೆಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ 18 ನೇ ಸ್ಥಾನದಲ್ಲಿದ್ದಾರೆ.

    ಥುಂಬಾದಲ್ಲಿ ನಡೆದ ಕಡಿಮೆ ಸ್ಕೋರಿಂಗ್‌ನ ಪಂದ್ಯದಲ್ಲಿ ಕೇರಳ ವಿರುದ್ಧ ಜಯಗಳಿಸಿ ತಂಡವು ತನ್ನ ಅಭಿಯಾನವನ್ನು ಪ್ರಾರಂಭಿಸಿತು. ಬಂಗಾಳ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು. ಎರಡೂ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಮೂಲಕ ಮೂರು ಅಂಕಗಳನ್ನು ಗಳಿಸಿತು.

   ಜನವರಿ ಎರಡನೇ ವಾರದಲ್ಲಿ ವಿದರ್ಭ ವಿರುದ್ಧ 9 ವಿಕೆಟ್‌ಗಳ ಸೋಲು ಅನುಭವಿಸಿತು. ಹೈದರಾಬಾದ್ ವಿರುದ್ಧ ಇನಿಂಗ್ಸ್ ಗೆಲುವಿನೊಂದಿಗೆ ಚೇತರಿಸಿಕೊಂಡಿತು.ರಾಜಸ್ಥಾನ ವಿರುದ್ಧ ಸರಳ ಗೆಲುವು ಮತ್ತು ಅಂತಿಮ ಸುತ್ತಿನಲ್ಲಿ ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ರಣಜಿ ಟ್ರೋಫಿಯ ಮೊದಲ ಹಂತವನ್ನು ಪೂರ್ಣಗೊಳಿಸಿತು.

 ವಿಶೇಷವೆಂದರೆ, ಆರಂಭಿಕ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ಅವರ ಫಾರ್ಮ್‌ನ ಹೊರತಾಗಿಯೂ ತಂಡದ ಯಶಸ್ಸು ಗಳಿಸಿದೆ.

3. ಕರ್ನಾಟಕ

 ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ವಿರುದ್ಧ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸುವುದರೊಂದಿಗೆ ಕರ್ನಾಟಕದ ಅಭಿಯಾನ ಆರಂಭಗೊಂಡಿತು. ಮುಂಬೈ ವಿರುದ್ಧ ಜನವರಿಯಲ್ಲಿ ತನ್ನ ಮೊದಲ ಜಯವನ್ನು ದಾಖಲಿಸಿತು.

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಹಣಾಹಣಿಯಲ್ಲಿ ಆತಿಥೇಯ ತಂಡವನ್ನು 149 ರನ್‌ಗಳಿಗೆ ಆಲೌಟ್ ಮಾಡಿತು. ಮೂವರು ಬೌಲರ್‌ಗಳಾದ ಎ. ಮಿಥುನ್, ವಿ . ಕೌಶಿಕ್ ಮತ್ತು ಪ್ರತೀಕ್ ಜೈನ್ ಅವರು ಮುಂಬೈ ಕ್ವಾರ್ಟರ್ ಫೈನಲ್ ಹಾದಿಯನ್ನು ಕೊನೆಗೊಳಿಸಿದರು. ಇದು ಸೌರಾಷ್ಟ್ರ ವಿರುದ್ಧ ಹಿನ್ನಡೆ ಅನುಭವಿಸಿದರೂ, ರೈಲ್ವೆ ವಿರುದ್ಧದ ಗೆಲುವಿನೊಂದಿಗೆ ಅದು ಶೀಘ್ರವಾಗಿ ಚೇತರಿಸಿಕೊಂಡಿತು. ಎಂಟನೇ ಸುತ್ತಿನಲ್ಲಿ ಬರೋಡಾ ವಿರುದ್ಧ ಗೆಲುವು ತಂಡಕ್ಕೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನವನ್ನು ನೀಡಿತು.

  ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ 547 ರನ್ ಗಳಿಸಿ ಕರ್ನಾಟಕದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಿಥುನ್ 27 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

4. ಸೌರಾಷ್ಟ್ರ

     ಭಾರತದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (509 ರನ್) ಮತ್ತು ನಾಯಕ ಮತ್ತು ಎಡಗೈ ಸೀಮರ್ ಜಯದೇವ್ ಉನಾದ್ಕಟ್ (51 ವಿಕೆಟ್) ಇವರ ನೆರವಿನಲ್ಲಿ ಸೌರಾಷ್ಟ್ರ ಲೀಗ್ ಹಂತದಲ್ಲಿ 31 ಪಾಯಿಂಟ್ ಪಡೆದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಿತು.

ಸೌರಾಷ್ಟ್ರ ಮೂರು ಗೆಲುವು ದಾಖಲಿಸಿದ್ದು ಐದನೇ ಸ್ಥಾನದಲ್ಲಿದೆ 27 ಅಂಕಗಳೊಂದಿಗೆ. ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ 27 ಪಾಯಿಂಟ್ ಪಡೆದ ಪಂಜಾಬ್ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಎಡವಿತು.

ಸೌರಾಷ್ಟ್ರವು ಕರ್ನಾಟಕ, ಮಧ್ಯಪ್ರದೇಶ, ಮುಂಬೈ ಮತ್ತು ತಮಿಳುನಾಡು ವಿರುದ್ಧ ಮುನ್ನಡೆ ಸಾಧಿಸಿ ನಿರ್ಣಾಯಕ ಅಂಕಗಳನ್ನು ಗಳಿಸಿವೆ.

5. ಆಂಧ್ರ

 ಆಂಧ್ರ ಉತ್ತಮ ಆರಂಭವನ್ನು ಹೊಂದಿದ್ದು, ಮೊದಲ ಐದು ಪಂದ್ಯಗಳಿಂದ ನಾಲ್ಕು ಜಯಗಳಿಸಿತು. ಹನುಮ ವಿಹಾರಿ ಒಳಗೊಂಡ ಉನ್ನತ ಮತ್ತು ಮಧ್ಯಮ ಕ್ರಮಾಂಕವು ಉಪಯುಕ್ತ ರನ್ ಗಳಿಸಿತು ಮತ್ತು ಸೀಮರ್‌ಗಳಾದ ಕೆ. ವಿ. ಶಶಿಕಾಂತ್ ಸಿ. ವಿ. ಸ್ಟೀಫನ್ ಮತ್ತು ಪಿ. ವಿಜಯ್ ಕುಮಾರ್ ಬೌಲಿಂಗ್‌ನಲ್ಲಿ ಯಶಸ್ವಿಯಾಗಿದ್ದಾರೆ.

ಅಂತಿಮ ಎರಡು ಸುತ್ತುಗಳಲ್ಲಿ ಪಂಜಾಬ್ ಮತ್ತು ಗುಜರಾತ್ ವಿರುದ್ಧ ಸೋಲು ಅನುಭವಿಸಿತು. ಭಾರತ ಎ ತಂಡದ ಪರ ಆಡುವುದಕ್ಕಾಗಿ ವಿಹಾರಿ ತಂಡದಿಂದ ದೂರ ಉಳಿದಿರುವುದು ಸೋಲಿಗೆ ಒಂದು ಕಾರಣವಾಗಿರಬಹುದು ಎಂದು ತಂಡದ ಮೂಲಗಳು ತಿಳಿಸಿವೆ. ಆದರೂ ಕೂಡಾ ಆರಂಭದಲ್ಲಿ ನೀಡಿದ ಪ್ರದರ್ಶನದ ಹಿನ್ನೆಲೆಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ಕಾಯ್ದುರಿಸುವಲ್ಲಿ ಯಶಸ್ವಿಯಾಗಿದೆ.

6. ಜಮ್ಮು ಮತ್ತು ಕಾಶ್ಮೀರ

 ಒಂಬತ್ತು ಪಂದ್ಯಗಳಿಂದ ಆರು ಜಯಗಳಿಸಿ ಜಮ್ಮು ಮತ್ತು ಕಾಶ್ಮೀರ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದು ಕೇವಲ ಒಂದು ಪಂದ್ಯವನ್ನು ಕಳೆದುಕೊಂಡಿತು . ಹರ್ಯಾಣ ವಿರುದ್ಧ, ಅಂತಿಮ ಸುತ್ತಿನ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಸೋಲು ಅನುಭವಿಸಿತು..

 ಅಬ್ದುಲ್ ಸಮದ್ ಮತ್ತು ಶುಭಮ್ ಖಾರ್ಜುರಿಯಾ ಇಬ್ಬರೂ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮಧ್ಯಮ ವೇಗಿ ಉಮರ್ ನಝೀರ್ ಕೂಡಾ ಮಿಂಚಿದರು. ಅವರು 28 ವಿಕೆಟ್ ಪಡೆದರು.

ಝಾರ್ಖಂಡ್ ವಿರುದ್ಧದ ಇನಿಂಗ್ಸ್ ಗೆಲುವು ಸೇರಿದಂತೆ ತನ್ನ ಮೊದಲ ಆರು ಪಂದ್ಯಗಳಿಂದ ಐದು ಗೆಲುವುಗಳನ್ನು ದಾಖಲಿಸಿತ್ತು.

7. ಒಡಿಶಾ

   ಒಡಿಶಾ ಗ್ರೂಪ್ ಸಿ ಯಲ್ಲಿ ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಳಿಸಿತು. ಐದು ಗೆಲುವು, ಎರಡು ಸೋಲು ಮತ್ತು ಎರಡು ಡ್ರಾಗಳೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

  ನಾಕೌಟ್‌ಗಳ ಮುನ್ನ ಅಂತಿಮ ಸುತ್ತಿನಲ್ಲಿ ಒಡಿಶಾಕ್ಕೆ ಗೆಲುವಿನ ಅಗತ್ಯವಿತ್ತು, ಆದರೆ ಛತ್ತೀಸ್‌ಗಡದ ವಿರುದ್ಧ ಸ್ಪರ್ಧೆಯಲ್ಲಿ ಮೂರು ಅಂಕಗಳನ್ನು ಗಳಿಸಿತು.ಸೀಮರ್‌ಗಳಾದ ಸೂರ್ಯಕಾಂತ್ ಪ್ರಧಾನ್, ರಾಜೇಶ್ ಮೊಹಂತಿ ಮತ್ತು ಬಸಂತ್ ಮೊಹಂತಿ ಅವರು ಒಡಿಶಾ ಪರ ಬೌಲಿಂಗ್‌ನಲ್ಲಿ ಮಿಂಚಿದರು. ತಂಡಕ್ಕೆ ಯಶಸ್ಸು ತಂದುಕೊಟ್ಟರು. ಪ್ರತಿಯೊಬ್ಬರೂ 30ಕ್ಕಿಂತ ಹೆಚ್ಚು ವಿಕೆಟ್ ಪಡೆದರು.

8. ಗೋವಾ

 ಪ್ಲೇಟ್ ಗ್ರೂಪ್‌ನಲ್ಲಿ ಗೋವಾ ಅಗ್ರಸ್ಥಾನದಲ್ಲಿದ್ದು 40ಅಂಕಗಳೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸಿಕ್ಕಿಂ (ಒಂಬತ್ತು ವಿಕೆಟ್), ಮೇಘಾಲಯ (ಇನಿಂಗ್ಸ್ ಮತ್ತು ಎಂಟು ರನ್), ಮಣಿಪುರ (ಇನಿಂಗ್ಸ್ ಮತ್ತು 359 ರನ್), ಪುದುಚೇರಿ (81 ರನ್), ಅರುಣಾಚಲ ಪ್ರದೇಶ (ಇನಿಂಗ್ಸ್ ಮತ್ತು 336 ರನ್), ನಾಗಾಲ್ಯಾಂಡ್ (229 ರನ್) ಮತ್ತು ಮಿಜೋರಾಂ (ಇನಿಂಗ್ಸ್ ಮತ್ತು 211 ರನ್‌ಗಳ) ವಿರುದ್ಧ ಜಯ ಗಳಿಸಿತ್ತು.

ರನ್ ಮತ್ತು ವಿಕೆಟ್ ಎರಡರಲ್ಲೂ ಸಾಕಷ್ಟು ಆಟಗಾರರು ಯಶಸ್ಸು ಗಳಿಸಿದ್ದಾರೆ. ಅಮಿತ್ ವರ್ಮಾ (791 ರನ್ ಮತ್ತು 41 ವಿಕೆಟ್) ತಂಡದ ಯಶಸ್ಸಿನ ರೂವಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News