'ಬಡತನವನ್ನು ಅಡಗಿಸಿಡಿ': ಟ್ರಂಪ್ ಭೇಟಿ ವೇಳೆ ಕೊಳಗೇರಿ ಕಾಣದಂತೆ ಗೋಡೆ ನಿರ್ಮಾಣ ಟೀಕಿಸಿದ ಶಿವಸೇನೆ

Update: 2020-02-17 10:58 GMT

ಮುಂಬೈ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಅಹ್ಮದಾಬಾದ್‍ ಗೆ ಭೇಟಿ ನೀಡುವ ವೇಳೆ 'ಬಡ ಜನರ ಮನೆಗಳನ್ನು ಅಡಗಿಸಲು ಹಾಗೂ ದಾರಿದ್ರ್ಯವನ್ನು ತೋರ್ಪಡಿಸದೇ ಇರಲು' ಗೋಡೆಯನ್ನು ನಿರ್ಮಿಸುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಶಿವಸೇನೆ ಟೀಕಿಸಿದೆ.

"ಗರೀಬಿ ಹಠಾವೋ ಘೋಷಣೆಯನ್ನು ಟೀಕಿಸಿದ ಸಮಯವೊಂದಿತ್ತು. ಆದರೆ ಈಗ ಗರೀಬಿ ಚುಪಾವೋ ಹೊಸ ಅಜೆಂಡಾ ಆಗಿರುವಂತೆ ಕಾಣಿಸುತ್ತದೆ'' ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ  ಬರೆದಿದೆ.

ಟ್ರಂಪ್ ಸ್ವಾಗತಕ್ಕೆ ಗುಜರಾತ್‍ನಲ್ಲಿ ನಡೆಯುತ್ತಿರುವ ತಯಾರಿಯನ್ನೂ ಟೀಕಿಸಿದ ಸಾಮ್ನಾ, ದೇಶ ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಭೇಟಿ ನೀಡುತ್ತಿದ್ದ ಮಹಾರಾಜ ಅಥವಾ ರಾಣಿಯನ್ನು ಸ್ವಾಗತಿಸಲು ಆಗಾಗ ನಡೆಸಲಾಗುತ್ತಿದ್ದ ತಯಾರಿಯಂತೆ ಇದು ಭಾರತದ ಗುಲಾಮಗಿರಿಯ ಮನಸ್ಥಿತಿಯನ್ನು ನೆನಪಿಸುತ್ತದೆ" ಎಂದು ಹೇಳಿದೆ.

``ಟ್ರಂಪ್ ಅವರ ಭೇಟಿಯ ಅವಧಿ ಮೂರು ಗಂಟೆಗಳು, ಆದರೆ ಅದಕ್ಕಾಗಿ ಅಹ್ಮದಾಬಾದ್‍ ನಲ್ಲಿ 17 ರಸ್ತೆಗಳ ನಿರ್ಮಾಣ ಹಾಗೂ ಈ ರಸ್ತೆಗಳಲ್ಲಿ ಗೋಡೆಗಳ ನಿರ್ಮಾಣ ಸಹಿತ ತಯಾರಿ ದೇಶದ ಬೊಕ್ಕಸಕ್ಕೆ  100 ಕೋಟಿ ರೂ. ನಷ್ಟವುಂಟು ಮಾಡುತ್ತಿದೆ'' ಎಂದೂ ಸಾಮ್ನಾ ಹೇಳಿದೆ.

 "ಟ್ರಂಪ್ ಅಥವಾ ಅಮೆರಿಕಾ ಈ ವೆಚ್ಚಗಳನ್ನು ಭರಿಸುತ್ತಾರೆಯೇ, ಟ್ರಂಪ್ ಭೇಟಿಯಿಂದ ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯುವುದು ಸಾಧ್ಯವಿಲ್ಲ ಯಾ ಬಡತನ ಅಂತ್ಯವಾಗುವುದಿಲ್ಲ'' ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.

"ನರೇಂದ್ರ ಮೋದಿ ಅಭಿವೃದ್ಧಿಯನ್ನು ಅತ್ಯಂತ ಹೆಚ್ಚು ಪ್ರೋತ್ಸಾಹಿಸುತ್ತಾರೆ, ಅವರಿಗಿಂತ ಮೊದಲು ಯಾರೂ ದೇಶವನ್ನು ಅಭಿವೃದ್ಧಿಪಡಿಸಿಲ್ಲ. ಅವರ ನಂತರವೂ ಯಾರೂ ಇಷ್ಟು ಅಭಿವೃದ್ಧಿಪಡಿಸುವುದಿಲ್ಲ,  ಅವರು ಗುಜರಾತ್‍ ನಲ್ಲಿ 15 ವರ್ಷ ಸಿಎಂ ಆಗಿ ಹಾಗೂ ಐದು ವರ್ಷದಿಂದ ಪ್ರಧಾನಿಯಾಗಿರುವಾಗ  ಬಡತನವನ್ನು ಅಡಗಿಸುವಂತಹ ಅಗತ್ಯವೇಕೆ ಬಂದಿದೆ?'' ಎಂದು ಶಿವಸೇನೆ ಪ್ರಧಾನಿಯನ್ನು ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News