ಸಿಎಎ ವಿರೋಧಿ ಜಾಥಾಕ್ಕೆ ಮುಂದಾಗಿದ್ದ ‘ಮ್ಯಾಗ್ಸೆಸೆ ಪ್ರಶಸ್ತಿ’ ಪುರಸ್ಕೃತ ಸಂದೀಪ್ ಪಾಂಡೆ ಬಂಧನ

Update: 2020-02-17 14:54 GMT

ಲಕ್ನೋ,ಫೆ.17: ಸೋಮವಾರ ಇಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟನಾ ಜಾಥಾ ನಡೆಸಲು ಮುಂದಾಗಿದ್ದ ‘ಮ್ಯಾಗ್ಸೆಸೆ’ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಂಡೆ ಮತ್ತು ಇತರ ಒಂಭತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೆ ಪೌರತ್ವ ಕಾಯ್ದೆಯ ಕಟು ಟೀಕಾಕಾರರಾಗಿದ್ದಾರೆ.

ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ಪಾಂಡೆ ಮತ್ತು ಇತರರ ವಿರುದ್ಧ ಇಲ್ಲಿಯ ಠಾಕೂರಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಕಳೆದ ಎರಡು ತಿಂಗಳಲ್ಲಿ ಸಿಎಎ ವಿರುದ್ಧ ಹಲವಾರು ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಲಕ್ನೋ ಕ್ಲಾಕ್ ಟವರ್ ಬಳಿಯಿಂದ ಪಾಂಡೆ ಅವರನ್ನು ಬಂಧಿಸಲಾಗಿದೆ. ಸಿಎಎ ಅನ್ನು ಟೀಕಿಸಿ ಕರಪತ್ರಗಳನ್ನು ಹಂಚಿದ ಆರೋಪವನ್ನೂ ಪಾಂಡೆ ಮತ್ತು ಸಂಗಡಿಗರ ವಿರುದ್ಧ ಹೊರಿಸಲಾಗಿದೆ.

ಜ.19ರಂದು ಅಲಿಗಡ ಮುಸ್ಲಿಮ್ ವಿವಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದ ಸಂದರ್ಭದಲ್ಲಿ ವಿ.ಡಿ.ಸಾವರ್ಕರ್ ಅವರ ವಿರುದ್ಧ ‘ಅನುಚಿತ ’ಟೀಕೆಗಳನ್ನು ಮಾಡಿದ್ದ ಆರೋಪದಲ್ಲಿ ಪಾಂಡೆ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಬನಾರಸ ಹಿಂದು ವಿವಿ ಮತ್ತು ಕ್ಯಾಲಿಫೋರ್ನಿಯಾ ವಿವಿಯ ಹಳೆಯ ವಿದ್ಯಾರ್ಥಿಯಾಗಿರುವ ಪಾಂಡೆ 2002ರಲ್ಲಿ ಉದಯೋನ್ಮುಖ ನಾಯಕತ್ವ ವಿಭಾಗದಲ್ಲಿ ‘ರೇಮನ್ ಮ್ಯಾಗ್ಸೆಸೆ’ ಪ್ರಶಸ್ತಿಗೆ ಭಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News